
ಚನ್ನೇಗೌಡ
ಮಂಡ್ಯ: ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಕನ್ನಡ ಸಿನಿಮಾ ಖ್ಯಾತಿಯ ನೊದೆಕೊಪ್ಪಲು ಗ್ರಾಮದ ಗಡ್ಡಪ್ಪ ಅಲಿಯಾಸ್ ಚನ್ನೇಗೌಡ (89) ಬುಧವಾರ ನಿಧನರಾಗಿದ್ದಾರೆ.
ಆಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಗಡ್ಡಪ್ಪ ಅವರು ತಿಂಗಳ ಹಿಂದೆ ಬಿದ್ದು ಸೊಂಟಕ್ಕೆ ಪೆಟ್ಟು ಮಾಡಿಕೊಂಡಿದ್ದರು. ಆಪರೇಷನ್ ಕೂಡ ಆಗಿತ್ತು. ಬುಧವಾರ ಮುಂಜಾನೆ ಕೊನೆಯುಸಿರೆಳೆದಿದ್ದಾರೆ.
ತಿಥಿ, ತರ್ಲೆ ವಿಲೇಜ್, ಜಾನಿ ಮೇರಾ ನಾಮ್, ಹಳ್ಳಿ ಪಂಚಾಯಿತಿ ಸೇರಿದಂತೆ 10ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದರು.
ಸ್ವಗ್ರಾಮ ನೊದೆಕೊಪ್ಪಲು ಗ್ರಾಮದ ಅವರ ಜಮೀನಿನಲ್ಲಿ ಬುಧವಾರ ಸಂಜೆ 5ಕ್ಕೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಪುತ್ರಿ ಶೋಭಾ ಮಾಹಿತಿ ನೀಡಿದ್ದಾರೆ.
ಸಿನಿಮಾ ಅಂದ್ರೆ ಹುಚ್ಚು
‘ನಮ್ಮ ತಂದೆಗೆ ಸಿನಿಮಾ ಅಂದ್ರೆ ಒಂದು ರೀತಿಯ ಹುಚ್ಚು. ಚಿತ್ರಮಂದಿರಕ್ಕೆ ಹೋಗಿ ವೀಕ್ಷಿಸುತ್ತಿದ್ದರು. ಸಿನಿಮಾ ಅವಕಾಶಗಳು ಸಿಕ್ಕರೂ ಅನಾರೋಗ್ಯದ ಕಾರಣ ಇತ್ತೀಚೆಗೆ ನಟಿಸಲು ಸಾಧ್ಯವಾಗಲಿಲ್ಲ. ಹೋಟೆಲ್ ನಡೆಸುತ್ತಿದ್ದ ದಿನದಿಂದಲೂ ನಮ್ಮ ತಂದೆಗೆ ಗಡ್ಡಪ್ಪ ಅನ್ನೋ ಹೆಸರು ಇತ್ತು. ಆ ಹೆಸರೇ ‘ತಿಥಿ’ ಸಿನಿಮಾದಲ್ಲೂ ಬಳಕೆಯಾಯಿತು. ಕೆಲವು ಅಭಿಮಾನಿಗಳು ಗಡ್ಡಪ್ಪನವರನ್ನು ಹುಡುಕಿಕೊಂಡು ಬರುತ್ತಿದ್ದರು. ನಮ್ಮ ತಂದೆಯವರಿಂದಲೇ ಮನೆ ನಡೆಯುತ್ತಿತ್ತು’ ಎಂದು ಪುತ್ರಿ ಶೋಭಾ ಕಣ್ಣೀರು ಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.