ADVERTISEMENT

ಹಾಸ್ಯ ನಟ, ರಂಗಭೂಮಿ ಕಲಾವಿದ ರಾಜು ತಾಳಿಕೋಟಿ ಇನ್ನಿಲ್ಲ

ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 13:22 IST
Last Updated 13 ಅಕ್ಟೋಬರ್ 2025, 13:22 IST
<div class="paragraphs"><p>ರಾಜು ತಾಳಿಕೋಟಿ</p></div>

ರಾಜು ತಾಳಿಕೋಟಿ

   

ಧಾರವಾಡ : ಧಾರವಾಡ ರಂಗಾಯಣ ನಿರ್ದೇಶಕರಾಗಿದ್ದ ಹಾಸ್ಯ ನಟ, ರಂಗಭೂಮಿ ಕಲಾವಿದ, ರಂಗಕರ್ಮಿ ರಾಜು ತಾಳಿಕೋಟಿ (62) ಅವರು ಸೋಮವಾರ ಮಣಿಪಾಲ್‌ದ ಕೆಎಂಸಿ ಆಸ್ಪತ್ರೆಯಲ್ಲಿ ತೀವ್ರ ಹೃದಯಘಾತದಿಂದ ನಿಧನರಾದರು ಎಂದು ಅವರ ಮಗ ಭರತ ತಾಳಿಕೋಟಿ ತಿಳಿಸಿದ್ದಾರೆ.

ಚಲನಚಿತ್ರದ ಚಿತ್ರೀಕರಣಕ್ಕಾಗಿ ಮಂಗಳೂರಿನಲ್ಲಿದ್ದ ರಾಜು ತಾಳಿಕೋಟಿ ಅವರಿಗೆ ನಿನ್ನೆ ರಾತ್ರಿ ತೀವ್ರ ಹೃಯಾಘಾತ ಆಗಿತ್ತು. ತಕ್ಷಣ ಅವರನ್ನು ಮಂಗಳೂರು ನಗರದ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಿಸದೆ ಇಂದು ಸಂಜೆ ಆಸ್ತತ್ರೆಯಲ್ಲಿ ನಿಧನರಾದರು.

ADVERTISEMENT

ನಾಳೆ ದಿನ ಅವರ ಊರು ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಚಿಕ್ಕಸಿಂದಗಿಯಲ್ಲಿ ಅಂತ್ಯಕ್ರಿಯೆ ಜರುಗಲಿದೆ ಎಂದು ಅವರ ಪುತ್ರ ಭರತ ತಾಳಿಕೋಟಿ ಅವರು ತಿಳಿಸಿದ್ದಾರೆ.

ರಾಜು ತಾಳಿಕೋಟಿ ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟಿಯವರಾಗಿದ್ದರು. ಇತ್ತೀಚೆಗೆ ರಂಗಾಯಣ ಧಾರವಾಡದ ನಿರ್ದೇಶಕರಾಗಿದ್ದರು.

ಕಲಿಯುಗದ ಕುಡುಕ ಸೇರಿದಂತೆ ಅನೇಕ ಉತ್ತರ ಕರ್ನಾಟಕದ ಹಾಸ್ಯ ನಾಟಕಗಳಲ್ಲಿ ಅಭಿನಯಿಸಿ ಮನೆಮಾತಾಗಿದ್ದರು. ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

ರಾಜು ತಾಳಿಕೋಟಿ ಪರಿಚಯ, ಸಾಧನೆ

ಜನ್ಮ ಸ್ಥಳ- : ತಾಳಿಕೋಟೆ, ಮುದ್ದೇಬಿಹಾಳ ತಾಲ್ಲೂಕು ವಿಜಯಪುರ ಜಿಲ್ಲೆ

ವಿದ್ಯಾರ್ಹತೆ- : 4ನೇ ತರಗತಿ, ಇಬ್ಬರು ಅಕ್ಕಂದಿರು, ಒಬ್ಬ ಅಣ್ಣ

ಪತ್ನಿ- ಪ್ರೇಮಾ ತಾಳಿಕೋಟೆ (ರಂಗ ಕಲಾವಿದೆ)

ಮಕ್ಕಳು– ಇಬ್ಬರು ಗಂಡು ಮಕ್ಕಳು. ಮೂವರು ಹೆಣ್ಣುಮಕ್ಕಳು

ನೂರಾರು ನಾಟಕಗಳಲ್ಲಿ ಅಭಿನಯ

ಏಳನೇ ವಯಸ್ಸಿನಲ್ಲಿಯೇ ಅವರ ತಂದೆಯವರ ಮಾಲೀಕತ್ವದ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ ತಾಳಿಕೋಟಿಯಲ್ಲಿ ಸತ್ಯ ಹರೀಶ್ಚಂದ್ರ ನಾಟಕದಲ್ಲಿ ಲೋಹಿತಾಶ್ವ, ರೇಣುಕಾ ಎಲ್ಲಮ್ಮ ನಾಟಕದಲ್ಲಿ ಬಾಲ ಪರಶುರಾಮ, ಬಾಲಚಂದ್ರ ನಾಟಕದಲ್ಲಿ ಬಾಲಚಂದ್ರನ ಪಾತ್ರಗಳಲ್ಲಿ ನಟನೆ. ತಂದೆ ಪಾರ್ಶ್ವವಾಯ ಪೀಡಿತರಾದರೆ ತಾಯಿ ಕ್ಯಾನ್ಸರ ಕಾಯಿಲೆಗೆ ತುತ್ತಾದಾಗ ಬದುಕಿಗಾಗಿ ಹೊಟೇಲ್ ಮಾಣಿಯಾಗಿ, ಲಾರಿ ಕ್ಲೀನರಾಗಿ ಕೆಲಸ ಮಾಡಿದರು. 1977-78ರಲ್ಲಿ ಜೀವಿ ಕೃಷ್ಣರ ನಾಟಕ ಕಂಪನಿ, ಶ್ರೀ ಗುರುಪ್ರಸಾದ ನಾಟ್ಯ ಸಂಘ ಕಡಪಟ್ಟಿ, ಪಂಚಾಕ್ಷರಿ ವಿಜಯ ನಾಟ್ಯ ಸಂಘ, ಚಿತ್ತರಗಿಯಲ್ಲಿ ನೇಪಥ್ಯದ ಕಲಾವಿದನಾಗಿ (ಪ್ರಚಾರ, ಪ್ರಸಾಧನ, ಗೇಟ ಕೀಪರ) ಸೇವೆ. ಈ ಮಧ್ಯ ಕಂಪನಿಯ ಹಿರಿಯ ನಟರೊಬ್ಬರು ಕೈ ಕೊಟ್ಟಾಗ ಅನಿರೀಕ್ಷಿತವಾಗಿ ತಾಳಿತಕರಾರು ನಾಟಕದಲ್ಲಿ ಸುಮಿತ್ರ (ಕಿವುಡ) ಪಾತ್ರದಲ್ಲಿ ಅಭಿನಯಿಸಿ ಜನಪ್ರೀತಿ ಗಳಿಸಿದೆ. ಅಂದಿನಿಂದ ಪಾತ್ರಗಳು ಯಶಸ್ಸು ತಂದು ಕೊಟ್ಟವು. ದಿ|ಸಾಳುಂಕಿಯವರ ಕಣ್ಣಿದ್ದರೂ ಬುದ್ದಿ ಬೇಕು, ಹೂವಿನ ಅಂಗಡಿ, ದೇವರಿಗೆ ನೆನಪಿಲ್ಲ, ಭಾಗ್ಯಬಂತು ಬುದ್ದಿಹೋಯಿತು. ಕಾಲುಕೆದರಿದ ಹೆಣ್ಣು ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯ. 1984ರಲ್ಲಿ ಶ್ರೀ ಶರೀಫ ಶಿವಯೋಗಿ ವಿಜಯ ನಾಟ್ಯ ಸಂಘ, ಯಂಕಂಚಿಯನ್ನು 03 ವರ್ಷಗಳ ಕಾಲ ನಡೆಸಲಾಯಿತು. ನಂತರ ಶ್ರೀ ಹುಚ್ಚೆಶ್ವರ ನಾಟ್ಯ ಸಂಘ, ಕಮತಗಿಯಲ್ಲಿ ಪತ್ನಿ (ಪ್ರೇಮಾ ತಾಳಿಕೋಟೆ ಕಲಾವಿದೆ) ಜೊತೆಗೂಡಿ 1996ರವರೆಗೆ ರಂಗ ಸೇವೆ. ಈ ಕಂಪನಿಯಲ್ಲಿ ಹಸಿರು ಬಳೆ, ಸೈನಿಕ ಸಹೋದರಿ, ಶ್ರೀ ಗರಗದ ಮಡಿವಾಳೇಶ್ವರ ಮಹಾತ್ಮ, ಚಿತ್ರನಟ ದಿ|ಸುಧೀರ ಜೊತೆ ಸಿಂಧೂರ ಲಕ್ಷಣ, ಹಿರಿಯ ಕಲಾವಿದೆ ಉಮಾಶ್ರೀಯವರ ಜೊತೆ ಬಸ್ ಕಂಡಕ್ಟರ್, ಸೊಸೆ ಹಾಕಿದ ಸವಾಲು ಸೇರಿದಂತೆ ಹಲವಾರು ನಾಟಕಗಳಲ್ಲಿ ಸೇವೆ.

1998ರಲ್ಲಿ ಮತ್ತೆ ಶ್ರೀ ಖಾಸ್ಗತೇಶ್ವರ ನಾಟ್ಯ ಸಂಘ ಪುನರ್‌ಸ್ಥಾಪಿಸಿ ಶ್ರೀ ಗುರು ಖಾಸ್ಗತೇಶ್ವರ ಮಹಾತ್ಮ. ಮುತ್ತೈದೆ ನೀ ಮತ್ತೊಮ್ಮೆ ಬಾ, ವರಪುತ್ರ. ಮನೆಗೆ ಬಂದ ಮಹಾಲಕ್ಷ್ಮೀ, ಕುಡುಗೋಲು ನುಂಗಬ್ಯಾಡ್ರಿ, ಯಾರು ನಂಬುವದು ಯಾರ ಬಿಡೂವುದು. ಹ್ಯಾಂಗರ ಬರಿ ನಕ್ಕೋತ ಹೋಗ್ರಿ ಸೇರಿದಂತೆ ಹಲವಾರು ನಾಟಕಗಳು ಕರ್ನಾಟಕದಾದ್ಯಂತ ಸಾವಿರಾರು ಪ್ರದರ್ಶನ ಕಂಡಿವೆ.

ಧ್ವನಿಮುದ್ರಿಕೆಗಳು: ಕಲಿಯುಗದ ಕುಡುಕ (ಈ ನಾಟಕವು 40 ಸಾವಿರಕ್ಕೂ ಹೆಚ್ಚು ಪ್ರಯೋಗಗಳು ಕಂಡು ಅಪಾರ ಜನಮನ್ನಣೆಗಳಿಸಿದೆ). ಕುಡುಕರ ಸಾಮ್ರಾಜ್ಯ, ಲತ್ತುಗುಣಿ ಲಕ್ಕವ್ವ, ಅಸಲಿ ಕುಡುಕ.

ಕನ್ನಡ ಚಲನಚಿತ್ರರಂಗ: ಹೆಂಡ್ತಿ ಅಂದರೆ ಹೆಂಡತಿ, ಪಂಜಾಬಿ ಹೌಸ್, ಮನಸಾರೆ, ಪಂಚರಂಗಿ, ಪರಮಾತ್ಮ, ಲಿಫ್ಟ್ ಕೊಡ್ಲಾ, ಜಾಕಿ, ಸುಗ್ರೀವ, ಕಳ್ಳ ಮಳ್ಳ ಸುಳ್ಳ, ಭೀಮಾತೀರದಲ್ಲಿ ಸೇರಿದಂತೆ 35 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ

ಬಿರುದುಗಳು: ಹಾಸ್ಯ ರತ್ನಾಕರ, ಹಾಸ್ಯ ಸಾಮ್ರಾಟ, ಕಾಮಿಡಿ ಕಿಂಗ್, ಕೆಸೇಟ್ ಕಿಂಗ್, ಕನ್ನಡದ ಸೆಂದಿಲ್

ಪ್ರಶಸ್ತಿಗಳು: 2010ರಲ್ಲಿ ಸುವರ್ಣ ವಾಹಿನಿಯ ಬೆಸ್ಟ ಕಾಮಿಡಿ, 2011ರಲ್ಲಿ ಫೀಲ್ಮಫೇರ್ ಅವಾರ್ಡ, 2013ರಲ್ಲಿ ಬೆಸ್ಟ್ ಕಾಮಿಡಿಯನ್, 2015ರಲ್ಲಿ ರಾಜ್ಯೋತ್ಸವ ಚಿತ್ರ ಸಂಸ್ಥೆಯಲ್ಲಿ ಪಾಪುಲರ್ ಅವಾರ್ಡ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.