
ವರುಣ್ ವಸಿಷ್ಠ ನಿರ್ದೇಶನದ, ಬಾಲಕೃಷ್ಣ ಶೆಟ್ಟಿ ನಿರ್ಮಾಣದ ‘ದೇವನೊಬ್ಬ ಜಾದೂಗಾರ’ ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಟಿ ಶ್ವೇತಾ ಶ್ರೀವಾತ್ಸವ ಹಾಗೂ ನಿರ್ದೇಶಕ ಸಿಂಪಲ್ ಸುನಿ ಟೀಸರ್ ಬಿಡುಗಡೆ ಮಾಡಿದರು.
ಖಟ್ವಾಂಗ ಸ್ಟುಡಿಯೊಸ್ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ. ‘ನಿರ್ದೇಶಕ ವರುಣ್ ವಸಿಷ್ಠ ‘ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ’ ಸಿನಿಮಾ ದಿನದಿಂದ ಪರಿಚಯ. ಅಂದಿನಿಂದ ಅವರಿಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂಬ ಕನಸಿತ್ತು. ಇಂದು ಅದು ನಿಜವಾಗಿದೆ’ ಎಂದರು ಸಿಂಪಲ್ ಸುನಿ.
‘ನನ್ನ ಮಗನಿಗೆ ಚಿತ್ರನಟನಾಗಬೇಕು ಎಂದು ಬಾಲ್ಯದಿಂದಲೇ ಆಸೆ ಇತ್ತು. ಈ ಸಿನಿಮಾ ಮೂಲಕ ಅದು ನನಸಾಗಿದೆ. ಇದು ನಾಲ್ಕು ವರ್ಷಗಳ ಹಿಂದೆ ಪ್ರಾರಂಭವಾದ ಚಿತ್ರ. ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ’ ಎಂದರು ಬಾಲಕೃಷ್ಣ ಶೆಟ್ಟಿ.
ವರುಣ್ ಮಾತನಾಡಿ, ‘ಕಿರುಚಿತ್ರಗಳನ್ನು ಮಾಡಿದ ಅನುಭವ ನನಗಿದೆ. ನಾಯಕ ಸಚಿನ್ ಫೇಸ್‌ಬುಕ್ ಮೂಲಕ ಪರಿಚಿತರಾದವರು. ನಂತರ ಅವರ ಸಿನಿಮಾ ಕನಸನ್ನು ಬಿಚ್ಚಿಟ್ಟರು. ಸುಧಾ ಬೆಳವಾಡಿ ಅವರು ಸಿನಿಮಾದಲ್ಲಿ ಮುಖ್ಯಮಂತ್ರಿ ಪಾತ್ರವನ್ನು ನಿರ್ವಹಿಸಿದ್ದಾರೆ’ ಎಂದರು.
ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ‘ದೇವ’ ಎನ್ನುವ ಲಾರಿ ಚಾಲಕನ ಜೀವನವನ್ನು ಕೇಂದ್ರವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಇದು ಕ್ರೈಂ ಥ್ರಿಲ್ಲರ್ ಜಾನರ್‌ನಲ್ಲಿದ್ದು, ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ. ಬೆಂಗಳೂರು, ತುಮಕೂರು ಹಾಗೂ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರಕ್ಕೆ ವಿಜೇತ್ ಚಂದ್ರ ಸಂಕಲನ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ಶ್ಯಾಮ್ ರಾವ್ ನಗರಗದ್ದೆ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.