
(ಚಿತ್ರ ಕೃಪೆ–
ಬೆಂಗಳೂರು: ರಿಷಬ್ ಶೆಟ್ಟಿ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿ, ನಟಿಸಿರುವ ‘ಕಾಂತಾರ ಅಧ್ಯಾಯ 1’ ಚಿತ್ರದ ಬಿಡುಗಡೆ ಹತ್ತಿರದಲ್ಲಿದ್ದರೂ ಚಿತ್ರದ ಪ್ರಚಾರ ತುಣುಕುಗಳು ಈತನಕ ಹೊರಬಂದಿರಲಿಲ್ಲ. ‘ಕಾಂತಾರ’ದ ಜಗತ್ತು ಪರಿಚಯಿಸುವ ಮೇಕಿಂಗ್ ವಿಡಿಯೊವನ್ನು ಮಾತ್ರ ಚಿತ್ರತಂಡ ಈ ಹಿಂದೆ ಬಿಡುಗಡೆಗೊಳಿಸಿತ್ತು. ಹಾಡುಗಳು, ಟ್ರೇಲರ್ ಯಾವಾಗ ಎಂದು ಕೇಳುತ್ತಿದ್ದವರಿಗೆ ಚಿತ್ರತಂಡ ಉತ್ತರ ನೀಡಿದೆ. ಸೆ.22 ರಂದು ಚಿತ್ರದ ಟ್ರೇಲರ್ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ.
‘ಕಾಂತಾರ ಅಧ್ಯಾಯ 1’ ಚಿತ್ರದ ಟ್ರೇಲರ್ ಸೆಪ್ಟೆಂಬರ್ 22, 2025ರಂದು ಮಧ್ಯಾಹ್ನ 12:40ಕ್ಕೆ ಅಧಿಕೃತವಾಗಿ ಬಿಡುಗಡೆಯಾಗಲಿದೆ ಎಂದು ಹೊಂಬಾಳೆ ಫಿಲ್ಮ್ಸ್ ಘೋಷಿಸಿದೆ. ಈ ಚಿತ್ರವು ಅಕ್ಟೋಬರ್ 2ರಂದು ವಿಶ್ವದಾದ್ಯಂತ ತೆರೆ ಕಾಣಲಿದ್ದು, ಅಮೆರಿಕ ಸೇರಿದಂತೆ ವಿದೇಶಿ ಚಿತ್ರಮಂದಿರಗಳಲ್ಲಿ ಮುಂಗಡ ಟಿಕೆಟ್‌ಗಳು ಈಗಾಗಲೇ ಮಾರಾಟಗೊಂಡಿವೆ.
‘ಕರಾವಳಿ ಕರ್ನಾಟಕದ ಅತೀಂದ್ರಿಯ ಲೋಕವನ್ನು ಅನಾವರಣಗೊಳಿಸುವ ಈ ಚಿತ್ರವು ಪುರಾಣ, ಭಕ್ತಿ ಮತ್ತು ಅದೃಷ್ಟದ ನಡುವಿನ ಪೌರಾಣಿಕ ಕಥೆಯನ್ನು ಹೇಳುತ್ತದೆ’ ಎಂದಿದೆ ಚಿತ್ರತಂಡ. ‘ರಿಷಬ್ ಅವರು ನಾಗಾಸಾಧು ಹಾಗೂ ದೈವವನ್ನು ತುಳುನಾಡಿಗೆ ಪರಿಚಯಿಸುವ ರಾಜನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ’ ಎನ್ನಲಾಗಿದೆ.
ರಿಷಬ್ ಶೆಟ್ಟಿ, ಜೊತೆಗೆ ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಅವರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಬಿ.ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಎಸ್. ಕಶ್ಯಪ್ ಛಾಯಾಚಿತ್ರಗ್ರಹಣವಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.