ADVERTISEMENT

ಕಾಮಿಡಿ ಕಿಲಾಡಿಗಳ ‘ಹಳ್ಳಿ ಹೈಕ್ಳ ಪ್ಯಾಟೆ ಲೈಫ್‌’ ಬಿಡುಗಡೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 13:10 IST
Last Updated 25 ಜನವರಿ 2022, 13:10 IST
‘ಹಳ್ಳಿ ಹೈಕ್ಳ ಪ್ಯಾಟೆ ಲೈಫ್‌’
‘ಹಳ್ಳಿ ಹೈಕ್ಳ ಪ್ಯಾಟೆ ಲೈಫ್‌’   

ಬೆಂಗಳೂರು: ‘ಕಾಮಿಡಿ ಕಿಲಾಡಿಗಳು’ ಮತ್ತು ‘ಮಜಾ ಭಾರತ’ ರಿಯಾಲಿಟಿ ಷೋದಲ್ಲಿ ನಟಿಸಿರುವ ಬಹುತೇಕ ಕಲಾವಿದರನ್ನು ಬಳಸಿಕೊಂಡು ‘ಹಳ್ಳಿ ಹೈಕ್ಳ ಪ್ಯಾಟೆ ಲೈಫು’ ಎನ್ನುವ ಚಿತ್ರವನ್ನು ಹೊಸಬರ ತಂಡ ಸಿದ್ಧಪಡಿಸಿದೆ.

ಪ್ರೀತಂಶೆಟ್ಟಿ, ಮಾಸ್ಟರ್ ಆನಂದ್, ಅರವಿಂದ್‌ ಕೌಶಿಕ್ ಬಳಿ ಅನುಭವ ಪಡೆದುಕೊಂಡಿರುವ ಮಂಜು ಗಂಗಾವತಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುದೀಪ್ ರಾಜ್ ಪ್ರೊಡಕ್ಷನ್ ಅಡಿಯಲ್ಲಿ ಮೋಹನಕುಮಾರಿ, ಲಕ್ಷೀನಾರಾಯಣ್ ಜಂಟಿಯಾಗಿ ಸಿನಿಮಾ ಕೃಷಿಗೆ ಬಂಡವಾಳ ಹೂಡಿದ್ದಾರೆ. ವಿದ್ಯಾವಂತ ಮೂವರು ಹಳ್ಳಿ ಯುವಕರು ವ್ಯವಸಾಯ ಮಾಡುವುದು ಅವಮಾನ ಎಂದುಕೊಂಡು ಪಟ್ಟಣದ ಬಣ್ಣದ ಬದುಕಿಗೆ ಮಾರುಹೋಗಿ ಕೆಲಸ ಮಾಡಲು ಬರುತ್ತಾರೆ. ಆದರೆ ಇಲ್ಲಿ ನಡೆಯುವ ಘಟನೆಗಳು, ಅವಾಂತರಗಳನ್ನು ಕಂಡು ನಮ್ಮ ಹಳ್ಳಿಯೇ ಸುರಕ್ಷಿತವೆಂದು ಕೊಂಡು ವಾಪಸ್‌ ಹೋಗುವುದೇ ಕಥಾವಸ್ತು.

ಪೂರ್ಣ ಹಾಸ್ಯಮಯ ಚಿತ್ರವಿದು. ಕೊನೆಗೆ ಒಂದು ಸಂದೇಶದೊಂದಿಗೆ ಅಂತ್ಯಗೊಳ್ಳುತ್ತದೆ. ಪದ್ಮಾವತಿ ಖ್ಯಾತಿಯ ತ್ರಿವಿಕ್ರಂ, ಮಡೆನೂಡು ಮನು, ಜಗ್ಗಪ್ಪ ಮತ್ತು ರಾಗಿಣಿ ಖ್ಯಾತಿಯ ರಾಘು, ಇವರುಗಳಿಗೆ ಜೋಡಿಯಾಗಿ ಶರಣ್ಯ, ಮಿಂಚು, ಹೀಮಾ, ಐಶ್ವರ್ಯ ನಟಿಸಿದ್ದಾರೆ. ಉಳಿದಂತೆ ರಿಯಾಲಿಟಿ ಷೋ ಹಾಗೂ ಬಿಗ್‌ಬಾಸ್ ವಿನ್ನರ್ ಮಂಜು ಪಾವಗಡ, ಗೋವಿಂದೇಗೌಡ, ಸೂರ್ಯಕುಂದಾಪುರ, ಸದಾನಂದಕಾಳೆ, ಸೌಜನ್ಯ, ದಿವ್ಯಾ ಹೊನ್ನವಳ್ಳಿಕೃಷ್ಣ, ಮೀಸೆ ಆಂಜನಪ್ಪ, ಶಿವಕುಮಾರ್‌ ಆರಾಧ್ಯ, ರಾಮಕೃಷ್ಣಪ್ಪ ಮುಂತಾದವರ ಅಭಿನಯವಿದೆ.

ADVERTISEMENT

ಬೆಂಗಳೂರು, ಮಂಡ್ಯ, ಸಕಲೇಶಪುರ, ರಾಮನಗರ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಯುಗಾಂತ್ ಸಂಗೀತ ನೀಡಿದ್ದಾರೆ. ಛಾಯಾಗ್ರಹಣ ನಾಗರಾಜಮೂರ್ತಿ, ಕಥೆ ರಾಜಶೇಖರ ರಾಮನಗರ, ಸಂಕಲನ ಸಂಜೀವರೆಡ್ಡಿ, ಸಂಭಾಷಣೆ ಸುರೇಶ್ ಯಲಾದಹಳ್ಳಿ ಅವರದಾಗಿದೆ. ಆನಂದ್ ಆಡಿಯೋ ಹೊರಬಂದಿರುವ, ವಿಜಯ್‌ಪ್ರಕಾಶ್ ಗಾಯನದ ‘ಸೀಸೆ ಒಳಗಿನ ಮಧುರೆ’ ಲಿರಿಕಲ್ ಹಾಡು ಬಿಡುಗಡೆ ಆಗಿದೆ.

ಚಿತ್ರಮಂದಿರಗಳಲ್ಲಿ ಶೇ 100ರಷ್ಟು ಆಸನ ಭರ್ತಿಗೆ ಅವಕಾಶ ಕಲ್ಪಿಸಿದ ನಂತರ ತೆರೆಗೆ ತರಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.