ADVERTISEMENT

ನಿಯಮ ಪಾಲಿಸಿದರೆ ‘ಕಪ್‌ ನಮ್ದೇ’!

ಅಭಿಲಾಷ್ ಪಿ.ಎಸ್‌.
Published 13 ಮೇ 2021, 19:30 IST
Last Updated 13 ಮೇ 2021, 19:30 IST
ಅವತಾರ ಪುರುಷ ಚಿತ್ರದಲ್ಲಿ ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್‌
ಅವತಾರ ಪುರುಷ ಚಿತ್ರದಲ್ಲಿ ನಟ ಶರಣ್‌ ಹಾಗೂ ನಟಿ ಆಶಿಕಾ ರಂಗನಾಥ್‌   

ಚಿತ್ರೀಕರಣವೆಲ್ಲ ಸ್ತಬ್ಧವಾಗಿದೆ. ಲಾಕ್‌ಡೌನ್‌ ಅನುಭವ?

ಈ ಬಾರಿ ಲಾಕ್‌ಡೌನ್‌ ಆಗುತ್ತದೆ ಎನ್ನುವ ಯಾವುದೇ ಮುನ್ಸೂಚನೆ ಇರಲಿಲ್ಲ. ಕೋವಿಡ್‌ ಎರಡನೇ ಅಲೆ ಬರುತ್ತದೆ ಎನ್ನುವ ಊಹಾಪೋಹವಷ್ಟೇ ಇತ್ತು. ಇದು ಈ ರೀತಿ ಕಾಡ್ಗಿಚ್ಚಿನಂತೆ ಹರಡುತ್ತದೆ ಎನ್ನುವುದನ್ನು ಯಾರೂ ಊಹಿಸಿರಲಿಲ್ಲ. ಮೊದಲು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ನಾವು ಅರಿಯಬೇಕು. ಎರಡನೇ ಅಲೆಯ ಸರಪಳಿ ತುಂಡಾಗಲು ನಾವು ಮೊದಲು ಪ್ರತ್ಯೇಕವಾಗಿರಬೇಕು. ಇಡೀ ಪ್ರಪಂಚವೇ ಸಂದಿಗ್ಧ ಪರಿಸ್ಥಿತಿಯಲ್ಲಿದೆ. ಸವಾಲಿನ ವಾತಾವರಣ ನಮ್ಮೆಲ್ಲರ ಮುಂದಿದೆ. ನಾವು ಬದುಕಿದ್ದರಷ್ಟೇ ಮುಂದಿನ ಹೋರಾಟ. ನನಗೆ ನಾನೆಷ್ಟು ಅಮೂಲ್ಯವೋ ನನ್ನ ಕುಟುಂಬಕ್ಕೂ ನಾನು ಅಷ್ಟೇ ಅಮೂಲ್ಯ. ಈ ಮಾತು ಪ್ರತಿ ವ್ಯಕ್ತಿಗೂ ಅನ್ವಯ. ಒಂದಿಷ್ಟು ನಿಯಮಗಳನ್ನು ಸರ್ಕಾರ ತಂದಿದೆ. ಇದನ್ನು ನಿಷ್ಠೆಯಿಂದ ಪಾಲಿಸೋಣ. ಹೀಗಾದರೆ ಬಹಳ ಬೇಗ ಗೆದ್ದು ಬರುತ್ತೇವೆ.

ಸಂಕಷ್ಟದ ಈ ಸಂದರ್ಭದಲ್ಲಿ ಕಲಾವಿದರೆಲ್ಲರೂ ತಮ್ಮ ಕೈಲಾದಷ್ಟು ಸಹಾಯವನ್ನು ಜನರಿಗೆ ಮಾಡುತ್ತಿದ್ದಾರೆ. ಮುಖತಃ ಭೇಟಿಯಾಗುವ ಸಂಪರ್ಕದ ಸರಪಳಿ ತುಂಡಾಗಿ, ನಾವೆಲ್ಲ ಒಂದೇ ಎನ್ನುವ ಸಹಾಯ, ನೆರವಿನ ಸರಪಳಿ ಮತ್ತಷ್ಟು ಗಟ್ಟಿಯಾಗಬೇಕು. ಭಾವನಾತ್ಮಕವಾಗಿ ನಾವೆಲ್ಲರೂ ಪರಸ್ಪರ ಸಂಬಂಧ ಹೊಂದಿದ್ದೇವೆ. ಕೊರೊನಾದಿಂದ ಕಲಿಯುವಂತಹದೂ ಬಹಳಷ್ಟಿದೆ. ಕೊರೊನಾ ಸಂಕಷ್ಟದಲ್ಲಿ ಒಬ್ಬರೇ ಸಂತೋಷವಾಗಿರಲು ಸಾಧ್ಯವಿಲ್ಲ. ನೆರೆಹೊರೆಯವರು ಚೆನ್ನಾಗಿದ್ದರಷ್ಟೇ ನಾವು ಸಂತೋಷವಾಗಿರಲು ಸಾಧ್ಯ. ಕೊರೊನಾದಿಂದ ಕಲಿತ ಪಾಠವನ್ನು ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ. ನಮಗೆ ಇಂತಹ ಪರಿಸ್ಥಿತಿ ಬಂದಾಗಲಷ್ಟೇ ಪ್ರಕೃತಿಯನ್ನು ಕಾಪಾಡಿಕೊಳ್ಳುವುದರ ಬಗ್ಗೆ ಜಾಗೃತರಾಗುತ್ತೇವೆ. ಪ್ರಸ್ತುತ ಹುಟ್ಟಿರುವಂತಹ ಜಾಗೃತಿ ಕೇವಲ ವಾಟ್ಸ್‌ಆ್ಯಪ್‌ ಸ್ಟೇಟಸ್‌, ಫಾರ್‌ವರ್ಡ್‌ ಮೆಸೇಜ್‌ಗಷ್ಟೇ ಸೀಮಿತವಾಗಬಾರದು. ಈ ವಿಚಾರಗಳಲ್ಲಿ ನಾವು ಇನ್ನಷ್ಟು ಸಕ್ರಿಯರಾಗಬೇಕು, ಸಂವೇದನಾಶೀಲರಾಗಬೇಕು.

ADVERTISEMENT

‘ಅವತಾರ ಪುರುಷ’ ಹಾಡಿನಲ್ಲಿ ಕಪ್‌ ನಮ್ದೇ ಎಂದಿರಿ..?

ಐಪಿಎಲ್‌ ಆರಂಭದ ಸಂದರ್ಭದಲ್ಲೇ ಅವತಾರ ಪುರುಷ ಟೈಟಲ್‌ ಟ್ರ್ಯಾಕ್‌ ‘ಕರುನಾಡ ಶರಣ ಇವ’ ಬಿಡುಗಡೆ ಮಾಡಿದ್ದೆವು. ಐಪಿಎಲ್‌ ಆರಂಭವಾಗಿ ಆರ್‌ಸಿಬಿ ತಂಡ ಕೂಡಾ ಉತ್ತಮವಾಗಿ ಆಡಿ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೊದಲ ಸ್ಥಾನದಲ್ಲಿತ್ತು. ಕಪ್‌ ಗೆಲ್ಲುವ ಚಾನ್ಸ್‌ ಇತ್ತು. ಈ ಕೋವಿಡ್‌, ಕ್ರಿಕೆಟ್‌, ಸಿನಿಮಾ ಮಾತ್ರವಲ್ಲ ಇಡೀ ಪ್ರಪಂಚವನ್ನೇ ಮಲಗಿಸಿಬಿಟ್ಟಿತು. ಈ ಸ್ಥಿತಿ ತಾತ್ಕಾಲಿಕವಷ್ಟೇ... ಸರ್ಕಾರದ ನಿಯಮಗಳನ್ನು ಪಾಲಿಸಿದರೆ ‘ಕಪ್‌ ನಮ್ದೇ’... ಇಲ್ಲದಿದ್ದರೆ ‘ತಪ್‌ ನಮ್ದೇ’. ಕೋಟ್ಯಾಂತರ ಜನರ ಮೇಲೆ ಸರ್ಕಾರ ಹೇಗೆ ನಿಗಾ ಇಡಲು ಸಾಧ್ಯ. ಮೊದಲು ನಾವು ಸರಿಯಾಗಿ ಇರಬೇಕು. ಆ ಸಂದರ್ಭದಲ್ಲಿ ಕೋವಿಡ್‌ಗೆ ಸಂಬಂಧಿಸಿದ ಇತರೆ ಕೆಲಸಗಳನ್ನು ಸರ್ಕಾರ ಮಾಡಲು ಸಾಧ್ಯ. ಸಾಸಿವೆ ಕಾಳಿನಷ್ಟಾದರೂ, ನಮ್ಮ ಕರ್ತವ್ಯ ಅರಿತು ನಡೆದರೆ ಬದಲಾವಣೆ ಸಾಧ್ಯ. ಹನಿಹನಿಗೂಡಿದರೆ ಹಳ್ಳ ಎನ್ನುವುದನ್ನು ಅರಿತು ನಾವೆಲ್ಲರೂ ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಹೆಜ್ಜೆ ಇಡಬೇಕು.

ಶರಣ್‌ ನಗುವಿನ ಲಸಿಕೆ. ‘ಅವತಾರ ಪುರುಷ’ದಲ್ಲಿ ನಿಮ್ಮ ಪಾತ್ರದ ಬಗ್ಗೆ?

ಇದುವರೆಗೂ ನಗಿಸುತ್ತಾ ಬಂದ ಶರಣ್‌ ಈ ಸಿನಿಮಾದಲ್ಲೂ ಇರುತ್ತಾನೆ. ಚಿತ್ರದ ಟೀಸರ್‌ನಲ್ಲಿ ನನ್ನ ಪಾತ್ರದ ವಿವರಣೆ ಇದೆ. ವಿಭಿನ್ನವಾದ ಪ್ರಯತ್ನದ ಸುಳಿವು ಜನರಿಗೆ ದೊರಕಿದೆ. ಹೊಸ ಪ್ರಯತ್ನ ಆಗಬೇಕು ಎನ್ನುವ ಉದ್ದೇಶದಿಂದಲೇ ಈ ಸಿನಿಮಾ ಮಾಡಿದೆವು. ಉದಾಹರಣೆಗೆ ಹೇಳುವುದಾದರೆ ಕಬಡ್ಡಿ ನನ್ನ ಆಟ. ಇಲ್ಲಿಯವರೆಗೂ ಕಬಡ್ಡಿ ಮೈದಾನದಲ್ಲಿ ಕಬಡ್ಡಿ ಆಡುತ್ತಿದ್ದೆವು. ಇದೀಗ ಬೇರೆ ಮೈದಾನದಲ್ಲಿ ಶರಣ್‌ ಕಬಡ್ಡಿ ಆಟ. ಇಲ್ಲಿ ನಗಿಸುವ ಶರಣ್‌ ಮರೆಯಾಗುವುದಿಲ್ಲ. ಇದು ಅವತಾರ ಪುರುಷ.

ಮುಂದಿನ ಸಿನಿಮಾಗಳ ಬಗ್ಗೆ

ಸದ್ಯಕ್ಕೆ ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಕೆಲ ಸಿನಿಮಾಗಳ ಕಥೆಗಳನ್ನು ಫೋನ್‌ ಮೂಲಕ ಕೇಳುತ್ತಿದ್ದೇನೆ. ಇನ್ನೂ ಯಾವುದೂ ಅಂತಿಮವಾಗಿಲ್ಲ. ಗುರುಶಿಷ್ಯರು ಚಿತ್ರದ ಎರಡು ಶೆಡ್ಯೂಲ್‌ ಮುಗಿದಿದೆ. ಇನ್ನೊಂದು ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ ಲಾಕ್‌ಡೌನ್‌ ಬಂದಿದೆ. ಕೋವಿಡ್‌ ಇರದೇ ಇದ್ದರೆ ಚಿತ್ರೀಕರಣವೇ ಮುಕ್ತಾಯವಾಗುತ್ತಿತ್ತು. ಮುಂದಿನ ದಿನಗಳಲ್ಲಿ ಕೋವಿಡ್‌ ಪರಿಸ್ಥಿತಿಯನ್ನು ನೋಡಿಕೊಂಡಷ್ಟೇ ಈ ವರ್ಷವೇ ಎರಡೂ ಚಿತ್ರಗಳು ಬಿಡುಗಡೆಯಾಗುತ್ತದೆಯೇ ಎನ್ನುವುದು ನಿರ್ಧಾರವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.