ನಟ ವಿಕ್ಕಿ ಕೌಶಲ್ ಅಭಿನಯದ ‘ಛಾವಾ’ ಚಿತ್ರ
ಮುಂಬೈ: ಛಾವಾ ಖ್ಯಾತಿಯ ನಟ ವಿಕ್ಕಿ ಕೌಶಲ್ ಅವರು ನಿನ್ನೆ (ಮಂಗಳವಾರ) ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜ ಅವರ ಜಯಂತಿಯ ಪ್ರಯುಕ್ತ ಗೌರವ ನಮನ ಸಲ್ಲಿಸಿದ್ದಾರೆ.
ಈ ಸಂಬಂಧ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಮರಾಠ ಯೋಧರ ಧೈರ್ಯ, ಸಾಹಸ ಸ್ಫೂರ್ತಿದಾಯಕವಾದ್ದದ್ದು. ' ಸಂಭಾಜಿ ಮಹಾರಾಜರು ಶರಣಾಗತಿಗಿಂತ ಸಾವನ್ನು ಆರಿಸಿಕೊಂಡ ನಾಯಕ. ಕಠಿಣ ಪರಿಸ್ಥಿತಿಗಳ ನಡುವೆಯೂ ನಂಬಿಕೆಗಳಿಗಾಗಿ ಬದುಕಿ, ಮಡಿದ ಯೋಧ' ಎಂದು ತಿಳಿಸಿದ್ದಾರೆ.
'ಕೆಲವು ಪಾತ್ರಗಳು ನಿಮ್ಮೊಂದಿಗೆ ಶಾಶ್ವತವಾಗಿ ಉಳಿಯುತ್ತವೆ, ‘ಛಾವಾ‘ ಚಿತ್ರದಲ್ಲಿ ಛತ್ರಪತಿ ಸಂಭಾಜಿ ಮಹಾರಾಜ ಪಾತ್ರವನ್ನು ನಿರ್ವಹಿಸಿರುವುದು ಅವುಗಳಲ್ಲಿ ಒಂದು. ಸಂಭಾಜಿ ಮಹಾರಾಜ ಕಥೆ ಕೇವಲ ಇತಿಹಾಸವಲ್ಲ'. ಇದು ಇನ್ನೂ ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡುವ ಧೈರ್ಯ, ತ್ಯಾಗದ ಯಶೋಗಥೆ ಎಂದು ಪೋಸ್ಟ್‌ನಲ್ಲಿ ವಿಕ್ಕಿ ಬರೆದುಕೊಂಡಿದ್ದಾರೆ.
ಛತ್ರಪತಿ ಸಂಭಾಜಿ ಮಹಾರಾಜ್ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದ ಹೆಸರು 'ಛಾವಾ' (ಮರಾಠಿಯಲ್ಲಿ ಸಿಂಹದ ಮರಿ ಎಂದರ್ಥ). ಮರಾಠಾ ಸಾಮ್ರಾಜ್ಯದ ಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗ. ಸಂಭಾಜಿ ಮಹಾರಾಜ್ ಅವರನ್ನು ಮಾರ್ಚ್ 1689ರ ಮಾರ್ಚ್ 11ರಂದು ಮೊಘಲ್ ಚಕ್ರವರ್ತಿ ಔರಂಗಜೇಬ್ ಗಲ್ಲಿಗೇರಿಸಿದನು.
ಕಳೆದ ತಿಂಗಳು ಬಿಡುಗಡೆಯಾದ ‘ಛಾವಾ‘ ಚಿತ್ರದಲ್ಲಿ ವಿಕ್ಕಿ ಕೌಶಲ್ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಕ್ಷ್ಮಣ್ ಉಟೇಕರ್ ನಿರ್ದೇಶನದ ಚಿತ್ರ ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ ₹700 ಕೋಟಿಗೂ ಹೆಚ್ಚು ಹಣ ಗಳಿಸಿದೆ. ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ಅಕ್ಷಯ್ ಖನ್ನಾ ಸಹ ನಟಿಸಿದ್ದಾರೆ,
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.