ಜಾನಕಿ v/s ಸ್ಟೇಟ್ ಕೇರಳ ಪೋಸ್ಟರ್
ಕೊಚ್ಚಿ: ‘ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ’ ಸಿನಿಮಾ ಬಿಡುಗಡೆಗೆ ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಅನುಮತಿ ನಿರಾಕರಿಸಿದೆ. ಇದರ ಬೆನ್ನಲ್ಲೇ ಕಲಾವಿದರು ಸೇರಿದಂತೆ ಕೇರಳ ಚಲನಚಿತ್ರೋದ್ಯಮದ ಅನೇಕರು ಸಿಬಿಎಫ್‌ಸಿ ಕಚೇರಿ ಎದುರು ಸೋಮವಾರ ಧರಣೆ ನಡೆಸಲಿದ್ದಾರೆ.
ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಅಭಿನಯದ ಜೆಎಸ್‌ಕೆ (ಜಾನಕಿ ವರ್ಸಸ್ ಸ್ಟೇಟ್ ಆಫ್ ಕೇರಳ) ಚಿತ್ರದಲ್ಲಿ 'ಜಾನಕಿ' ಎಂಬುವುದು ರಾಮಾಯಣದ ಸೀತಾ ದೇವಿಯ ಮತ್ತೊಂದು ಹೆಸರಾಗಿರುವುದರಿಂದ ಈ ಚಿತ್ರದ ಶೀರ್ಷಿಕೆಯ ಪಾತ್ರವನ್ನು ಬದಲಾಯಿಸುವಂತೆ ಸಿಬಿಎಫ್‌ಸಿ ಪರಿಷ್ಕರಣಾ ಸಮಿತಿ ಮೌಖಿಕವಾಗಿ ನಿರ್ದೇಶನ ನೀಡಿದೆ.
ತಿರುವನಂತಪುರಂನಲ್ಲಿರುವ ಸಿಬಿಎಫ್‌ಸಿ ಕಚೇರಿಯ ಎದುರು ಪ್ರತಿಭಟನೆ ನಡೆಯಲಿದ್ದು ಇಡೀ ಚಲನಚಿತ್ರೋದ್ಯಮದ ಜನರು ಭಾಗವಹಿಸಲಿದ್ದಾರೆ ಎಂದು ಕೇರಳ ಚಲನಚಿತ್ರ ನೌಕರರ ಒಕ್ಕೂಟ (ಫೆಫ್ಕಾ) ಪ್ರಧಾನ ಕಾರ್ಯದರ್ಶಿ ಬಿ.ಉನ್ನಿಕೃಷ್ಣನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸಿಬಿಎಫ್‌ಸಿಯ ನಿರ್ಧಾರವನ್ನು 'ಸರ್ವಾಧಿಕಾರದ ಧೋರಣೆ' ಎಂದು ಟೀಕಿಸಿರುವ, ಉನ್ನಿಕೃಷ್ಣನ್ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಸಮಿತಿಯಿಂದ ಚಿತ್ರಕ್ಕೆ ಅನುಮೋದನೆ ದೊರೆತ ನಂತರ ಹೆಸರು ಬದಲಾವಣೆಯನ್ನು ಏಕೆ ಸೂಚಿಸಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಸೆನ್ಸಾರ್ ಮಂಡಳಿಯಿಂದ ಅನುಮೋದನೆ ಪಡೆದಿರುವ ಜೆಎಸ್‌ಕೆ ಚಿತ್ರದ ಟೀಸರ್ ಮತ್ತು ಟ್ರೇಲರ್ ಕಳೆದ ಒಂದು ತಿಂಗಳಿನಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಇದು ಯಾವುದೇ ಕೋಮು ಸೌಹಾರ್ದತೆಯನ್ನು ಸೃಷ್ಟಿಸಿದೆಯೋ? ಈ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ.
ಏತನ್ಮಧ್ಯೆ, ಪ್ರಮಾಣೀಕರಣ ವಿಳಂಬದ ವಿರುದ್ಧ ಚಿತ್ರದ ನಿರ್ಮಾಪಕರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿರುವ ಕೇರಳ ಹೈಕೋರ್ಟ್, ಸೆನ್ಸಾರ್ ಮಂಡಳಿಯು ಶುಕ್ರವಾರವೇ ತನ್ನ ನಿರ್ಧಾರವನ್ನು ನ್ಯಾಯಾಲಯಕ್ಕೆ ತಿಳಿಸುವಂತೆ ನಿರ್ದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.