ADVERTISEMENT

ಬೆಂಗಳೂರು | ದೈವಕ್ಕೆ ಅಪಹಾಸ್ಯ: ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 29 ಜನವರಿ 2026, 0:18 IST
Last Updated 29 ಜನವರಿ 2026, 0:18 IST
ರಣವೀರ್ ಸಿಂಗ್
ರಣವೀರ್ ಸಿಂಗ್   

ಬೆಂಗಳೂರು: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ’ ಚಿತ್ರದಲ್ಲಿನ ‘ದೈವ’ ಸಂಪ್ರದಾಯವನ್ನು ಅಪಹಾಸ್ಯ ಮಾಡುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನ ಮೇರೆಗೆ ನಗರದ ಹೈಗ್ರೌಂಡ್ಸ್ ಪೊಲೀಸ್‌ ಠಾಣೆಯಲ್ಲಿ ಬುಧವಾರ ಎಫ್‌ಐಆರ್ ದಾಖಲಾಗಿದೆ.

ನಟನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಕೋರಿ ವಕೀಲ ಪ್ರಶಾಂತ್ ಮೆಥಲ್ ಎಂಬುವವರು ಡಿ.3ರಂದು ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಎನ್‌ಸಿಆರ್ ದಾಖಲಿಸಿಕೊಂಡಿದ್ದರು. ಈಗ ನ್ಯಾಯಾಲಯದ ಸೂಚನೆಯ ಮೇರೆಗೆ ಎಫ್‌ಐಆರ್ ದಾಖಲು ಮಾಡಿಕೊಂಡಿದ್ದಾರೆ. ರಣವೀರ್ ಸಿಂಗ್ ಅವರು ಹಿಂದೂಗಳು ಹಾಗೂ ಕರ್ನಾಟಕದ ತುಳು ಭಾಷಿಕರ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಯಿಂದ ನೋವು ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಗೋವಾದಲ್ಲಿ ನ.28ರಂದು ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್ ಅಪಹಾಸ್ಯ ಮಾಡಿದ್ದಾರೆ. ನಟನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‍ಎಸ್) ಸೆಕ್ಷನ್‌ಗಳಾದ 299, 302, 196, 352ರ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ದೂರಿನಲ್ಲಿ ಕೋರಿದ್ದರು.

ADVERTISEMENT

ನಟ ನೀಡಿದ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಬಳಿಕ ರಣವೀರ್ ಸಿಂಗ್ ಕ್ಷಮೆ ಕೋರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.