ADVERTISEMENT

‘ಟಾಕ್ಸಿಕ್‌’ ಮೇಲೆ ನಿರೀಕ್ಷೆ ಅಪಾರ; ವೃದ್ಧಿಸಬಹುದೆ ಚಿತ್ರರಂಗದ ವ್ಯವಹಾರ?

ವಿನಾಯಕ ಕೆ.ಎಸ್.
Published 2 ಜನವರಿ 2026, 0:16 IST
Last Updated 2 ಜನವರಿ 2026, 0:16 IST
   

2025 ರಲ್ಲಿ ಕನ್ನಡದ ಸುಮಾರು 230ಕ್ಕೂ ಹೆಚ್ಚು ಸಿನಿಮಾಗಳು ತೆರೆಕಂಡಿವೆ. ಆದರೆ ಬಾಕ್ಸಾಫೀಸ್‌ ಕೊಳ್ಳೆ ಹೊಡೆದಿದ್ದು ಎರಡು ಸಿನಿಮಾಗಳು ಮಾತ್ರ! ಹಾಕಿದ ಬಂಡವಾಳ ಮರುಗಳಿಕೆ ಮಾಡಿದ ಸಿನಿಮಾಗಳ ಸಂಖ್ಯೆ ಹತ್ತು ದಾಟಲಾರವು. ವರ್ಷದ ಅಂತ್ಯದಲ್ಲಿ ತೆರೆಕಂಡ ಸ್ಟಾರ್‌ ನಟರ ಸಿನಿಮಾಗಳಿಗೆ ಪ್ರೇಕ್ಷಕರ ಪ್ರತಿಕ್ರಿಯೆ ಆಶಾದಾಯಕವಾಗಿರಲಿಲ್ಲ. ಇವೆಲ್ಲವುಗಳ ನಡುವೆ 2026ರಲ್ಲಿ ಉದ್ಯಮ ಮತ್ತೆ ಪುಟಿದೇಳಬಹುದೆಂಬ ನಿರೀಕ್ಷೆ ಚಿತ್ರರಂಗದ್ದು.

‘ಚಿತ್ರರಂಗದಲ್ಲಿ ಯಶಸ್ಸಿನ ಪ್ರಮಾಣ ಬಹಳ ಕಡಿಮೆ. 2025ರಲ್ಲಿ ಹಾಕಿದ ಬಂಡವಾಳ ಪೂರ್ತಿಯಾಗಿ ಮರುಗಳಿಸಿದ ಸಿನಿಮಾಗಳು ಕೂಡ ವಿರಳ. 2026ರಲ್ಲಿಯೂ ನಮ್ಮದೇ ಸಂಸ್ಥೆಯ ‘ಟಾಕ್ಸಿಕ್‌’, ‘ಕೆಡಿ’ ಬಿಟ್ಟರೆ ಈಗಾಗಲೇ ಬಿಡುಗಡೆ ದಿನಾಂಕ ಘೋಷಣೆಗೊಂಡ ಸ್ಟಾರ್‌ಗಳ ಬಹುನಿರೀಕ್ಷಿತ ಸಿನಿಮಾಗಳಿಲ್ಲ. ಒಬ್ಬಿಬ್ಬರ ಹೊರತಾಗಿ ಬೇರೆ ಸ್ಟಾರ್‌ ಸಿನಿಮಾಗಳು ಪ್ರಾರಂಭವೇ ಆಗಿಲ್ಲ. ಹೀಗಾಗಿ ಈ ವರ್ಷ ನಿರೀಕ್ಷೆ ಬಹಳ ಕಡಿಮೆ ಇದೆ. ಯಾವ ಸ್ಟಾರ್‌ ಕೂಡ ಲೆಕ್ಕಕ್ಕೆ ಬರುವುದಿಲ್ಲ. ಜನರನ್ನು ಅಚ್ಚರಿಸಿಗೊಳ್ಳುವ ಸಿನಿಮಾಗಳು ಬರಬೇಕಷ್ಟೆ. ಅದರ ಹೊರತಾಗಿ ಬೇರೆ ಯಾವ ಪವಾಡವೂ ನಡೆಯುವುದಿಲ್ಲ’ ಎನ್ನುತ್ತಾರೆ ಸಿನಿಮಾ ವಿತರಕ ಹಾಗೂ ಕೆವಿಎನ್‌ ನಿರ್ಮಾಣ ಸಂಸ್ಥೆಯ ಸುಪ್ರೀತ್‌.

ಚಿತ್ರರಂಗದಲ್ಲಿ ಹೊಸಬರ ಸಿನಿಮಾಗಳು ಗೆಲ್ಲುತ್ತಿಲ್ಲ. ಸ್ಟಾರ್‌ಗಳ ಚಿತ್ರಗಳನ್ನು ಜನ ಕೈ ಹಿಡಿಯುತ್ತಿಲ್ಲ ಎಂಬ ಪರಿಸ್ಥಿತಿಯಿದೆ. ಹಾಗಂತ 2026 ರಲ್ಲಿಯೂ ಚಿತ್ರಗಳ ಸಂಖ್ಯೆ ಕಡಿಮೆಯಾಗುವ ಲಕ್ಷಣಗಳಿಲ್ಲ. ‘2025ರ ನವೆಂಬರ್‌ನಿಂದ ಡಿಸೆಂಬರ್‌ ಅಂತ್ಯದವರೆಗೆ 100ಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್‌ ಆಗಿವೆ. ಪ್ರತಿನಿತ್ಯ ಸರಾಸರಿ ನಾಲ್ಕು ಸಿನಿಮಾಗಳನ್ನು ನೋಡಿ ಸೆನ್ಸಾರ್‌ ಮಾಡಿದ್ದೇವೆ. ಇವುಗಳಲ್ಲಿ 3–4 ಸಿನಿಮಾಗಳನ್ನು ಬಿಟ್ಟು ಉಳಿದವು ಇನ್ನಷ್ಟೆ ಬಿಡುಗಡೆಗೊಳ್ಳಬೇಕಿವೆ’ ಎನ್ನುತ್ತಾರೆ ಬೆಂಗಳೂರಿನ ಸಿಬಿಎಫ್‌ಸಿ (ಸೆನ್ಸಾರ್‌ ಮಂಡಳಿ) ಅಧಿಕಾರಿಗಳು.

ADVERTISEMENT

ಉದ್ಯಮ ಅನುಭವಿಗಳ ಪ್ರಕಾರ 2025ರ 125ಕ್ಕೂ ಹೆಚ್ಚು ಸಿನಿಮಾಗಳು ಸೆನ್ಸಾರ್‌ ಆಗಿಯೂ ಬಿಡುಗಡೆಯಾಗದೆ ಉಳಿದಿವೆ. ಅವುಗಳಲ್ಲಿ ಅರ್ಧದಷ್ಟು ಈ ವರ್ಷದ ಮೊದಲಾರ್ಧದಲ್ಲಿ ತೆರೆ ಕಾಣಲಿವೆ. ಕಳೆದ ಕೆಲ ವರ್ಷಗಳ ಅಂಕಿಅಂಶಗಳನ್ನು ಗಮನಿಸಿದರೆ ಪ್ರತಿ ವರ್ಷ 275 ಸಿನಿಮಾಗಳು ಸೆಟ್ಟೇರುತ್ತಿವೆ. ಅದೇ ರೀತಿ ಈ ವರ್ಷವೂ ಮತ್ತೊಂದಷ್ಟು ಹೊಸ ಸಿನಿಮಾಗಳು ಸೇರ್ಪಡೆಗೊಳ್ಳಲಿವೆ. ಅಲ್ಲಿಗೆ ಈ ವರ್ಷ ಬಿಡುಗಡೆಗೊಳ್ಳುವ ಸಿನಿಮಾಗಳ ಸಂಖ್ಯೆ 250 ದಾಟಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇವುಗಳಲ್ಲಿ ಬಹುತೇಕ ಹೊಸಬರ ಸಿನಿಮಾಗಳು.

ಬಹು ನಿರೀಕ್ಷಿತ ಸಿನಿಮಾಗಳ ಕೊರತೆ

2026ರಲ್ಲಿ ಈಗಾಗಲೇ ಬಜ್‌ ಸೃಷ್ಟಿಸಿರುವ ಸಿನಿಮಾಗಳ ಸಂಖ್ಯೆ ಕಡಿಮೆಯಿದೆ. ದುನಿಯಾ ವಿಜಯ್‌ ನಟನೆಯ ‘ಲ್ಯಾಂಡ್‌ಲಾರ್ಡ್‌’ ಜನವರಿಯಲ್ಲಿ ಬಿಡುಗಡೆಗೊಳ್ಳಲಿದೆ. ವಿಜಯ್‌ ಹಿಂದಿನ ಚಿತ್ರ ಹಿಟ್‌ ಆಗಿದ್ದರಿಂದ, ಜತೆಗೆ ‘ಕಾಟೇರ’ ಚಿತ್ರದ ಬರಹಗಾರರಾಗಿದ್ದ ಜಡೇಶ್‌ ಹಂಪಿ ನಿರ್ದೇಶನವಿರುವುದರಿಂದ ನಿರೀಕ್ಷೆ ಹೆಚ್ಚಿದೆ. ಮಾರ್ಚ್‌ನಲ್ಲಿ ಯಶ್‌ ನಟನೆಯ ‘ಟಾಕ್ಸಿಕ್‌’ ಚಿತ್ರ ಮಾ.19ರಂದು ತೆರೆ ಕಾಣಲಿದೆ. ಧ್ರುವ ಸರ್ಜಾ ನಟನೆಯ ‘ಕೆಡಿ’ ಏ.30ರಂದು ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಶಿವರಾಜ್‌ಕುಮಾರ್‌ ನಟನೆಯ ‘ಡ್ಯಾಡ್‌’ ತೆರೆ ಕಾಣುವುದು ಖಚಿತ.

ಕಳೆದ ವರ್ಷ ಸೂಪರ್‌ ಹಿಟ್‌ ಚಿತ್ರಕೊಟ್ಟ ರಿಷಬ್‌ ಶೆಟ್ಟಿಯ ಸಿನಿಮಾವಿಲ್ಲ. ರಕ್ಷಿತ್‌ ಶೆಟ್ಟಿ ಸಿನಿಮಾ ಇನ್ನಷ್ಟೇ ಸೆಟ್ಟೇರಬೇಕಿದೆ. ಉಪೇಂದ್ರ ಅವರ ‘ಭಾರ್ಗವ’ ಈ ವರ್ಷ ತೆರೆ ಕಾಣಲಿದೆ. ಸುದೀಪ್‌ ಅವರ ‘ಬಿಲ್ಲ ರಂಗ ಬಾಷಾ’ ಸೆಟ್ಟೇರಿದೆ. ಅದು ಈ ವರ್ಷ ತೆರೆಗೆ ಬರುವುದು ಅನುಮಾನ. ಆದರೆ ಜೂನ್‌ನಲ್ಲೊಂದು ಸಿನಿಮಾ ತೆರೆಗೆ ತರುವುದಾಗಿ ಸುದೀಪ್‌ ಹೇಳಿದ್ದಾರೆ. ಚಿತ್ರೋದ್ಯಮದಲ್ಲಿ ಎರಡನೇ ಸಾಲಿನಲ್ಲಿ ನಿಲ್ಲುವ ಮಾಸ್‌ ನಾಯಕರ ಸಿನಿಮಾಗಳೂ ಒಂದಷ್ಟಿವೆ. ಡಾಲಿ ಧನಂಜಯ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೊ’ ಈ ವರ್ಷ ತೆರೆ ಕಾಣಲಿದೆ. ಫೆಬ್ರುವರಿಯಲ್ಲಿ ರಾಜ್‌ ಬಿ.ಶೆಟ್ಟಿ ನಟನೆಯ ‘ರಕ್ಕಸಪುರದೊಳ್‌’ ಬಿಡುಗಡೆಯಾಗಲಿದೆ. ಡಾಲಿ ಹಾಗೂ ಶಿವಣ್ಣ ನಟನೆಯ ‘666 ಆಪರೇಷನ್‌ ಡ್ರೀಮ್‌ ಥಿಯೇಟರ್‌’ ಈ ವರ್ಷವೇ ಬರುವ ಬಗ್ಗೆ ಖಚಿತತೆ ಇಲ್ಲ. ನೀನಾಸಂ ಸತೀಶ್‌ ಅವರ ‘ದಿ ರೈಸ್‌ ಆಫ್‌ ಅಶೋಕ’ ಈ ವರ್ಷದ ಮೊದಲಾರ್ಧದಲ್ಲಿ ತೆರೆಗೆ ಬರಲಿದೆ. ‘ಅಯೋಗ್ಯ–2’ ಕೂಡ ಈ ವರ್ಷವೇ ಬಿಡುಗಡೆಗೊಳ್ಳುವ ಸಾಧ್ಯತೆಯಿದೆ. ರಮೇಶ್‌ ಅರವಿಂದ್‌, ಪ್ರಜ್ವಲ್‌ ದೇವರಾಜ್‌ ಸಿನಿಮಾಗಳೂ ಇವೆ.

‘ನಟನ ಹಿಂದಿನ ಸಿನಿಮಾ ಹಿಟ್‌ ಆಗಿದ್ದರೆ ಮಾತ್ರ ಪ್ರಸ್ತುತ ಸಿನಿಮಾದ ಮೇಲೆ ಸ್ವಲ್ಪ ಭರವಸೆ ಇರುತ್ತದೆ. ಇಲ್ಲವಾದಲ್ಲಿ ಸ್ಟಾರ್‌ ಸಿನಿಮಾಗಳಾದರೂ ಮೊದಲ ದಿನದ ಮೂರನೇ ಪ್ರದರ್ಶನಕ್ಕೆ ಚಿತ್ರಮಂದಿರ ಖಾಲಿ ಹೊಡೆಯುತ್ತದೆ. ಸಿನಿಮಾ ಚೆನ್ನಾಗಿದ್ದರೆ ಮಾತ್ರ ಜನ ಬರುತ್ತಾರೆ ಎಂಬುದು ಸ್ಪಷ್ಟವಾಗಿದೆ. ‘ಸು ಫ್ರಂ ಸೋ’ ರೀತಿಯಲ್ಲಿ ಯಾವುದೋ ಒಂದು ಸಿನಿಮಾ ಬಂದು ಮೋಡಿ ಮಾಡಬೇಕಷ್ಟೆ. ಇಲ್ಲವಾದರೆ ಈ ವರ್ಷ ಕೂಡ ಚಿತ್ರರಂಗದ ಪಾಲಿಗೆ ಸಪ್ಪೆ’ ಎನ್ನುತ್ತಾರೆ ಚಿತ್ರಮಂದಿರದ ಮಾಲೀಕರೊಬ್ಬರು.

ದ್ವಿತೀಯಾರ್ಧದಲ್ಲಿ ದೊಡ್ಡ ಸಿನಿಮಾಗಳಿಲ್ಲ

‘ಈ ವರ್ಷದ ಮೊದಲಾರ್ಧ ಆಶಾದಾಯಕವಾಗಿದೆ. ಸ್ಟಾರ್‌ಗಳ ನಿರೀಕ್ಷಿತ ಸಿನಿಮಾಗಳಿವೆ. ಜತೆಗೆ ‘ಲವ್‌ ಮಾಕ್ಟೇಲ್‌–3’, ‘ಅಯೋಗ್ಯ–2’ ಸಿನಿಮಾಗಳು ತೆರೆ ಕಾಣಲಿವೆ. ನಿಜವಾದ ಭಯ ಇರುವುದು ಈ ವರ್ಷದ ದ್ವಿತೀಯಾರ್ಧದಲ್ಲಿ. ದೊಡ್ಡ ಸ್ಟಾರ್‌ಗಳ ಸಿನಿಮಾವಿಲ್ಲ. ಹೊಸಬರ ಸಿನಿಮಾ ಗೆಲುವು ಉದ್ಯಮಕ್ಕೆ ಪ್ರತಿಭೆಗಳನ್ನು ನೀಡುತ್ತದೆ. ಸ್ಟಾರ್‌ ಸಿನಿಮಾಗಳು ಬಂಡವಾಳ ನೀಡುತ್ತವೆ. ಎರಡೂ ರೀತಿಯ ಸಿನಿಮಾಗಳು ಗೆದ್ದಾಗ ಉದ್ಯಮದಲ್ಲಿ ಸಮತೋಲನವಿರುತ್ತದೆ. ಎರಡು ತಿಂಗಳಿಗೊಂದಾದರೂ ಹಿಟ್‌ ಸಿನಿಮಾ ಬರಬೇಕು’ ಎನ್ನುತ್ತಾರೆ ನಿರ್ದೇಶಕ, ನಿರ್ಮಾಪಕ ತರುಣ್‌ ಕಿಶೋರ್‌ ಸುಧೀರ್‌.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.