ADVERTISEMENT

‘ಫಾರ್ಚುನರ್‌‘ ಸಿನಿಮಾ ಜತೆಗೆ ಹಾಡಿನ ಪಯಣ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2018, 12:04 IST
Last Updated 29 ಆಗಸ್ಟ್ 2018, 12:04 IST
ಸ್ವಾತಿ ಶರ್ಮ
ಸ್ವಾತಿ ಶರ್ಮ   

‘ಈ ಚಿತ್ರದ ಹಾಡುಗಳನ್ನು ತುಂಬ ಚರ್ಚಿಸಿ ನಂತರ ಸಿದ್ಧಪಡಿಸಿದ್ದೇವೆ. ಮಜಾ ಕೊಡುವ ಹಾಡುಗಳಿಗಿಂತ ಸುಖ ಕೊಡುವ ಹಾಡುಗಳು ಬೇಕು ಎಂದು ಮೊದಲೇ ತೀರ್ಮಾನಿಸಿದ್ದೆವು’ ಎಂದರು ‘ಫಾರ್ಚುನರ್’ ಚಿತ್ರದ ನಿರ್ದೇಶಕ ಮಂಜುನಾಥ ಜೆ. ಅನಿವಾರ್ಯ. ತಮ್ಮ ಮಾತನ್ನು ಇಷ್ಟಕ್ಕೆ ನಿಲ್ಲಿಸದೆ ಸುಖ ಮಜಾ ಮತ್ತು ಸುಖದ ಅರ್ಥಗಳನ್ನು ವ್ಯಾಖ್ಯಾನಿಸಲೂ ಅವರು ಮುಂದಾದರು.

‘ಮೋಜಿಗಾಗಿ ಮದ್ಯ ಕುಡಿಯುವುದು ಮಜಾ. ಅದೇ ಹಸುವಿನ ಹಾಲು ಕುಡಿಯುವುದು ಸುಖ. ನಮ್ಮ ಹಾಡುಗಳೂ ಇಂಥ ಸುಖವನ್ನು ಕೊಡುತ್ತವೆ’ ಎನ್ನುವುದು ಅವರ ವ್ಯಾಖ್ಯಾನ.

‘ಫಾರ್ಚುನರ್’ ಎಂದಾಕ್ಷಣ ಅದ್ದೂರಿ ಕಾರು ನಮ್ಮ ಕಣ್ಮುಂದೆ ಬರುತ್ತದೆ. ಆದರೆ ಕಾರನ್ನು ಮೀರಿದ ಕಥೆ ಇದು ಎನ್ನುತ್ತಾರೆ ನಿರ್ದೇಶಕರು.

ADVERTISEMENT

ಮೊದಲು ಸಣ್ಣ ಬಜೆಟ್‌ನ ಸಿನಿಮಾ ಮಾಡಬೇಕು ಎಂದು ಹೊರಟಿದ್ದಂತೆ ಅವರು. ‘ಆದರೆ ನಮ್ಮ ತಂಡಕ್ಕೆ ಇದ್ದಕ್ಕಿದ್ದ ಹಾಗೆ ದಿಗಂತ್‌ ಸೇರಿಕೊಂಡರು. ನನ್ನ ಬಾಯಿಗೆ ಲಾಡು ಬಂದು ಬಾಯಿಗೆ ಬಿದ್ದಂಗೆ ಆಯ್ತು. ನಂತರ ಸೋನು ಗೌಡ ಬಂದು ಸೇರಿಕೊಂಡರು. ಆಗ ಎರಡನೇ ಲಾಡು ಬಂದು ಬಾಯಿಗೆ ಬಿದ್ದಂಗಾಯ್ತು’ ಎಂದು ತಮಾಷೆಯಾಗಿಯೇ ಚಿತ್ರತಂಡ ಬೆಳೆದುಬಂದದ್ದನ್ನು ನೆನಪಿಸಿಕೊಂಡರು ಮಂಜುನಾಥ.

‘ಈ ಸಿನಿಮಾದ ನಾಯಕ ಅದೃಷ್ಟಗಳ ಬೆನ್ನುಹತ್ತಿದವನು. ಆ ಅದೃಷ್ಟಗಳು ಅವನ ಕೈಹಿಡಿಯುತ್ತಿವೆಯೇ ಎನ್ನುವುದೇ ಈ ಚಿತ್ರದ ಕಥೆ’ ಎಂದು ಅವರು ವಿವರಿಸಿದರು.

ಪೂರ್ಣಚಂದ್ರ ತೇಜಸ್ವಿ ಈ ಚಿತ್ರದಲ್ಲಿನ ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಶಿಶುನಾಳ ಷರೀಪ, ಕೆ.ಎಸ್‌. ನರಸಿಂಹಸ್ವಾಮಿ ಪದ್ಯಗಳನ್ನು ಈ ಚಿತ್ರದಲ್ಲಿ ಹೊಸ ಟ್ಯೂನ್‌ನಲ್ಲಿ ಬಳಸಿಕೊಂಡಿದ್ದೇವೆ. ಹಾಗೆಯೆ ಹಲವು ಹೊಸಬರಿಂದಲೂ ಪದ್ಯಗಳನ್ನು ಬರೆಸಿದ್ದೇವೆ. ನನ್ನ ಸಿನಿಮಾ ಬದುಕಿನಲ್ಲಿ ಇದು ತುಂಬ ದಿನಗಳ ಕಾಲ ನೆನಪಿನಲ್ಲಿ ಉಳಿಯುವಂಥ ಚಿತ್ರ’ ಎಂದರು ಪೂರ್ಣಚಂದ್ರ.

‘ಈ ಚಿತ್ರದ ಒಂದೊಂದು ಡೈಲಾಗ್‌, ದೃಶ್ಯಗಳನ್ನು ಕೂಡ ಸಾಕಷ್ಟು ಚರ್ಚಿಸಿ ರೂಪಿಸಿದ್ದಾರೆ ನಿರ್ದೇಶಕರು. ಹಾಗಾಗಿಯೇ ಇಡೀ ಸಿನಿಮಾ ತುಂಬ ಚೆನ್ನಾಗಿಬಂದಿದೆ’ ಎಂದು ಖಷಿಯಿಂದ ಹೇಳಿಕೊಂಡರು‌ ದಿಗಂತ್‌.

ದಿಗಂತ್‌ ಜತೆಗೆ ಸೋನು ಗೌಡ ತೆರೆಯನ್ನು ಹಂಚಿಕೊಂಡಿದ್ದಾರೆ. ‘ತುಂಬ ಹಿಂದೆಯೇ ನಾನು ಮತ್ತು ದಿಗಂತ್‌ ಒಟ್ಟಿಗೆ ನಟಿಸಬೇಕಾಗಿತ್ತು. ಬೇರೆ ಬೇರೆ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಈಗ ಈ ಚಿತ್ರದ ಮೂಲಕ ಆ ಅವಕಾಶ ಬಂದಿದೆ. ಈ ಚಿತ್ರವನ್ನು ಒಪ್ಪಿಕೊಂಡ ಮೇಲೆ ನನ್ನ ಅದೃಷ್ಟವೂ ಬದಲಾಗಿದೆ. ಸಾಕಷ್ಟು ಸಿನಿಮಾ ಅವಕಾಶಗಳು ಬಂದಿವೆ. ನಾನು ಈ ಚಿತ್ರದಲ್ಲಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಬೋಲ್ಡ್‌ ಹುಡುಗಿಯ ಪಾತ್ರದಲ್ಲಿ ನಟಿಸಿದ್ದೇನೆ’ ಎಂದರು ಸೋನು.

ಸ್ವಾತಿ ಶರ್ಮ ಈ ಚಿತ್ರದಲ್ಲಿ ಉತ್ತರ ಕರ್ನಾಟಕದ ಹುಡುಗಿಯ ಪಾತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಭಾಷೆಯನ್ನು ಕಲಿಯಲು ಅವರಿಗೆ ಮೊದ ಮೊದಲು ತುಂಬ ಕಷ್ಟವಾಗಿತ್ತಂತೆ. ಚಿತ್ರತಂಡದ ಸಹಕಾರದಿಂದ ಕಲಿತುಕೊಂಡು ನಟಿಸಿದ್ದಾಗಿ ಸ್ವಾತಿ ಹೇಳಿದರು.

ಮಧುಸೂದನ್‌ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ರಾಜೇಶ್‌ ಗೋಲೇಚ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ಮೇಲೆ ತರುವ ಆಲೋಚನೆ ತಂಡಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.