ಪ್ರಿಯಾ ಕುಮಾರ್ ಬರೆದ ಕಾದಂಬರಿ ‘ಐ ವಿಲ್ ಗೊ ವಿತ್ ಯು: ದಿ ಫ್ಲೈಟ್ ಆಫ್ ಎ ಲೈಫ್‌ಟೈಮ್’ ಆಧರಿಸಿದ ವೆಬ್ ಸರಣಿ ‘ದಿ ಫೈನಲ್ ಕಾಲ್’. ಅರ್ಜುನ್ ರಾಮ್‌ಪಾಲ್ ಅಭಿನಯದ ಈ ವೆಬ್ ಸರಣಿ ಫೆಬ್ರುವರಿ 22ರಂದು ‘ಜೀ5’ ಆ್ಯಪ್ ಮೂಲಕ ಪ್ರಸಾರವಾಗಿದೆ. ಇದರ ನಿರ್ದೇಶನ ವಿಜಯ್ ಲಾಲ್ವಾನಿ ಅವರದ್ದು.
ನಾಲ್ಕು ಕಂತುಗಳ ಈ ವೆಬ್ ಸರಣಿಯಲ್ಲಿ ನಾಯಕನ ಪಾತ್ರ ನಿಭಾಯಿಸುವ ಮೂಲಕ ಅರ್ಜುನ್ ಅವರು ವೆಬ್ ಆಧಾರಿತ ಧಾರಾವಾಹಿ ಲೋಕ ಪ್ರವೇಶ ಮಾಡಿದ್ದಾರೆ. ಇದರಲ್ಲಿ ಅವರದ್ದು ಪ್ರಯಾಣಿಕ ವಿಮಾನದ ಪೈಲಟ್‌ನ ಪಾತ್ರ. ಮುಂಬೈನಿಂದ ಸಿಡ್ನಿಗೆ ತೆರಳುವ ವಿಮಾನದಲ್ಲಿ ನಡೆಯುವ ಕಥೆ ಇದರಲ್ಲಿದೆ. ವೆಬ್ ಸರಣಿಯ ಇನ್ನಷ್ಟು ಮಾಹಿತಿ ಓದುವ ಮೊದಲು ಪ್ರಿಯಾ ಅವರ ಕಾದಂಬರಿಯಲ್ಲಿ ಏನಿತ್ತು ಎಂಬುದನ್ನು ಚುಟುಕಾಗಿ ನೋಡಬಹುದು.
‘ಅಂದಾಜು ಮುನ್ನೂರು ಜನರನ್ನು ಹೊತ್ತು ಸಾಗುತ್ತಿರುವ ವಿಮಾನದ ಪೈಲಟ್, ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸುತ್ತಾನೆ. ಆದರೆ, ಆಕಾಶದ ಮಧ್ಯದಲ್ಲೇ ಆತ್ಮಹತ್ಯೆ ಮಾಡಿಕೊಳ್ಳಲು ಪೈಲಟ್ ನಿರ್ಧರಿಸಿದ್ದಾನೆ ಎಂಬುದು ಆ ವಿಮಾನದಲ್ಲಿರುವ ಪ್ರಯಾಣಿಕರಿಗೆ ಗೊತ್ತಿರುವುದಿಲ್ಲ. ವಿಮಾನ ಪ್ರಯಾಣಿಕರಲ್ಲಿ ಒಬ್ಬ ಜ್ಯೋತಿಷಿ ಇರುತ್ತಾನೆ. ಆತ ಸಹ ಪ್ರಯಾಣಿಕರ ಭವಿಷ್ಯ ನೋಡುತ್ತಿರುತ್ತಾನೆ. ಈ ಎಲ್ಲ ಪ್ರಯಾಣಿಕರ ಜಾತಕದಲ್ಲಿ ಜೀವಕ್ಕೆ ಅಪಾಯ ತರುವ ಸಮಾನ ಎಳೆಯೊಂದು ಇದೆ ಎಂಬುದು ಆತನಿಗೆ ಗೊತ್ತಾಗುತ್ತದೆ...’ ಇದು ಈ ವೆಬ್ ಸರಣಿಯ ಕಥಾಹಂದರ ಕೂಡ ಹೌದು.
ಈ ಸರಣಿಯಲ್ಲಿ ಅಭಿನಯಿಸುವ ಮೊದಲು ಅರ್ಜುನ್ ಅವರು ವಿಮಾನದ ಸಿಮ್ಯುಲೇಟರ್‌ನಲ್ಲಿ ಹಲವು ಬಾರಿ ತರಬೇತಿ ಪಡೆದಿದ್ದರಂತೆ.
ನಾಲ್ಕನೆಯ ಕಂತಿನ ಅಂತ್ಯದಲ್ಲಿ ಈ ವಿಮಾನವು ಗುಡುಗು ಮಿಂಚುಗಳನ್ನು ಮೈತುಂಬಿಕೊಂಡ ಮೋಡಗಳತ್ತ ಸಾಗುತ್ತದೆ. ಮುಂಬೈನ ವಿಮಾನ ಸಂಚಾರ ನಿಯಂತ್ರಣ ಕೊಠಡಿಯಲ್ಲಿ ಕುಳಿತು, ಪೈಲಟ್ ಜೊತೆ ಸಂಧಾನದ ಮಾತುಗಳನ್ನು ಆಡುತ್ತಿದ್ದ ಅಧಿಕಾರಿಗಳು ವಿಮಾನ ಸಾಗಿದ ದಿಕ್ಕು ಕಂಡು ಗರಬಡಿದವರಂತೆ ಕೂತುಬಿಡುತ್ತಾರೆ. ಅಂದರೆ, ಈ ವೆಬಿಸೋಡ್‌ನ ಇನ್ನೊಂದು ಕಂತು ಬರುವುದರ ಸೂಚನೆಯನ್ನು ನಿರ್ದೇಶಕರು ನೀಡಿದ್ದಾರೆ. ಮುಂದಿನ ಕಂತು ಮಾರ್ಚ್ 22ರಂದು ಪ್ರಸಾರ ಆಗುವ ಸಾಧ್ಯತೆ ಇದೆ.
ಹತ್ತು ಹಲವು ಫ್ಲ್ಯಾಷ್‌ಬ್ಯಾಕ್‌ಗಳು, ಅಧ್ಯಾತ್ಮದ ಕುರಿತ ಒಂದಿಷ್ಟು ಮಾತುಗಳು ಈ ಸರಣಿಯಲ್ಲಿ ಅಲ್ಲಲ್ಲಿ ಉಪ್ಪಿನಕಾಯಿಯಂತೆ ಸಿಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.