ADVERTISEMENT

ಕಲಾತ್ಮಕ ಚಿತ್ರಗಳಿಗೂ ಮಾರುಕಟ್ಟೆಯಿದೆ: ಅಭಿಲಾಷ್‌ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 9 ಮೇ 2025, 0:30 IST
Last Updated 9 ಮೇ 2025, 0:30 IST
ಚಿತ್ರದ ಪೋಸ್ಟರ್‌
ಚಿತ್ರದ ಪೋಸ್ಟರ್‌   
ಅಭಿಲಾಷ್‌ ಶೆಟ್ಟಿ ನಿರ್ಮಿಸಿ, ನಿರ್ದೇಶಿಸಿರುವ ‘ನಾಳೆ ರಜಾ ಕೋಳಿ ಮಜಾ’ ಚಿತ್ರ ಇಂದು (ಮೇ 9) ತೆರೆ ಕಾಣುತ್ತಿದೆ. ಸಾಕಷ್ಟು ಚಿತ್ರೋತ್ಸವಗಳಿಗೆ ಆಯ್ಕೆಯಾಗಿ ಪ್ರಶಸ್ತಿ ಪಡೆದಿದೆ. ಈ ಚಿತ್ರ ಹಾಗೂ ತಮ್ಮ ಸಿನಿಪಯಣದ ಕುರಿತು ಅವರು ಮಾತನಾಡಿದ್ದಾರೆ.

ಚೊಚ್ಚಲ ಚಿತ್ರ ‘ಕೋಳಿತಾಳ್‌’ನಿಂದಲೇ ಗಮನ ಸೆಳೆದವರು ಅಭಿಲಾಷ್‌ ಶೆಟ್ಟಿ. ಮಲೆನಾಡು ಭಾಗದ ಹಾಸ್ಯಮಯ ಕಥೆಯನ್ನು ಹೊಂದಿದ್ದ ಚಿತ್ರ ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಗೊಂಡಿತ್ತು. ತೆರೆಕಂಡು ಚಿತ್ರಮಂದಿರಗಳಲ್ಲಿಯೂ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಒಟಿಟಿ ಸೇರಿದಂತೆ ಬಿಡುಗಡೆ ನಂತರದ ಎಲ್ಲ ವಹಿವಾಟುಗಳನ್ನು ಕುದುರಿಸಿಕೊಂಡು ಅಚ್ಚರಿ ಮೂಡಿಸಿತ್ತು. ಆ ಕಥೆಯೊಂದಿಗೆ ಸಂಬಂಧ ಹೊಂದಿರುವ ಚಿತ್ರ ‘ನಾಳೆ ರಜಾ ಕೋಳಿ ಮಜಾ’. 

‘ಹನ್ನೊಂದು ವರ್ಷದ ಹುಡುಗಿಗೆ ಗಾಂಧಿ ಜಯಂತಿಯಂದು ನಾನ್‌ವೆಜ್‌ ತಿನ್ನಬೇಕೆಂಬ ಬಯಕೆಯಾಗುತ್ತದೆ. ಆವತ್ತು ಭಾನುವಾರ ಕೂಡ. ಆ ಸನ್ನಿವೇಶದಲ್ಲಿ ಆಕೆಯ ದೃಷ್ಟಿಕೋನದಿಂದ ಜಗತ್ತು ಹೇಗಿರುತ್ತದೆ ಎಂಬುದೇ ಸಿನಿಮಾ. ಕಲಾತ್ಮಕ ಸಿನಿಮಾ ಎಂದಾಕ್ಷಣ ಸಾಮಾನ್ಯರು ನೋಡುವಂತೆ ಇರುವುದಿಲ್ಲ, ನಿಧಾನವಾಗಿರುತ್ತದೆ ಎಂಬ ಭಾವನೆ ಇದೆ. ಆದರೆ ಇದು ಸಂಪೂರ್ಣ ಹಾಸ್ಯಮಯ ಚಿತ್ರ. ನ್ಯೂಯಾರ್ಕ್‌ ಇಂಡಿಯನ್‌, ಜೋಗ್‌ಜಾ ಇಂಟರ್‌ನ್ಯಾಷನಲ್‌, ಶಿಕಾಗೋ ಏಷ್ಯನ್‌ ಪಾಪಪ್‌ ಚಿತ್ರೋತ್ಸವಗಳಿಗೆ ಆಯ್ಕೆಗೊಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಗಳಿಸಿದೆ’ ಎನ್ನುತ್ತಾರೆ ಅಭಿಲಾಷ್‌. 

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅಭಿಲಾಷ್‌, ಕೆಲಸ ಬಿಟ್ಟು ಚಿತ್ರರಂಗದತ್ತ ಹೊರಳಿದವರು. ಶಾರ್ಟ್‌ ಫಿಲಂಗಳಿಂದ ಸಿನಿಪಯಣ ಪ್ರಾರಂಭಿಸಿ ಗ್ರಾಮೀಣ ಸೊಗಡಿನ ಕಥೆಯೊಂದಿಗೆ ಚೊಚ್ಚಲ ಚಿತ್ರದಲ್ಲಿಯೇ ಗಮನ ಸೆಳೆದರು. ಈ ಚಿತ್ರದಲ್ಲಿ ರಾಧಾ ರಾಮಚಂದ್ರ ಹೊರತುಪಡಿಸಿ ಮಿಕ್ಕವರು ಸ್ಥಳೀಯ ಕಲಾವಿದರು. ಸಾಗರ ಮತ್ತು ಕುಂದಾಪುರ ಭಾಗದಲ್ಲಿ ಚಿತ್ರೀಕರಣಗೊಂಡಿದೆ. 

ADVERTISEMENT

‘ಈ ರೀತಿ ಚಿತ್ರಕ್ಕೆ ಅದರದ್ದೇ ಆದ ಮಾರುಕಟ್ಟೆ ಇದೆ. ಸರಿಯಾದ ಲೆಕ್ಕಾಚಾರದೊಂದಿಗೆ ಸಿನಿಮಾ ಮಾಡಿದರೆ ಹಾಕಿದ ಬಂಡವಾಳವನ್ನು ಖಂಡಿತವಾಗಿ ಮರಳಿ ಪಡೆಯಬಹುದು. ಹೀಗಾಗಿ ನಾನೇ ಬಂಡವಾಳ ಹಾಕಿರುವೆ. ಚಿತ್ರಮಂದಿರದಲ್ಲಿ ಬಿಡುಗಡೆಗೊಂಡರಷ್ಟೆ ಸಿನಿಮಾಕ್ಕೆ ಬೆಲೆ. ಆಗ ವಹಿವಾಟಿನ ಒಂದಷ್ಟು ಬಾಗಿಲುಗಳು ತೆರೆಯುತ್ತವೆ. ಕ್ಯೂಬ್‌ ಸಿನಿಮಾ ಈ ಚಿತ್ರದ ಡಿಜಿಟಲ್‌ ವಿತರಣೆ ಹೊಣೆ ಹೊತ್ತುಕೊಂಡಿದೆ. ಶಿಪ್‌, ಏರ್‌ಲೈನ್ಸ್‌ ಮೊದಲಾದ ರೈಟ್ಸ್‌ಗಳಿವೆ. ಹಿಂದಿನ ಸಿನಿಮಾ ಕುಂದಾಪುರ, ಶಿವಮೊಗ್ಗ ಭಾಗದಲ್ಲಿ ಚಿತ್ರಮಂದಿರಗಳಲ್ಲಿಯೂ ಉತ್ತಮ ಗಳಿಕೆ ಕಂಡಿತ್ತು. ಅದೇ ಭರವಸೆ ಮೇಲೆ ಚಿತ್ರಮಂದಿರಕ್ಕೆ ಬರುತ್ತಿದ್ದೇವೆ’ ಎನ್ನುತ್ತಾರೆ ಅವರು. 

ಅಭಿಲಾಷ್‌ ಶೆಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.