ADVERTISEMENT

ಚಿತ್ರಮಂದಿರಕ್ಕೆ ‘ಗಡಿಯಾರ’

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 19:30 IST
Last Updated 24 ನವೆಂಬರ್ 2020, 19:30 IST
ಶೀತಲ್‌ ಶೆಟ್ಟಿ
ಶೀತಲ್‌ ಶೆಟ್ಟಿ   
""

ಹಾರರ್, ಥ್ರಿಲ್ಲರ್ ಕಥಾಹಂದರದ ಚಿತ್ರ ‘ಗಡಿಯಾರ’ ನವೆಂಬರ್ 27ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಚಿತ್ರದ ಮೂಲಕ ರಾಜಮನೆತನಗಳ ಇತಿಹಾಸವನ್ನು ನೆನಪಿಸುವಂಥ ವಿಷಯದ ಜತೆಗೆ, ಲವ್, ಕಾಮಿಡಿ, ಹಾರರ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಆ್ಯಕ್ಷನ್‍ನಂತಹ ಎಲ್ಲಾ ರೀತಿಯ ಮನರಂಜನಾತ್ಮಕ ಅಂಶಗಳನ್ನು ನಿರ್ದೇಶಕ ಪ್ರಭಿಕ್ ಮೊಗವೀರ್ ಅವರು ಹೇಳಹೊರಟಿದ್ದಾರೆ.
ವಿಭಿನ್ನ ಶೈಲಿಯ ಕಥಾ ಹಂದರವನ್ನು ಹೊಂದಿರುವ ‘ಗಡಿಯಾರ’ ಕೋವಿಡ್ ನಂತರ ಚಿತ್ರ ಮಂದಿರಗಳಲ್ಲಿ ತೆರೆ ಕಾಣುತ್ತಿರುವ ದ್ವಿತೀಯ ಚಿತ್ರವಾಗಿದೆ.
ಇದಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ನೀಡಿದೆ. ಮುಖ್ಯ ಭೂಮಿಕೆಯಲ್ಲಿ ರಾಜ್‍ದೀಪಕ್ ಶೆಟ್ಟಿ ಹಾಗೂ ಶೀತಲ್ ಶೆಟ್ಟಿ ನಟಿಸಿದ್ದಾರೆ.

ಬಿಡುಗಡೆಗೂ ಮುನ್ನವೇ ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳ ನಿರ್ಮಾಪಕರಿಂದ ಈ ಚಿತ್ರದ ಡಬ್ಬಿಂಗ್ ಹಕ್ಕಿಗಾಗಿ ಭಾರೀ ಬೇಡಿಕೆ ಬರುತ್ತಿದೆಯಂತೆ.

ಕರಾವಳಿ ಮೂಲದವರಾದ ಪ್ರಭಿಕ್ ಮೊಗವೀರ್ ಅವರು ಈ ಚಿತ್ರಕ್ಕೆ ಆ್ಯಕ್ಷನ್‍ಕಟ್ ಹೇಳುವುದರ ಜತೆಗೆ ಸ್ವತಃ ಬಂಡವಾಳವನ್ನೂ ಹೂಡಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರದೇ.
ದೀಪಿಕಾ ವಿನಯ್‍ಕುಮಾರ್ ರಾವ್ ಮತ್ತು ಲಾವಣ್ಯ ಲೀಲಾಮೋಹನ ಅವರ ಸಹಕಾರದೊಂದಿಗೆ ಆತ್ಮ ಸಿನಿಮಾಸ್ ಸಂಸ್ಥೆ ಈ ಚಿತ್ರವನ್ನು ನಿರ್ಮಾಣ ಮಾಡಿದೆ.
ಮಾಜಿ ಪೊಲೀಸ್ ಕಮಿಷನರ್ ಎಚ್‌.ಟಿ. ಸಾಂಗ್ಲಿಯಾನ, ಮಲಯಾಳಂನ ಎಂ.ಟಿ. ರಿಹಾಜ್ ಹಾಗೂ ಬಾಲಿವುಡ್‍ನ ಗೌರಿಶಂಕರ್ ಈ ಚಿತ್ರದ ವಿಶೇಷ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.

ADVERTISEMENT

ಈ ಚಿತ್ರದ ಫಸ್ಟ್‌ಲುಕ್‌ ಅನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದರು. ಚಿತ್ರದ ಪೋಸ್ಟರ್ ಅನ್ನು ಸಚಿವ ವಿ. ಸೋಮಣ್ಣ ಅವರು ಅನಾವರಣಗೊಳಿಸಿದ್ದರು. ಚಿತ್ರದ ಶೀರ್ಷಿಕೆಯನ್ನು ಎಚ್‌.ಟಿ. ಸಾಂಗ್ಲಿಯಾನ ಮತ್ತು ಎಸ್‌.ಪಿ. ಪ್ರಭಾಕರ್ ಬಾರ್ಕಿ ಅವರು ಬಿಡುಗಡೆ ಮಾಡಿದ್ದರು.

ಈ ಚಿತ್ರದಲ್ಲಿ ಯಶ್‍ಶೆಟ್ಟಿ, ಸುಚೇಂದ್ರ ಪ್ರಸಾದ್, ಶರತ್ ಲೋಹಿತಾಶ್ವ, ಪ್ರದೀಪ್ ಪೂಜಾರಿ, ಗಣೇಶ್ ರಾವ್, ರಾಧಾ ರಾಮಚಂದ್ರ, ಮನ್‍ದೀಪ್‍ರಾಯ್‌, ಪ್ರಣಯಮೂರ್ತಿ ಸೇರಿದಂತೆ ಅನೇಕ ಪ್ರತಿಭಾವಂತರ ಅಭಿನಯವಿದೆ.

ಶ್ಯಾಮ್ ಸಿಂಧನೂರು ಛಾಯಾಗ್ರಹಣ, ರಾಘವ್ ಸುಭಾಷ್ ಸಂಗೀತ ಈ ಚಿತ್ರಕ್ಕಿದೆ.

ರಾಜ್ ದೀಪಕ್ ಶೆಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.