ನಿರ್ದೇಶಕ ಎಸ್.ನಾರಾಯಣ್ ಮತ್ತೆ ನಟನೆಗಿಳಿದಿದ್ದಾರೆ. ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ‘ಹಲೋ ಸರ್’ ಚಿತ್ರ ಬಿಡುಗಡೆ ಸಿದ್ಧವಿದೆ. ನಾರಾಯಣ್ ಈ ಹಿಂದೆ ‘ಕುರಿಗಳು ಸಾರ್ ಕುರಿಗಳು’ ಸೇರಿದಂತೆ ಕೆಲ ಚಿತ್ರಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಕೆ.ಶಂಕರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಸಮಾಜದಲ್ಲಿ ಅಪರಾಧ ಕೃತ್ಯ ಎಸಗಿ, ಹಣ ಬಲ, ಅಧಿಕಾರ ಬಳಸಿಕೊಳ್ಳುವವರ ವಿರುದ್ಧ ಹೋರಾಡುವ ಕಥೆ. ಪ್ರಾಮಾಣಿಕರು ಹಾಗೂ ರಾಜಕಾರಣಿಗಳ ನಡುವಿನ ಸಮರವಿದು. ಸಮಾಜದ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿರುವವರ ವಿರುದ್ದ ಯುವಕನೊಬ್ಬ ಹೋರಾಡುತ್ತಾನೆ. ಯಾಕೆ ಆ ಹೋರಾಟ? ಅದು ಎಲ್ಲಿಗೆ ತಲುಪತ್ತದೆ ಎಂಬುದೇ ಚಿತ್ರಕಥೆ. ಮಂಗಳೂರು, ಮಂಡ್ಯ, ಬೆಂಗಳೂರು ಮತ್ತು ಹೈದರಾಬಾದ್ ಸುತ್ತಮುತ್ತ ಸುಮಾರು 40 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರವೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಆಗಸ್ಟ್ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ’ ಎನ್ನುತ್ತಾರೆ ನಿರ್ದೇಶಕರು.
ಕನ್ನಡ, ತೆಲಗು, ತಮಿಳಿನಲ್ಲಿ ಚಿತ್ರ ಸಿದ್ಧಗೊಳ್ಳುತ್ತಿದೆ. ಚಿತ್ರದ ನಾಯಕನಾಗಿ ರಾಜಬಾಲ ನಟಿಸಿದ್ದಾರೆ. ಸ್ವಾತಿ ಲಿಂಗರಾಜ್ ನಾಯಕಿ. ಎಲ್. ಮಂಜುನಾಥ್, ಎಚ್.ಪಿ.ಮಹೇಶ್ ಮತ್ತು ವೆಂಕಟೇಶ್ ಬಂಡವಾಳ ಹೂಡಿದ್ದಾರೆ. ಎಂ.ಎನ್.ಕೃಪಾಕರ್ ಸಂಗೀತ, ಚಂದ್ರು ಸೊಂಡೇಕೊಪ್ಪ, ಸೂರ್ಯೋದಯ ಅವರ ಛಾಯಾಚಿತ್ರಗ್ರಹಣ ಈ ಚಿತ್ರಕ್ಕಿದೆ. ಕೆ.ಶಿವಣ್ಣ, ಕಿಲ್ಲರ್ ವೆಂಕಟೇಶ್, ರಮಾನಂದ್, ಬೇಬಿ ಎಸ್ ಪವಿತ್ರ ತಾರಾಗಣದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.