ತಿರುವನಂತಪುರ: ತಿರುವನಂತಪುರದಲ್ಲಿ ಗುರುವಾರ ತಡರಾತ್ರಿ ನಡೆದ ಹಿಟ್ ಅಂಡ್ ರನ್ ಪ್ರಕರಣದಲ್ಲಿ ಖ್ಯಾತ ಮಲಯಾಳ ನಟ ಮಣಿಯನ್ಪಿಳ್ಳ ರಾಜು ಅವರನ್ನು ಬಂಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಕ್ಲಬ್‌ನಿಂದ ಹೊರಬಂದಿದ್ದ ನಟ, ಕಾರು ಚಲಾಯಿಸಿದ್ದಾರೆ. ಈ ವೇಳೆ ಬೈಕ್‌ಗೆ ಕಾರು ಡಿಕ್ಕಿಯಾಗಿದೆ. ಆದರೆ ಕಾರನ್ನು ನಿಲ್ಲಿಸದೆ ಹಾಗೆಯೇ ಮುನ್ನಡೆದಿದ್ದಾರೆ. ಹೀಗಾಗಿ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆದರೆ ಈ ಆರೋಪವನ್ನು ನಟ ಮಣಿಯನ್ಪಿಳ್ಳ ರಾಜು ನಿರಾಕರಿಸಿದ್ದಾರೆ. ಭಯದಿಂದ ಕಾರನ್ನು ನಿಲ್ಲಿಸದೆ ಹೊರಟೆ ಹೊರತು ಕುಡಿದಿರಲಿಲ್ಲ. ಕ್ಯಾನ್ಸರ್‌ನಿಂದ ಬಳಲುತ್ತಿರುವುದರಿಂದ ಮದ್ಯ ಸೇವಿಸಿರಲಿಲ್ಲ ಎಂದು ನಟ ಹೇಳಿದ್ದಾರೆ.
ಇಂದು (ಶುಕ್ರವಾರ) ಬೆಳಿಗ್ಗೆ ಮಣಿಯನ್ಪಿಳ್ಳ ರಾಜು ಪೊಲೀಸರ ಮುಂದೆ ಶರಣಾದರು. ರಕ್ತದಲ್ಲಿ ಮದ್ಯದ ಅಂಶ ಇರುವುದನ್ನು ಕಂಡು ಹಿಡಿಯಲು ಅವರನ್ನು ರಕ್ತದ ಪರೀಕ್ಷೆಗೆ ಒಳಪಡಿಸಲಾಯಿತು.
ನಿರ್ಲಕ್ಷ್ಯದ ಚಾಲನೆ ಮತ್ತು ಕಾರನ್ನು ನಿಲ್ಲಿಸದಿದ್ದಕ್ಕಾಗಿ ಭಾರತೀಯ ನ್ಯಾಯ ಸಂಹಿತೆ ಮತ್ತು ಮೋಟಾರು ವಾಹನ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ರಸ್ತೆ ದಾಟುತ್ತಿದ್ದ ರಾಜು ಅವರು ಹಾಗೂ ಬೈಕ್ ಡಿಕ್ಕಿ ಹೊಡೆದಿದೆ. ನಿವೇದಿತ್ ಕೃಷ್ಣನ್ ಮತ್ತು ಸೂರಜ್ ಎಂಬುವವರು ಬೈಕ್ ಸವಾರರು ಎಂದು ಗುರುತಿಸಲಾಗಿದೆ. ಇಬ್ಬರು ಕಾಲು ಮುರಿತ ಹಾಗೂ ಬೆನ್ನುಮೂಳೆ ಗಾಯಗಳಿಂದ ಬಳಲುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.