ಮಾದೇವ
ವಿನೋದ್ ಪ್ರಭಾಕರ್, ಸೋನಲ್ ಮೊಂತೆರೊ ಅಭಿನಯದ ಚಿತ್ರ ಇಂದು (ಜೂ.6) ತೆರೆ ಕಾಣುತ್ತಿದೆ. ಮಾಸ್, ಆ್ಯಕ್ಷನ್ ಕಥೆ ಹೊಂದಿರುವ ಚಿತ್ರಕ್ಕೆ ನವೀನ್ ರೆಡ್ಡಿ ಬಿ. ನಿರ್ದೇಶನವಿದೆ.
‘ಈ ಸಿನಿಮಾ ನನ್ನ ವೃತ್ತಿಜೀವನದಲ್ಲಿ ಒಂದು ವಿಭಿನ್ನ ಸಿನಿಮಾ. ಬೇರೆ ಹೆಸರು ತಂದುಕೊಡುತ್ತದೆ. ನೇಣು ಹಾಕುವವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಾನು ಸಿನಿಮಾದೊಳಗೆ ನಾಯಕನಾಗಿ ಎಂದೂ ಕೆಲಸ ಮಾಡಿಲ್ಲ. ಒಬ್ಬ ತಂತ್ರಜ್ಞನಾಗಿ ಎಲ್ಲಾ ವಿಭಾಗಗಳಲ್ಲೂ ಕೆಲಸ ಮಾಡಿದ್ದೇನೆ. ಒಬ್ಬ ನಟನಾಗಿ ಪರಿವರ್ತನೆ ಆಗುವ ಅವಕಾಶವನ್ನು ಈ ಸಿನಿಮಾ ನೀಡಿದೆ. ನನಗೆ ಆ್ಯಕ್ಷನ್‌ನಲ್ಲಿ ವಹಿವಾಟು ಇದೆ ಎಂದು ಗೊತ್ತಿತ್ತು. ಸತತವಾಗಿ ಆ್ಯಕ್ಷನ್ ಸಿನಿಮಾಗಳನ್ನು ಮಾಡಿದೆ. ಫೈಟ್‌ಗಾಗಿಯೇ ದೃಶ್ಯಗಳನ್ನು ಬರೆಯುತ್ತಿದ್ದರು. ಇದರಿಂದಾಗಿ ಕಥೆಯ ಹಾದಿ ತಪ್ಪುತ್ತಿತ್ತು. ನಟನೆಗೆ ಅವಕಾಶ ಸಿಗುತ್ತಿಲ್ಲವಲ್ಲ ಎಂಬ ಕೊರಗು ಇತ್ತು. ಅದು ಈ ಸಿನಿಮಾದಿಂದ ನೀಗಿದೆ’ ಎಂದಿದ್ದಾರೆ ವಿನೋದ್ ಪ್ರಭಾಕರ್.
‘ಈ ಚಿತ್ರ ನೋಡಿ ಹೊರ ಬಂದ ಮೇಲೆ ವಿನೋದ್ ಪ್ರಭಾಕರ್ ಅವರ ಜತೆಗೆ ಶ್ರುತಿ ಅವರು ಮನಸ್ಸಿನಲ್ಲಿ ಉಳಿಯುತ್ತಾರೆ. ಅವರು ಪಾತ್ರ ಭಯ ಹುಟ್ಟಿಸುತ್ತದೆ. ನಮಗೆ ಒಳ್ಳೆಯ ಪಾತ್ರಧಾರಿಗಳು ಸಿಕ್ಕರು. ಅವರು ಅಭಿನಯಿಸುತ್ತಿದ್ದರೆ ಕರೆಕ್ಷನ್ ಹೇಳುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಇದೊಂದು ಎಮೋಷನಲ್ ಜರ್ನಿ. ಚಿತ್ರ ನೋಡಿ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡುತ್ತಾರೆ ಎಂಬ ನಂಬಿಕೆ ಇದೆ’ ಎನ್ನುತ್ತಾರೆ ನಿರ್ದೇಶಕ ನವೀನ್.
ಪ್ರದ್ಯೋತ್ತನ್ ಸಂಗೀತ ನಿರ್ದೇಶನವಿದೆ. ಆರ್. ಕೇಶವ್ ಬಂಡವಾಳ ಹೂಡಿದ್ದಾರೆ. ಶ್ರೀನಗರ ಕಿಟ್ಟಿ, ಶ್ರುತಿ ಮೊದಲಾದವರು ಚಿತ್ರದಲ್ಲಿದ್ದಾರೆ.
‘ಸಂಜು ವೆಡ್ಸ್ ಗೀತಾ-2’
ಶ್ರೀನಗರ ಕಿಟ್ಟಿ, ರಚಿತಾ ರಾಮ್ ಜೋಡಿಯಾಗಿ ನಟಿಸಿರುವ ‘ಸಂಜು ವೆಡ್ಸ್ ಗೀತಾ-2’ ಮರು ಬಿಡುಗಡೆಯಾಗುತ್ತಿದೆ. ಜನವರಿ 17ರಂದು ಚಿತ್ರ ತೆರೆ ಕಂಡಿತ್ತು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯದ ಕಾರಣ ಚಿತ್ರದೊಳಗೆ ಒಂದಷ್ಟು ಬದಲಾವಣೆ ಮಾಡಿಕೊಂಡು ಮತ್ತೆ ಬಿಡುಗಡೆ ಮಾಡುತ್ತಿದೆ ಚಿತ್ರತಂಡ.
ಪವಿತ್ರ ಇಂಟರ್‌ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ ಛಲವಾದಿ ಕುಮಾರ್ ನಿರ್ಮಿಸಿರುವ ಚಿತ್ರಕ್ಕೆ ನಾಗಶೇಖರ್ ನಿರ್ದೇಶನವಿದೆ. ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮದಲ್ಲಿ ಭಾಗಿಯಾದ ನಟ ಶಿವರಾಜ್‌ಕುಮಾರ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
‘ನಮ್ಮ ಸಿನಿಮಾ ಚೆನ್ನಾಗಿ ಮೂಡಿ ಬರಬೇಕು, ಅದನ್ನು ಜನರಿಗೆ ತಲುಪಿಸಬೇಕೆಂದು ಹೋರಾಡುತ್ತಿರುವ ನಿರ್ಮಾಪಕ ಕುಮಾರ್ ಅವರಿಗೆ ಹ್ಯಾಟ್ಸಾಫ್ ಹೇಳಲೇಬೇಕು. ಮತ್ತಷ್ಟು ಹಣ ಖರ್ಚು ಮಾಡಿ ಮರುಬಿಡುಗಡೆ ಮಾಡಲು ಯಾರೂ ಮುಂದೆ ಬರುವುದಿಲ್ಲ. ಆದರೆ ಇವರು ಆ ಧೈರ್ಯ ಮಾಡಿದ್ದಾರೆ. ಇಂಥ ಸಿನಿಮಾಗಳು ಗೆಲ್ಲಬೇಕು, ಮುಖ್ಯವಾಗಿ ನಿರ್ಮಾಪಕರು ಗೆಲ್ಲಬೇಕು. ತಂಡದಲ್ಲಿ ಎಲ್ಲರ ಕೆಲಸ ಅಚ್ಚುಕಟ್ಟಾಗಿದೆ’ ಎಂದಿದ್ದಾರೆ ಶಿವಣ್ಣ.
ಸತ್ಯ ಹೆಗಡೆ ಛಾಯಾಚಿತ್ರಗ್ರಹಣ, ಶ್ರೀಧರ್ ವಿ. ಸಂಭ್ರಮ್ ಸಂಗೀತ ಈ ಚಿತ್ರಕ್ಕಿದೆ. ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ತಬಲಾ ನಾಣಿ, ಗಿಚ್ಚಿ ಗಿಲಿಗಿಲಿ ವಿನೋದ್, ಖಳನಟ ಸಂಪತ್‌ಕುಮಾರ್ ಸೇರಿದಂತೆ ಸಾಕಷ್ಟು ಕಲಾವಿದರು ತಾರಾಗಣದಲ್ಲಿದ್ದಾರೆ.
‘ನಮ್ಮ ಚಿತ್ರ ಈಗ ವೇಗ ಪಡೆದುಕೊಂಡಿದೆ. ತಂದೆ ಮಗಳ ಭಾವನಾತ್ಮಕ ದೃಶ್ಯ ಸೇರಿದಂತೆ ಹೊಸದಾಗಿ ಸೇರಿಸಲಾಗಿರುವ 21 ನಿಮಿಷಗಳ ಹೃದಯಸ್ಪರ್ಶಿ ದೃಶ್ಯಗಳು ಪ್ರೇಕ್ಷಕರ ಮನಸನ್ನು ಭಾರವಾಗಿಸುತ್ತವೆ’ ಎನ್ನುತ್ತಾರೆ ಶ್ರೀನಗರ ಕಿಟ್ಟಿ.
ಸೀಸ್ ಕಡ್ಡಿ
ಪೆನ್ಸಿಲ್ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ‘ಸೀಸ್ ಕಡ್ಡಿ’. ರತನ್ ಗಂಗಾಧರ್ ನಿರ್ದೇಶನದ ಚಿತ್ರವಿದು.
‘ಪುಸ್ತಕವೊಂದನ್ನು ಓದಿದಾಗ ಅದರಲ್ಲಿ ಪೆನ್ಸಿಲ್‌ನ ನಾನಾ ಸೂಕ್ಷ್ಮಗಳ ವಿವರಗಳಿತ್ತು. ಅದನ್ನು ಐದು ಪಾತ್ರಗಳನ್ನಾಗಿಸಿ, ಅದಕ್ಕೆ ಹೊಂದಿಕೊಂಡಂತೆ ಐದು ಕಥೆಗಳನ್ನು ಸೃಷ್ಟಿಸಿ, ಆ ಕಥೆಗಳೆಲ್ಲ ಒಂದು ಬಿಂದುವಿನಲ್ಲಿ ಸಂಧಿಸುವಂತೆ ಕಥೆ ಹೆಣೆಯಲಾಗಿದೆ. ಈ ಚಿತ್ರದಲ್ಲಿ ಬೆಂಗಳೂರು ಕನ್ನಡ, ಹವಿಗನ್ನಡ, ತುಮಕೂರು ಭಾಗದ ಹಳ್ಳಿಗಾಡಿನ ಕನ್ನಡ ಹಾಗೂ ಮೈಸೂರು ಸೀಮೆಯ ಕನ್ನಡ ಬಳಸಲಾಗಿದೆ. ಒಟ್ಟಾರೆ ಚಿತ್ರ ಪ್ರೇಕ್ಷಕರಿಗೆ ಹೊಸ ಅನುಭೂತಿ ನೀಡಲಿದೆ ಎಂಬ ನಂಬಿಕೆಯಿದೆ’ ಎನ್ನುತ್ತಾರೆ ನಿರ್ದೇಶಕರು.
ಗ್ರಹಣ ಪ್ರೊಡಕ್ಷನ್ ಮೂಲಕ ರತನ್ ಗಂಗಾಧರ್, ಸಂಪತ್ ಶಿವಶಂಕರ್, ಕೃತಿ ನಾಣಯ್ಯ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.
ಈ ಚಿತ್ರಕ್ಕೆ ಸುನಿಲ್ ನರಸಿಂಹಮೂರ್ತಿ ಛಾಯಾಚಿತ್ರಗ್ರಹಣ, ಕೆ.ಸಿ. ಬಾಲಸಾರಂಗನ್ ಸಂಗೀತ ನಿರ್ದೇಶನ, ಅನಿರುದ್ಧ್ ಹರ್ಷವರ್ಧನ್ ಸಂಕಲನವಿದೆ. ಸಿತಿನ್ ಅಪ್ಪಯ್ಯ, ಬಿ.ಎಸ್. ರಾಮಮೂರ್ತಿ, ಮಾನ್ವಿ ಬಳಗಾರ್, ನೊಣವಿನಕೆರೆ ರಾಮಕೃಷ್ಣಯ್ಯ ಮುಂತಾದವರ ತಾರಾಗಣವಿರುವ ಈ ಚಿತ್ರ ಜೂನ್ 6ರಂದು ತೆರೆ ಕಾಣಲಿದೆ.
ನೀತಿ
ಸಂಪತ್ ಮೈತ್ರೇಯ, ಖುಷಿ ರವಿ, ಪ್ರವೀಣ್ ಅಥರ್ವ ಪ್ರಮುಖ ಪಾತ್ರದಲ್ಲಿರುವ ಚಿತ್ರವಿದು. ರಾಜಗೋಪಾಲ್ ಕಥೆ ಬರೆದು ನಿರ್ದೇಶಿಸಿದ್ದಾರೆ.
‘ಒಂದೇ ಮನೆಯಲ್ಲಿ ಒಂದು ರಾತ್ರಿ ನಡೆಯುವ ವಿಭಿನ್ನ ಕಥೆಯಿದು. ಸಿನಿಮಾದಲ್ಲಿ ಮುಖ್ಯವಾಗಿ ಎರಡೇ ಪಾತ್ರಗಳಿರುವುದು. ಉಳಿದ ಪಾತ್ರಗಳು ಅಲ್ಲಲ್ಲಿ ಆಗಾಗ ಬಂದು ಹೋಗುತ್ತವೆ. ಸಸ್ಪೆನ್ಸ್, ಥ್ರಿಲ್ಲರ್ ಜಾನರ್‌ನ ಸಿನಿಮಾವಿದು. ಸಂಪತ್ ಮೈತ್ರೇಯ, ಖುಷಿ ರವಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನುತ್ತಾರೆ ನಿರ್ದೇಶಕರು.
ರೂಸಿಕ್ ಸಂಗೀತ ಸಂಯೋಜನೆಯಿದೆ. ಹಂಗೇರಿ ದೇಶದ ‘ಪಿಲ್‌ಹಾರ್ಮೋನಿಕ್ ಆರ್ಕೆಸ್ಟ್ರಾ’ದಲ್ಲಿ ಚಿತ್ರದ ಸಂಗೀತದ ಕೆಲಸಗಳು ನಡೆದಿರುವುದು ವಿಶೇಷ ಎಂದಿದೆ ಚಿತ್ರತಂಡ. ಪ್ರದೀಪ್ ಪದ್ಮಕುಮಾರ್ ಛಾಯಾಚಿತ್ರಗ್ರಹಣ, ಆರ್.ರಾಜ್‌ಕುಮಾರ್ ಸಂಕಲನವಿದೆ.
ಕಾಲೇಜ್ ಕಲಾವಿದ
ಬಹುತೇಕ ಹೊಸಬರಿಂದಲೇ ಕೂಡಿರುವ ಚಿತ್ರ. ಕಾಲೇಜು ಆವರಣದಲ್ಲಿನ ಪ್ರೇಮಕಥೆ ಹೊಂದಿರುವ ಚಿತ್ರಕ್ಕೆ ಸಂಜಯ್ ಮಳವಳ್ಳಿ ಆ್ಯಕ್ಷನ್ ಕಟ್ ಹೇಳಿದ್ದಾರೆ.
‘ಇದೊಂದು ಪ್ರೇಮಮಯ ಪಯಣ. ಮ್ಯೂಸಿಕಲ್ ಜರ್ನಿ ಹೊಂದಿರುವ ಈ ಸಿನಿಮಾದಲ್ಲಿ ಡ್ರಗ್ಸ್ ವಿಚಾರವೂ ಇದೆ. ಕಾಲೇಜು ವಿದ್ಯಾರ್ಥಿಗಳ ಸ್ನೇಹ, ಪ್ರೀತಿ, ಸಂಬಂಧ, ಹಾಸ್ಯ, ಫೈಟ್ ಸೇರಿದಂತೆ ಮನರಂಜನೆಯ ಎಲ್ಲಾ ಅಂಶಗಳನ್ನು ಒಳಗೊಂಡಿವೆ’ ಎಂದಿದ್ದಾರೆ ನಿರ್ದೇಶಕರು.
ಗಜಾನನ ಫಿಲ್ಮ್ಸ್ ಬ್ಯಾನರ್‌ನಲ್ಲಿ ತರುಣ್ ಶರ್ಮಾ ನಿರ್ಮಾಣ ಮಾಡಿದ್ದಾರೆ. ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸರುವ ಆರವ್ ಸೂರ್ಯ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಚೈತ್ರ ಲೋಕನಾಥ್ ಜೋಡಿಯಾಗಿದ್ದಾರೆ. ಹುಲಿ ಕಾರ್ತಿಕ್, ಹರಿಣಿ ಶ್ರೀಕಾಂತ್, ರಮೇಶ್ ಭಟ್ ಮುಂತಾದವರು ಚಿತ್ರದಲ್ಲಿದ್ದಾರೆ. ಸುರಾಜ್ ಜೋಯಿಸ್ ಸಂಗೀತ, ಆನಂದ್ ಸುಂದರೇಶ ಛಾಯಾಚಿತ್ರಗ್ರಹಣ, ಮಹೇಶ್ ಗಂಗಾವತಿ ಸಂಕಲನವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.