ನಟ ಶಿವರಾಜ್‌ಕುಮಾರ್ ಆರೋಗ್ಯ ವಿಚಾರಿಸಿದ ಧನಂಜಯ
ಬೆಂಗಳೂರು: ನಟ ಶಿವರಾಜ್‌ಕುಮಾರ್ ಅವರನ್ನು ನಟಿ ಜಯಮಾಲ, ನಟರಾದ ಡಾಲಿ ಧನಂಜಯ, ಶ್ರೀನಿ, ನಿರ್ಮಾಪಕರಾದ ಸಾ.ರಾ.ಗೋವಿಂದು, ಆರ್.ಚಂದ್ರು, ಎನ್.ಎಂ.ಸುರೇಶ್ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಕಳೆದ ಡಿ.24ರಂದು ಅಮೆರಿಕದ ಮಯಾಮಿ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಕ್ಯಾನ್ಸರ್‌ನಿಂದ ಸಂಪೂರ್ಣ ಗುಣಮುಖರಾಗಿರುವ ಶಿವರಾಜ್‌ಕುಮಾರ್ ಭಾನುವಾರ(ಜ.26) ಬೆಂಗಳೂರಿಗೆ ಮರಳಿದ್ದರು. ನಗರದ ನಾಗವಾರದಲ್ಲಿರುವ ಶಿವರಾಜ್‌ಕುಮಾರ್ ನಿವಾಸಕ್ಕೆ ಅಭಿಮಾನಿಗಳು, ಚಂದನವನದ ಕಲಾವಿದರು ಭೇಟಿ ನೀಡಿ ಶಿವರಾಜ್‌ಕುಮಾರ್ ಆರೋಗ್ಯ ವಿಚಾರಿಸುತ್ತಿದ್ದಾರೆ.
ಶಿವರಾಜ್‌ಕುಮಾರ್ ಭೇಟಿ ಬಳಿಕ ಮಾತನಾಡಿದ ಜಯಮಾಲ, ‘ಶಿವರಾಜ್‌ಕುಮಾರ್ ಯಾವುತ್ತೂ ರಾಜನೇ. ಅವರು ಎಲ್ಲವನ್ನೂ ಗೆದ್ದು ಬಂದಿದ್ದಾರೆ. ಸೂಪರ್‌ಸ್ಟಾರ್ ಆಗಿಯೇ ಚಿತ್ರರಂಗವನ್ನು ಆಳುತ್ತಾರೆ. ಆ ನಂಬಿಕೆ ನನಗೆ ಇದೆ. ಗೆದ್ದು ಬರುವ ಆತ್ಮವಿಶ್ವಾಸ ಅವರಿಗೆ ಇತ್ತು. ಆ ಆತ್ಮವಿಶ್ವಾಸ ಇಂದು ಕಣ್ಣಮುಂದೆ ಇದೆ’ ಎಂದಿದ್ದಾರೆ.
ಧನಂಜಯ ಮಾತನಾಡಿ, ‘ಶಿವರಾಜ್‌ಕುಮಾರ್ ಆರೋಗ್ಯವಾಗಿದ್ದಾರೆ. ಎರಡು ಮೂರು ವಾರಗಳಲ್ಲಿ ಶಿವರಾಜ್‌ಕುಮಾರ್ ಅವರು ಶೂಟಿಂಗ್‌ಗೆ ಮರಳಬಹುದು ಎಂದು ಗೀತಾ ಶಿವರಾಜ್‌ಕುಮಾರ್ ಅವರು ಬಹಳ ಖುಷಿಯಲ್ಲಿ ಹೇಳಿದರು. ಈ ವಿಷಯದಲ್ಲಿ ಅದ್ಭುತವಾದ ಉದಾಹರಣೆ ಹಾಗೂ ಸ್ಫೂರ್ತಿ ಅವರು. ಕ್ಯಾನ್ಸರ್ ಇರುವುದು ಗೊತ್ತಿದ್ದರೂ ಶಿವಣ್ಣ ಕುಗ್ಗಲಿಲ್ಲ. ಖುಷಿಯಾಗಿ, ಮತ್ತಷ್ಟು ಸದೃಢವಾಗಿ ಮರಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.