ADVERTISEMENT

ಸಂದರ್ಶನ: ಅಪಹಾಸ್ಯಕ್ಕೆ ರಾಯಭಾರಿ ಆಗಲಾರೆ– ಗೀತಾ ಭಾರತಿ ಭಟ್‌

ವಿನಾಯಕ ಕೆ.ಎಸ್.
Published 15 ಫೆಬ್ರುವರಿ 2024, 23:57 IST
Last Updated 15 ಫೆಬ್ರುವರಿ 2024, 23:57 IST
<div class="paragraphs"><p>ಗೀತಾ ಭಾರತಿ ಭಟ್‌</p></div>

ಗೀತಾ ಭಾರತಿ ಭಟ್‌

   
‘ಬ್ರಹ್ಮಗಂಟು’ ಧಾರಾವಾಹಿ ಮೂಲಕ ಜನಪ್ರಿಯರಾದ ಗೀತಾ ಭಾರತಿ ಭಟ್‌ ನಟನೆಯ ‘ರವಿಕೆ ಪ್ರಸಂಗ’ ಚಿತ್ರ ಇಂದು (ಫೆ.16) ಕಾಣುತ್ತಿದೆ. ಈ ಚಿತ್ರದಲ್ಲಿಯೂ ದಪ್ಪ ಇರುವ ಹುಡುಗಿಯರ ಪ್ರತಿನಿಧಿಯಂತಹ ಪಾತ್ರ ನಿಭಾಯಿಸಿರುವ ಅವರು, ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದು ಹೀಗೆ...

ಸಿನಿಮಾದಲ್ಲಿ ನಿಮ್ಮ ಪಾತ್ರವೇನು?

‘ಸಾನ್ವಿ ಸಂಪಾಜೆ’ ಎಂಬ ಪಾತ್ರ ಮಾಡಿರುವೆ. ಮನೆಯಲ್ಲಿರುವ ಹುಡುಗಿಯ ಪಾತ್ರ. ಮದುವೆ ಮಾಡಲು ಮನೆಯಲ್ಲಿ ಹುಡುಗನನ್ನು ಹುಡುಕುತ್ತ ಇರುತ್ತಾರೆ. ನೋಡಲು ದಪ್ಪ ಇರುವುದರಿಂದ ಹುಡುಗ ಸಿಗುತ್ತಾನಾ ಎಂಬ ಚಿಂತೆ ಕಾಡುತ್ತಿರುತ್ತದೆ. ಆಗ ವಿದೇಶದಲ್ಲಿರುವ ಹುಡುಗನಿಂದ ಪ್ರಪೋಸಲ್‌ ಬರುತ್ತದೆ. ಈ ಸನ್ನಿವೇಶಕ್ಕೆ ಆಕೆ ಟೈಲರ್‌ ಬಳಿ ಹೊಲಿಯಲು ಕೊಟ್ಟ ರವಿಕೆ ಹೇಗೆ ಸಿಂಕ್‌ ಆಗುತ್ತದೆ ಎಂಬುದನ್ನು ಚಿತ್ರದಲ್ಲಿಯೇ ನೋಡಬೇಕು.ಈ ಪಾತ್ರದ ಹೆಗಲ ಮೇಲೆ ಇಡೀ ಕಥೆ ಸಾಗುತ್ತದೆ. ಹೆಣ್ಣುಮಕ್ಕಳಿಗೆ ಎಷ್ಟೇ ಆಪ್ತರ ಬಳಿಯೂ ಹೇಳಿಕೊಳ್ಳಲಾಗದ ಒಂದಷ್ಟು ವಿಷಯಗಳಿರುತ್ತವೆ. ಅಂತಹ ಮಾತುಗಳು ಈ ಚಿತ್ರದಲ್ಲಿನ ಹಲವು ಪಾತ್ರಗಳ ಮೂಲಕ ಹೊರಬರುತ್ತದೆ. ಒಳ್ಳೆಯ ಸಾಮಾಜಿಕ ಸಂದೇಶ ನೀಡುವ ಚಿತ್ರ.

ADVERTISEMENT

ನಿಮ್ಮ ಸಿನಿ ಪಯಣ...?

ಇದು ನನ್ನ ಆರನೆ ಸಿನಿಮಾ. ರೂಪೇಶ್‌ ಶೆಟ್ಟಿ ಅವರ ಜೊತೆಗೆ ‘ಮಂಕಿಬಾಯ್‌ ಫಾಕ್ಸಿರಾಣಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದೆ. ‘ಅಂಬಿ ನಿಂಗೆ ವಯಸ್ಸಾಯ್ತು’ ನಟಿಸಿದ ಮೊದಲ ಸಿನಿಮಾ. ‘ಲವ್‌ ಮಾಕ್ಟೇಲ್‌’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಪೂರ್ಣ ಪ್ರಮಾಣದ ನಾಯಕಿಯಾಗಿ ‘ರವಿಕೆ ಪ್ರಸಂಗ’ ಮೊದಲ ಸಿನಿಮಾ.

ಮತ್ತೆ ಧಾರಾವಾಹಿಯತ್ತ ಹೋಗುವಿರಾ?

ಉದಯ ಟಿವಿಯಲ್ಲಿ ‘ರಾಧಿಕಾ’ ಎಂಬ ಧಾರಾವಾಹಿಯಲ್ಲಿ ಅತಿಥಿ ಪಾತ್ರ ಮಾಡುತ್ತಿರುವೆ. ವೈಯಕ್ತಿಕ ಕಾರಣದಿಂದ ಧಾರಾವಾಹಿಗಳಿಂದ ದೂರ ಉಳಿದಿದ್ದೆ. ಒಳ್ಳೆಯ ಪಾತ್ರಗಳು ಬಂದರೆ ಸಿನಿಮಾ ಅಥವಾ ಧಾರಾವಾಹಿ ಎಂಬ ತಾರತಮ್ಯವಿಲ್ಲ.

ದಪ್ಪ ಇರುವ ಹುಡುಗಿಯ ಪಾತ್ರಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತಿವೆಯಾ?

ಪ್ಲಸ್‌ ಸೈಜ್‌ ಕಲಾವಿದರನ್ನು ಸಿನಿಮಾ, ಧಾರಾವಾಹಿಗಳಲ್ಲಿ ಕಾಮಿಡಿ, ಬಾಡಿ ಶೇಮಿಂಗ್‌ಗೆ ಬಳಸಿಕೊಳ್ಳುತ್ತಾರೆ. ಆದರೆ ನಾನು ಮಾಡುವ ಸಿನಿಮಾಗಳಲ್ಲಿ ಆ ರೀತಿ ಇಲ್ಲ. ಒಂದರಲ್ಲಿ ಆ ರೀತಿ ಪಾತ್ರ ಮಾಡಿದೆ. ಇವತ್ತಿಗೂ ಅದಕ್ಕೆ ಪಶ್ಚಾತ್ತಾಪ ಪಡುತ್ತೇನೆ. ಬೇರೆಯವರಿಗೆ ನೋವು ಕೊಡುವ ಪಾತ್ರ ಬೇಡ. ದಪ್ಪ ಇರುವ ಹುಡುಗಿಯರನ್ನು ಅಪಹಾಸ್ಯ ಮಾಡುವುದಕ್ಕೆ ರಾಯಭಾರಿ ಆಗಲಾರೆ. ಈಗ ಹಳೆ ಮೈಂಡ್‌ಸೆಟ್‌ನಲ್ಲಿ ಜನ ಇಲ್ಲ. ಜಾಹೀರಾತಿನಲ್ಲಿ ಕೂಡ ಪ್ಲಸ್‌ ಸೈಜ್‌ ಕಲಾವಿದರನ್ನು ಬಳಸಿಕೊಳ್ಳುತ್ತಿದ್ದಾರೆ.

ಕೈಯಲ್ಲಿರುವ ಮುಂದಿನ ಚಿತ್ರಗಳು?

ಒಂದು ಸಿನಿಮಾ ಮಾತುಕತೆ ಹಂತದಲ್ಲಿದೆ. ಸದ್ಯಕ್ಕೆ ಬೇರೆ ಯಾವುದನ್ನೂ ಒಪ್ಪಿಕೊಂಡಿಲ್ಲ.

ಸಿನಿಮಾ ಮತ್ತು ಧಾರಾವಾಹಿಯಲ್ಲಿ ನಿಮ್ಮ ಆಯ್ಕೆ ಯಾವುದು?

ಎರಡೂ ಕಡೆ ತುಂಬ ಕಲಿಕೆ ಇದೆ. ಧಾರಾವಾಹಿ ದೀರ್ಘ ಪ್ರಕ್ರಿಯೆ. ಸಿನಿಮಾ ಚುಟುಕು. ಧಾರಾವಾಹಿಯಲ್ಲಿ ಸಾಕಷ್ಟು ಇತಿಮಿತಿಗಳಿವೆ. ಸಿನಿಮಾದಲ್ಲಿ ಪಾತ್ರಕ್ಕೆ ಅವಕಾಶ ಜಾಸ್ತಿ ಇರುತ್ತದೆ. ಚಿತ್ರಮಂದಿರದ ಅನುಭವವೇ ಬೇರೆ. ಎರಡೂ ಕಡೆ ಒಳ್ಳೊಳ್ಳೆ ಪಾತ್ರ ಸಿಕ್ಕಿವೆ. ದಪ್ಪ ಇರುವವರಿಗೆ ಬೇಸರಪಟ್ಟುಕೊಳ್ಳದೆ, ಸ್ಫೂರ್ತಿ ತುಂಬುವ ಪಾತ್ರಗಳು ಸಿಕ್ಕಿವೆ ಎಂಬ ಖುಷಿಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.