ADVERTISEMENT

ಅವಮಾನ ಸಹಿಸಲ್ಲ: ಕನ್ನಡ ಚಿತ್ರರಂಗದ ಅಸಹಕಾರ ನಿರ್ಧಾರಕ್ಕೆ ಸೋನು ನಿಗಮ್ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಮೇ 2025, 13:09 IST
Last Updated 5 ಮೇ 2025, 13:09 IST
<div class="paragraphs"><p>ಸೋನು ನಿಗಮ್</p></div>

ಸೋನು ನಿಗಮ್

   

ಬೆಂಗಳೂರು: ಗಾಯಕ ಸೋನು ನಿಗಮ್‌ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ನಿರ್ಧರಿಸಿದೆ. ಅದರ ಬೆನ್ನಲೇ ಅವರು(ಸೋನು ನಿಗಮ್‌) ಸಾಮಾಜಿಕ ಮಾಧ್ಯಮ ಪೋಸ್ಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, 'ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕರ್ನಾಟಕದ ಪ್ರಜ್ಞಾವಂತ ಜನತೆಗೆ ಬಿಟ್ಟು ಬಿಡುತ್ತೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ' ಎಂದಿದ್ದಾರೆ.

ADVERTISEMENT

'ನಾನು ಕರ್ನಾಟಕದಲ್ಲಿ ಮಾತ್ರವಲ್ಲದೆ ಜಗತ್ತಿನ ಬೇರೆಡೆ ಇರುವಾಗಲೂ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಪಾರ ಪ್ರೀತಿಯನ್ನು ನೀಡಿದ್ದೇನೆ. ವಾಸ್ತವವಾಗಿ, ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ನಾನು ಹಾಡಿರುವ ಕನ್ನಡದ ಹಾಡುಗಳನ್ನು ಹೆಚ್ಚು ಗೌರವಿಸುತ್ತೇನೆ. ಇದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ 100ಕ್ಕೂ ಹೆಚ್ಚು ವಿಡಿಯೊಗಳು ಹರಿದಾಡುತ್ತಿವೆ'.

'ಕರ್ನಾಟಕದಲ್ಲಿ ಸಂಗೀತ ಕಾರ್ಯಕ್ರಮ ನಡೆಯುವಾಗ ನಾನು ಒಂದು ಗಂಟೆಗಳಿಗೂ ಅಧಿಕ ಕನ್ನಡ ಹಾಡುಗಳನ್ನು ಹಾಡಲು ಅಭ್ಯಾಸ ಮಾಡುತ್ತೇನೆ. ಆದರೆ ನಾನು ಯಾರಿಂದಲೂ ಅವಮಾನವನ್ನು ಸ್ವೀಕರಿಸುವಷ್ಟು ಚಿಕ್ಕ ಹುಡುಗನಲ್ಲ. ನನಗೆ 51 ವರ್ಷ, ನನ್ನ ಜೀವನದ ದ್ವಿತೀಯಾರ್ಧಕ್ಕೆ ಹೆಜ್ಜೆ ಇಟ್ಟಿದ್ದೇನೆ' ಎಂದಿದ್ದಾರೆ.

'ಕೆಲಸದ ವಿಚಾರದಲ್ಲಿ ಕನ್ನಡ ನನ್ನ ಎರಡನೇ ಭಾಷೆ. ನನ್ನ ಮಗನಷ್ಟು ಕಿರಿಯವನು ನನ್ನನ್ನು ಸಾವಿರಾರು ಜನರ ಮುಂದೆ ಭಾಷೆಯ ಹೆಸರಿನಲ್ಲಿ ಬೆದರಿಸಲು ಯತ್ನಿಸಿದಾಗ, ನಾನು ಪ್ರತಿಕ್ರಿಯಿಸುವುದು ಸಹಜ. ಅದು ಕೂಡ ನಾನು ಮೊದಲ ಹಾಡು ಹಾಡಿದ ತಕ್ಷಣವೇ. ಅವನು ಇನ್ನೂ ಕೆಲವರನ್ನು ಪ್ರಚೋದಿಸಿದ. ಕಾರ್ಯಕ್ರಮಕ್ಕೆ ಅಡ್ಡಿಪಡಿಸಬೇಡಿ ಎಂದು ಅಲ್ಲಿದ್ದ ಜನ ಕೂಡಾ ಹೇಳುತ್ತಿದ್ದರು'.

'ನಾನು ಅವರಿಗೆ ತುಂಬಾ ವಿನಮ್ರವಾಗಿ ಮತ್ತು ಪ್ರೀತಿಯಿಂದ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ. ಇದು ನನ್ನ ಮೊದಲ ಹಾಡು. ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ. ಆದರೆ ಯೋಜಿಸಿದ ರೀತಿಯಲ್ಲಿ ಸಂಗೀತ ಕಾರ್ಯಕ್ರಮ ಮುಂದುವರಿಸಲು ನನಗೆ ಅವಕಾಶ ನೀಡಬೇಕು ಹೇಳಿದೆ'.

'ಪ್ರತಿಯೊಬ್ಬ ಕಲಾವಿದರು ಹಾಡಿನ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಸಂಗೀತಗಾರರು ಮತ್ತು ತಂತ್ರಜ್ಞರು ಎಲ್ಲರೂ ಸಮನ್ವಯದಿಂದ ಇರುತ್ತಾರೆ. ಆದರೆ ಅವರು ಗದ್ದಲ ಸೃಷ್ಟಿಸಲು ಮತ್ತು ಬೆದರಿಸಲು ಕಾತರರಾಗಿದ್ದರು. ಇಲ್ಲಿ ತಪ್ಪು ಯಾರದ್ದು ಎಂದು ನೀವೆ ಹೇಳಿ' ಎಂದು ಅವರು ಪ್ರಶ್ನಿಸಿದ್ದಾರೆ.

'ನಾನು ದೇಶಭಕ್ತನಾಗಿರುವುದರಿಂದ ಭಾಷೆ, ಜಾತಿ ಅಥವಾ ಧರ್ಮದ ಹೆಸರಿನಲ್ಲಿ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸುವ ಯಾರನ್ನಾದರೂ ನಾನು ದ್ವೇಷಿಸುತ್ತೇನೆ. ವಿಶೇಷವಾಗಿ ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ನೋಡಿದ ಬಳಿಕ. ನಾನು ಅವರಿಗೆ ಬುದ್ದಿವಾದ ಹೇಳಬೇಕಾಯಿತು. ನಾನು ಹಾಗೆಯೇ ಮಾಡಿದೆ. ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನನ್ನನ್ನು ಹುರಿದುಂಬಿಸಿದರು. ಬಳಿಕ ನಾನು ಒಂದು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡು ಹಾಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಇದೆಲ್ಲವೂ ಇದೆ' ಎಂದು ಅವರು ಹೇಳಿದ್ದಾರೆ.

'ಇಲ್ಲಿ ತಪ್ಪು ಯಾರದ್ದು ಎಂಬ ನಿರ್ಧಾರವನ್ನು ಕರ್ನಾಟಕದ ಪ್ರಜ್ಞಾವಂತ ಜನತೆಗೆ ಬಿಟ್ಟು ಬಿಡುತ್ತೇನೆ. ನಿಮ್ಮ ತೀರ್ಪನ್ನು ನಾನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ವ್ಯವಸ್ಥೆ ಮತ್ತ ಪೊಲೀಸ್‌ ಇಲಖೆಯ ಮೇಲೆ ಗೌರವ ಮತ್ತು ನಂಬಿಕೆಯಿದೆ. ನನ್ನಿಂದ ನಿರೀಕ್ಷಿಸಬಹುದಾದ ಎಲ್ಲ ಸಹಕಾರವನ್ನು ನೀಡಲಿ ಸಿದ್ದನಿದ್ದೇನೆ. ನನಗೆ ಕರ್ನಾಟಕದಿಂದ ದೈವಿಕ ಪ್ರೀತಿ ಸಿಕ್ಕಿದೆ. ನಿಮ್ಮ ತೀರ್ಪು ಏನೇ ಇರಲಿ, ಯಾವುದೇ ದುರುದ್ದೇಶವಿಲ್ಲದೆ ಅದನ್ನು ಸ್ವೀಕರಿಸುತ್ತೇನೆ' ಎಂದು ಅವರು ಬರೆದುಕೊಂಡಿದ್ದಾರೆ.

ಏನಿದು ಘಟನೆ

ಖಾಸಗಿ ಸಂಸ್ಥೆಯೊಂದು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಸೋನು ನಿಗಮ್ ಕನ್ನಡ ಕುರಿತು ಆಡಿದ ಮಾತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಯುವಕನೊಬ್ಬ ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದಾಗ ಅದನ್ನು ಪಹಲ್ಗಾಮ್ ದಾಳಿಗೆ ತಳಕು ಹಾಕಿ ಗಾಯಕ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಅಸಹಕಾರ ತೋರಲು ಕನ್ನಡ ಚಿತ್ರರಂಗ ನಿರ್ಧಾರ:

ಕನ್ನಡ ಹಾಡಿಗಾಗಿ ಒತ್ತಾಯ ಮಾಡಿದ್ದನ್ನು ಪಹಲ್ಗಾಮ್‌ ಭಯೋತ್ಪಾದನಾ ದಾಳಿಗೆ ತಳುಕು ಹಾಕಿದ ಗಾಯಕ ಸೋನು ನಿಗಮ್‌ಗೆ ಅಸಹಕಾರ ತೋರಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು(ಕೆಎಫ್‌ಸಿಸಿ) ನಿರ್ಧರಿಸಿದೆ. ಯಾರೂ ಸೋನು ನಿಗಮ್‌ ಅವರನ್ನು ಹಾಡಿಸಲು ಕರೆಯಬಾರದು, ಮ್ಯೂಸಿಕಲ್‌ ನೈಟ್‌ ಸೇರಿದಂತೆ ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಕೂಡದು ಎಂದು ಮಂಡಳಿ ಅಧ್ಯಕ್ಷ ನರಸಿಂಹಲು ಎಂ. ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.