
ನವದೆಹಲಿ: ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ತಮ್ಮ ಕುರಿತು ನಕಲಿ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಖ್ಯಾತ ಸಾಹಿತಿ, ಗೀತರಚನೆಕಾರ ಜಾವೇದ್ ಅಖ್ತರ್ ಎಚ್ಚರಿಕೆ ನೀಡಿದ್ದಾರೆ.
‘ಕೊನೆಗೂ ದೇವರಲ್ಲಿ ನಂಬಿಕೆಯಿಟ್ಟ ಜಾವೇದ್ ಅಖ್ತರ್’ ಎಂಬ ಶೀರ್ಷಿಕೆಯಡಿ ಹರಿದಾಡುತ್ತಿರುವ ಎಐ ವಿಡಿಯೊದಲ್ಲಿ ಜಾವೇದ್ ಅಖ್ತರ್ ಅವರನ್ನು ಮುಸ್ಲಿಂ ಧಾರ್ಮಿಕ ಮುಖಂಡರಂತೆ ಚಿತ್ರಿಸಲಾಗಿದೆ. ಇದರ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಜಾವೇದ್, ‘ಇಂತಹ ನಕಲಿ ಸುದ್ದಿಗಳಿಂದ ತಮ್ಮ ವ್ಯಕ್ತಿತ್ವಕ್ಕೆ ಹಾನಿ ಉಂಟಾಗುತ್ತಿದೆ’ ಎಂದು ಹೇಳಿದ್ದಾರೆ.
‘ಮುಸ್ಲಿಂ ಧಾರ್ಮಿಕ ಟೋಪಿ ಧರಿಸಿರುವ ನನ್ನ ನಕಲಿ ವಿಡಿಯೊವೊಂದು ಹರಿದಾಡುತ್ತಿದೆ. ‘ಕೊನೆಗೂ ದೇವರಲ್ಲಿ ನಾನು ನಂಬಿಕೆ ಇಟ್ಟಿದ್ದೇನೆ’ ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಇದು ಸುಳ್ಳು ಸುದ್ದಿಯಾಗಿದೆ’ ಎಂದಿದ್ದಾರೆ.
‘ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಸೈಬರ್ ಪೊಲೀಸರಿಗೆ ದೂರು ನೀಡಲಿದ್ದೇನೆ. ಈ ನಕಲಿ ಸುದ್ದಿಯನ್ನು ಸೃಷ್ಟಿಸಿದ ವ್ಯಕ್ತಿ ಮತ್ತು ಅದರ ಹಿಂದಿರುವವರನ್ನು ನ್ಯಾಯಾಲಯದ ಮುಂದೆ ನಿಲ್ಲಿಸಲಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.
ಎಐ ಬಳಸಿ ಸೆಲಬ್ರಿಟಿಗಳ ನಕಲಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಅನೇಕ ಪ್ರಕರಣಗಳು ನಡೆದಿವೆ. ನಟಿಯರಾದ ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಂಗನಾ ರನೌತ್, ನಟ ಅಕ್ಷಯ್ ಕುಮಾರ್ ಸೇರಿ ಅನೇಕರು ಇದರ ಬಲಿಪಶುಗಳಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.