ರಚಿತಾ ರಾಮ್, ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಸಂಜು ವೆಡ್ಸ್ ಗೀತಾ-2’ ಕಳೆದ ವಾರವೇ ತೆರೆಗೆ ಬರಬೇಕಿತ್ತು. ಕೊನೆ ಕ್ಷಣದಲ್ಲಿನ ಮುಂದೂಡಲಾಗಿದ್ದ ಚಿತ್ರ ಇಂದು (ಜ.17) ತೆರೆ ಕಾಣುತ್ತಿದೆ.
‘ನಾನು ಈ ಸಿನಿಮಾ ಮಾಡಬೇಕೆಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಂಡೆ. ಒಟ್ಟು ಆರು ಹಾಡುಗಳು ಚಿತ್ರದಲ್ಲಿದ್ದು, ಇವೇ ಚಿತ್ರಕ್ಕೆ ಆಹ್ವಾನ ಪತ್ರಿಕೆ. ರೇಷ್ಮೆ ಬೆಳೆಗಾರರ ಸಂಕಷ್ಟದ ಜೊತೆಗೆ ನವಿರಾದ ಪ್ರೇಮಕಥೆಯ ಚಿತ್ರವಿದು. ಕಿಟ್ಟಿ, ರಮ್ಯಾ ಜೋಡಿಯ ‘ಸಂಜು ವೆಡ್ಸ್ ಗೀತಾ’ ಹಿಟ್ ಆಗಿತ್ತು. ಅದೇ ರೀತಿ ಈ ಚಿತ್ರವನ್ನು ಜನ ಮೆಚ್ಚಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ನಮ್ಮ ನೆಲದ ಸೊಗಡಿನ ಚಿತ್ರ’ ಎನ್ನುತ್ತಾರೆ ನಾಗಶೇಖರ್.
ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಚಿತ್ರಕ್ಕಿದೆ. ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್, ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.
ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿದ್ದಾರೆ.
ಕಣ್ಣಾ ಮುಚ್ಚೆ ಕಾಡೇ ಗೂಡೇ:
ರಾಘವೇಂದ್ರ ರಾಜಕುಮಾರ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’. ಡಾರ್ಲಿಂಗ್ ಪ್ರೊಡಕ್ಷನ್ಸ್ ಅಡಿಯಲ್ಲಿ ಅನಿತಾ ವೀರೇಶ್‌ಕುಮಾರ್ ನಿರ್ಮಾಣ ಮಾಡಿದ್ದು, ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ಅನುಭವ ಪಡೆದುಕೊಂಡಿರುವ ನಟರಾಜ್ ಕೃಷ್ಣೇಗೌಡ ಚಿತ್ರಕ್ಕೆ ಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಕತೆ ಒಂದು ಕೊಲೆಯ ಸುತ್ತ ನಡೆಯುತ್ತದೆ. ಅದನ್ನು ಕಂಡು ಹಿಡಿಯಲು ಖಾಸಗಿ, ಸರ್ಕಾರಿ ಪಡೆ ಮುಂದೆ ಬರುತ್ತದೆ. ಇದರ ಮಧ್ಯೆ ಹುಡುಗಿಯೊಬ್ಬಳು ಸಮಸ್ಯೆಯಲ್ಲಿ ಸಿಲುಕಿಕೊಳ್ಳುತ್ತಾಳೆ. ಅಂತಿಮವಾಗಿ ಅಪರಾಧಿ ಸಿಗುತ್ತಾನಾ? ಆಕೆ ಕಷ್ಟದಿಂದ ಹೊರ ಬರುತ್ತಾಳಾ? ಎಂಬುದನ್ನು ಸಸ್ಪೆನ್ಸ್, ಥ್ರಿಲ್ಲರ್ ರೀತಿಯಲ್ಲಿ ತೋರಿಸಿದ್ದೇವೆ’ ಎಂದಿದ್ದಾರೆ ನಿರ್ದೇಶಕರು.
ಅಥರ್ವಪ್ರಕಾಶ್‌ಗೆ ಪ್ರಾರ್ಥನಾ ಜೋಡಿಯಾಗಿದ್ದಾರೆ. ನಿವೃತ್ತ ವೈದ್ಯರಾಗಿ ರಾಘವೇಂದ್ರ ರಾಜ್‌ಕುಮಾರ್ ನಟಿಸಿದ್ದಾರೆ. ಜ್ಯೋತಿಷ್ ಶೆಟ್ಟಿ, ದೀಪಕ್ ರೈ, ಅರವಿಂದ ಬೋಳಾರ್ ಮುಂತಾದವರು ಅಭಿನಯಿಸಿದ್ದಾರೆ. ದೀಪಕ್‌ಕುಮಾರ್.ಜೆ.ಕೆ ಛಾಯಾಚಿತ್ರಗ್ರಹಣವಿದೆ. ಮಂಗಳೂರು, ಬೆಂಗಳೂರಿನ ಹಲವೆಡೆ ಚಿತ್ರೀಕರಣಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.