ಮುಂಬೈ: ಬಾಲಿವುಡ್ ನಟಿ ಕಂಗನಾ ರನೌತ್ ಅಭಿನಯದ ಎಮರ್ಜೆನ್ಸಿ ಚಿತ್ರವು ಬಿಡುಗಡೆಗೊಂಡ ಮೂರು ದಿನಗಳಲ್ಲಿ ಕೇವಲ ₹12.26 ಕೋಟಿ ಗಳಿಸಿದೆ ಎಂದು ಚಿತ್ರತಂಡ ತಿಳಿಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಚಿತ್ರ ನಿರ್ಮಾಣ ಸಂಸ್ಥೆ ಮಣಿಕರ್ಣಿಕಾ ಫಿಲ್ಮ್ಸ್ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
ಈ ಚಿತ್ರವು ಪ್ರೇಕ್ಷಕರ ಹೃದಯವನ್ನು ಗೆದ್ದಿದೆ. ದೇಶದ ಇತಿಹಾಸದ ಪ್ರಮುಖ ಘಟನಾವಳಿಯನ್ನು ಶಕ್ತಿಯುತವಾಗಿ ಹೇಳುವ ಕಥೆ ಇದಾಗಿದೆ. ಈ ಚಿತ್ರವನ್ನು ನೋಡಿ, ಇತಿಹಾಸವು ನಿಮ್ಮ ಕಣ್ಣೆದರು ನಡೆದಂತೆ ಅನುಭವವಾಗುತ್ತದೆ ಎಂದು ನಿರ್ಮಾಣ ಸಂಸ್ಥೆ ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ವಿವಾದಗಳಿಂದಲೇ ಹೆಚ್ಚು ಸದ್ದು ಮಾಡಿದ್ದ ಎಮರ್ಜೆನ್ಸಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಹೆಚ್ಚು ಸದ್ದು ಮಾಡಲಿಲ್ಲ ಎನ್ನಲಾಗಿದೆ.
1975ರ ತುರ್ತು ಪರಿಸ್ಥಿತಿ ಕಥಾ ಹಂದರವನ್ನು ಒಳಗೊಂಡಿರುವ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ನಟಿ ಕಂಗನಾ ರನೌತ್ ಕಾಣಿಸಿಕೊಂಡಿದ್ದಾರೆ.
ಮಾಜಿ ಪ್ರಧಾನಿ, ದಿವಂಗತ ಇಂದಿರಾ ಗಾಂಧಿ ಜೀವನಾಧಾರಿತ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನದ ಹೊಣೆ ನಿಭಾಯಿಸಿರುವ ಕಂಗನಾ, ಮುಖ್ಯಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಸಹ ನಿರ್ಮಾಪಕಿಯಾಗಿ ಬಂಡವಾಳವನ್ನೂ ಹೂಡಿದ್ದಾರೆ.
ಚಿತ್ರದಲ್ಲಿ ಸಿಖ್ ಸಮುದಾಯದ ಬಗೆಗಿನ ನಿರೂಪಣೆ ಸೂಕ್ತವಾಗಿಲ್ಲ. ಐತಿಹಾಸಿಕ ಸಂಗತಿಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಶಿರೋಮಣಿ ಅಕಾಲಿ ದಳ ಸೇರಿದಂತೆ ಕೆಲ ಸಿಖ್ ಸಂಘಟನೆಗಳು ಸಿನಿಮಾ ಬಿಡುಗಡೆಗೆ ಈ ಹಿಂದೆಯೂ ಆಕ್ಷೇಪ ವ್ಯಕ್ತಪಡಿಸಿದ್ದವು. ಹೀಗಾಗಿ, ಸಿನಿಮಾದಲ್ಲಿ ಕೆಲವು ಭಾಗಗಳಿಗೆ ಕತ್ತರಿ ಹಾಕಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.