ಗುಣಮಟ್ಟದ ಕಥೆಯುಳ್ಳ ಕನ್ನಡ ಸಿನಿಮಾಗಳು ಹೆಚ್ಚಾಗಿ ಬರುತ್ತಿಲ್ಲ, ಕನ್ನಡ ಸಿನಿಮಾಗಳಿಗೆ ಪ್ರೇಕ್ಷಕರ ಕೊರತೆಯಿದೆ ಎನ್ನುವ ಮಾತುಗಳು ಕೇಳಿಬರುತ್ತಿರುವ ಸಂದರ್ಭದಲ್ಲೇ ಸಂಗೀತ ನಿರ್ದೇಶಕ ಹಂಸಲೇಖ ಹೊಸ ಆಂದೋಲನ ಆರಂಭಿಸಿದ್ದಾರೆ.
ಇತ್ತೀಚೆಗೆ ಅವರ ನಿರ್ದೇಶನದ ಚೊಚ್ಚಲ ಚಿತ್ರ ‘ಓಕೆ’ಯ ಶೀರ್ಷಿಕೆ ಅನಾವರಣ ಕಾರ್ಯಕ್ರಮ ನಡೆಯಿತು. ಈ ವೇದಿಕೆಯನ್ನೇ ಬಳಸಿಕೊಂಡ ಹಂಸಲೇಖ, ‘ಇಂದಿನ ಕನ್ನಡ ಚಲನಚಿತ್ರರಂಗಕ್ಕೆ ಬೇಕಾಗಿರುವುದು ಕಥೆಗಳು ಮತ್ತು ಕಥೆಗಾರರು. ಅವರನ್ನು ಗುರುತಿಸಿ, ಚಿತ್ರಮಂದಿರಗಳಿಗೆ ಜನರನ್ನು ತುಂಬಿಸುವ ಕಾಯಕವನ್ನು ಒಂದು ಆಂದೋಲನವಾಗಿ ತೆಗೆದುಕೊಳ್ಳಬೇಕು. ಇಂದಿನ ಅಗತ್ಯ ಇದೇ ಆಗಿದೆ. ನಮ್ಮ ಉದ್ಯಮವೂ ಪ್ಯಾನ್ ಇಂಡಿಯಾ ಕಡೆ ತಿರುಗಿದೆ. ನಮ್ಮಲ್ಲಿ ಸುಮಾರು 150–200 ಜನ ನಿರ್ದೇಶಕರಿದ್ದಾರೆ. ಅವರೆಲ್ಲರೂ ಪ್ರಯೋಗಗಳನ್ನೇ ಮಾಡುತ್ತಿದ್ದಾರೆ. ಆದರೆ ಪ್ರಯೋಗಗಳು ಪ್ರಯೋಗಶಾಲೆ, ಅಡುಗೆಮನೆಯಲ್ಲ. ಪ್ರಯೋಗಶಾಲೆಯಲ್ಲಾಗಿದ್ದು ಅಭಿವೃದ್ಧಿಗೆ ಕಡೆಗೆ ಹೋಗುವ ವಿಷಯಗಳು. ಅಡುಗೆ ಮಾಡಿದ್ದು ತಿನ್ನುವುದಕ್ಕೆ, ಸಂತೋಷಕ್ಕೆ. ಭಾರತೀಯ ಸಿನಿಮಾ ಎಂದರೆ ಹಾಡುಗಳು, ಸಂಭಾಷಣೆ, ಭಾವನೆಗಳು. ಇವುಗಳು ಇದ್ದರೆ ಪ್ರೇಕ್ಷಕರಿಗೆ ರುಚಿಸುತ್ತದೆ. ಹಳ್ಳಿ ಕಡೆ ಸಂತೆ ಬೆಳೆ, ಮನೆ ಬೆಳೆ ಎಂದು ಮಾಡುತ್ತಾರೆ. ಸಂತೆ ಬೆಳೆ ಸಂತೆಗೆ, ಇದನ್ನು ದಿನಾ ತಿನ್ನಲು ಸಾಧ್ಯವಿಲ್ಲ. ನಮ್ಮ ಸಂಸ್ಕೃತಿಯ ಕಥೆಯುಳ್ಳ ಚಿಕ್ಕ ಚಿಕ್ಕ ಚಿತ್ರಗಳನ್ನು ಮಾಡುವುದು ಇಂದಿನ ಅಗತ್ಯ’ ಎಂದರು.
‘ಐದು ವರ್ಷಗಳ ಹಿಂದೆ ಅದೀಬ್ ಅಖ್ತರ್ ‘ಪಂಜರ’ ಕಥೆ ಬರೆದಿದ್ದರು. ಕಥೆ ಓದಿ ಅವರನ್ನು ಕರೆಸಿ ಒಪ್ಪಿಗೆ ಪಡೆದುಕೊಂಡು ಮುಂಗಡ ಹಣ ಕೊಟ್ಟೆ. ಮಣ್ಣಿನ ಗುಣವಿರುವ ಕಥೆಗಳು, ಕಥೆಗಾರರು ನಮ್ಮ ಸಿನಿಮಾಗಳಿಗೆ ಬೇಕು. ಅದು ಬಂದರಷ್ಟೇ ಪ್ರೇಕ್ಷಕರು ಬೇಗ ಬೇಗ ಚಿತ್ರರಂಗವನ್ನು ಆನಂದಿಸುತ್ತಾರೆ. ಕಥೆಗಳಲ್ಲಿ ಕನ್ನಡದ ಡಿಎನ್‌ಎ ಇದ್ದರೆ ಜನ ಚಿತ್ರ ನೋಡುತ್ತಾರೆ. ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ದೊಡ್ಡ ಆಂದೋಲನವನ್ನು ಸಾಮಾಜಿಕ, ಶೈಕ್ಷಣಿಕ, ಪ್ರೀತಿಯಿಂದ ನಡೆಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ’ ಎಂದರು.
‘ನಿರ್ದೇಶಕನಾಗಬೇಕು ಎಂಬ ಆಸೆ ಇತ್ತು. ಆದರೆ ಪ್ರತಿಭೆಗಳಿಗೆ ಬೆಂಬಲ ನೀಡುತ್ತಾ ಅವರನ್ನು ಮೇಲಕ್ಕೆತ್ತುವ ಕೆಲಸದಲ್ಲಿ ಮುಳುಗಿದ್ದೆ. ಈ ಸಂದರ್ಭದಲ್ಲಿ ನನ್ನ ಬದುಕು ಮುಗಿಯಿತೇ ಎನ್ನುವ ಆತಂಕದಲ್ಲಿದ್ದೆ. ಆದರೆ ಈಗ ಇದೇ ಚಂದನವನ ನನ್ನ ನಿರ್ದೇಶನದ ಆಸೆಯನ್ನೂ ಪೂರ್ಣಗೊಳಿಸಿದೆ’ ಎನ್ನುತ್ತಾ ನಟ ರವಿಚಂದ್ರನ್ ಅವರೊಂದಿಗಿನ ಒಡನಾಟವನ್ನು ಮೆಲುಕು ಹಾಕಿದರು.
‘ಹೊಸ, ಭಿನ್ನ ತಂತ್ರಜ್ಞಾನವನ್ನು ಉದ್ಯಮಕ್ಕೆ ಕೊಟ್ಟವರು ರವಿಚಂದ್ರನ್. ಪ್ರೇಮಲೋಕ, //ರಣಧೀರದಂತಹ ಸಿನಿಮಾಗಳು ಮಾಡೋಣ ಎಂದು ಕನಸಿನಲ್ಲೂ ಯಾರೂ ಅಂದುಕೊಂಡಿಲ್ಲ.// ರವಿಚಂದ್ರನ್ ಅವರು ಹತ್ತು ಕೆ.ಜಿ.ಕಮ್ಮಿ ಮಾಡಿಕೊಂಡರೆ ಇಂದಿಗೂ ಸ್ಫುರದ್ರೂಪಿ ನಟ’ ಎಂದರು ಹಂಸಲೇಖ.
ಈ ಸಿನಿಮಾಕ್ಕೆ ನಾಗೇಶ್ ವಾಷ್ಟರ್ ಮತ್ತು ಸೂರ್ಯಪ್ರಕಾಶ್ ಬಂಡವಾಳ ಹೂಡುತ್ತಿದ್ದಾರೆ. ಸಿನಿಮಾವನ್ನು ಆಕಾಂಕ್ಷ ಪ್ರೊಡಕ್ಷನ್ ಮತ್ತು ಹಂಸಲೇಖ ಅವರ ಐದನಿ ಎಂಟರ್‌ಟೈನ್ಮೆಂಟ್ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ.
ನಟ ರವಿಚಂದ್ರನ್ ಮಾತನಾಡಿ ‘ರಾಜು (ಹಂಸಲೇಖ) ನನ್ನನ್ನು ಪರದೆ ಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ನಾನು ಪರದೆಯಲ್ಲಿ ಮೆರೆದಿದ್ದರೆ ಅದಕ್ಕೆ ನೀವು ಮತ್ತು ನಿಮ್ಮ ಹಾಡುಗಳು ಕಾರಣ. ನನ್ನನ್ನು ಕ್ರೇಜಿ ಪಾತ್ರವಾಗಿ ಇದು ಮಾಡಿದೆ. ಸಿನಿಮಾ ಓಡುತ್ತಿಲ್ಲ ಎಂದು ಜನ ಹೇಳುತ್ತಿದ್ದಾರೆ. ಆದರೆ ಪ್ರತಿ ವಾರ ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಅದು ಸಮಸ್ಯೆ ಆಗಿದೆ. 1986ರಲ್ಲಿ ನಾವು ಕೊಟ್ಟಿದ್ದವಲ್ಲ ಅದು ಯಶಸ್ಸು. ಆದರೆ ಈ ಯಶಸ್ಸನ್ನು ಒಂದು ದಿನವೂ ನಾವು ಈ ಯಶಸ್ಸನ್ನು ಹೆಗಲ ಮೇಲೆ ಹೊತ್ತು ಸಾಗಲಿಲ್ಲ. ಏಕೆಂದರೆ ನಾವು ನಿರಂತರವಾಗಿ ಸಿನಿಮಾ ಮಾಡುತ್ತಿದ್ದೆವು. ನನ್ನ ಮತ್ತು ಹಂಸಲೇಖ ಸ್ನೇಹದಲ್ಲಿ ಲೆಕ್ಕಾಚಾರ ಇರಲಿಲ್ಲ. ನನಗೆ ಲೆಕ್ಕಾಚಾರ ಗೊತ್ತಿಲ್ಲ. ಸಿನಿಮಾ ಮಾಡುವುದು ಮಾತ್ರ ಗೊತ್ತು. ಇಂದಿಗೂ ಯಾರಾದರೂ ‘ಪ್ರೇಮಲೋಕ’ ‘ರಣಧೀರ’ ಸಿನಿಮಾಗಳ ಲಾಭ ಎಷ್ಟು ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಎನ್.ಎಸ್. ರಾವ್ ಅವರು ನನಗೆ ಹಂಸಲೇಖ ಅವರ ಪರಿಚಯ ಮಾಡಿಕೊಟ್ಟರು. ನನ್ನ ಮತ್ತು ಹಂಸಲೇಖ ಸ್ನೇಹ ಕಲ್ಮಶ ಇಲ್ಲದ್ದು. ಸಿನಿಮಾದ ಯೋಚನೆಯಷ್ಟೇ ನಮ್ಮಲ್ಲಿತ್ತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.