ಶೆಫಾಲಿ
ಮುಂಬೈ: ರೂಪದರ್ಶಿ ಹಾಗೂ ನಟಿ ಶೆಫಾಲಿ ಜರಿವಾಲಾ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದ್ದು ಮುಂಬೈ ಪೊಲೀಸರು ಅವರ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅವರು ಶುಕ್ರವಾರ ತಡ ರಾತ್ರಿ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು.
ಕೂಪರ್ ಆಸ್ಪತ್ರೆಯಲ್ಲಿ ಶೆಫಾಲಿ ಜರಿವಾಲಾ ಅವರ ಮರಣೋತ್ತರ ಪರೀಕ್ಷೆ ನಡೆಸಿ, ಪೊಲೀಸರು ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಅವರ ಸಾವು ಹೃದಯಾಘಾತದಿಂದ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಸಾವಿಗೂ ಮುನ್ನಾ ದಿನ ಅವರ ಆರೋಗ್ಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿರಲಿಲ್ಲ. ಅವರು ಲವಲವಿಕೆಯಿಂದಲೇ ಇದ್ದರು. ರೀಲ್ಸ್‌ಗಾಗಿ ನೃತ್ಯ ಮಾಡಿದ್ದರು ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ.
ವಿಶೇಷವೆಂದರೆ ಶೆಫಾಲಿ ಅವರು 2011 ರಲ್ಲಿ ಬಿಡುಗಡೆಯಾಗಿದ್ದ ಹುಡುಗರು ಸಿನಿಮಾದ ತೊಂದ್ರೆ ಇಲ್ಲ ಪಂಕಜ ಹಾಡಿಗೆ ನೃತ್ಯ ಮಾಡಿ ಕನ್ನಡದಲ್ಲೂ ಜನಪ್ರಿಯ ಆಗಿದ್ದರು.
ಶೆಫಾಲಿ ಪತಿ ಪರಾಗ್ ತ್ಯಾಗಿ ಅವರು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು, ಆದರೆ ಶೆಫಾಲಿ ಆಸ್ಪತ್ರೆಗೆ ತಲುಪುವ ಮೊದಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು.
ಮುಂಬೈನ ಬಾಂದ್ರಾದ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಿತು. ಪರಾಗ್ ತ್ಯಾಗಿ ಸೇರಿದಂತೆ ಕುಟಂಬಸ್ಥರು, ನಟ–ನಟಿಯರು ಸಿನಿರಂಗದವರು ಶೆಫಾಲಿ ಅಂತಿಮ ದರ್ಶನ ಪಡೆದರು.
ಶೆಫಾಲಿ ಜರಿವಾಲಾ ಅವರು 2002ರಲ್ಲಿ 'ಕಾಂಟಾ ಲಗಾ' ವಿಡಿಯೊ ಹಾಡಿನಲ್ಲಿ ಕಾಣಿಸಿಕೊಂಡ ಬಳಿಕ ಅವರ ಜನಪ್ರಿಯರದರು. ನಂತರ ಬಿಗ್‌ಬಾಸ್ 13ರಲ್ಲಿ ಭಾಗವಹಿಸುವ ಮೂಲಕ ಮನೆಮಾತಾಗಿದ್ದರು.
2004ರ 'ಶಾದಿ ಕರೋಗಿ' ಚಿತ್ರದಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಕಾಣಿಸಿಕೊಂಡರು. ಇದಾದ ಬಳಿಕ ಹಲವಾರು ಸಿನಿಮಾಗಳು, ಕಿರುತೆರೆ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು.
2015ರಲ್ಲಿ ನಟ ಪರಾಗ್ ತ್ಯಾಗಿ ಅವರನ್ನು ವಿವಾಹವಾಗಿದ್ದರು. ನಟಿಯ ಹಠಾತ್ ನಿಧನಕ್ಕೆ ಮನರಂಜನಾ ಉದ್ಯಮದ ಗಣ್ಯರು ಮತ್ತು ಶೆಫಾಲಿ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.