‘ಎಕ್ಕ’, ‘ಸು ಫ್ರಮ್ ಸೋ’, ‘ಏಳುಮಲೆ’ಯ ಸಿನಿಮಾದ ಯಶಸ್ಸಿನಿಂದ 2025ರ ದ್ವಿತೀಯಾರ್ಧ ಆರಂಭವಾಗಿತ್ತು. ಇವು ಏಕಪರದೆ ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಮರಳಿ ತಂದರೆ, ಅ.2ರಂದು ತೆರೆಕಂಡ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ: ಒಂದು ದಂತಕಥೆ, ಚಾಪ್ಟರ್–1’ ಸಿನಿಮಾ ಚಿತ್ರಮಂದಿರಗಳನ್ನು ಪ್ರೇಕ್ಷಕರಿಂದ ಭರ್ತಿಯಾಗಿಸಿದೆ.
ಬಿಡುಗಡೆಯಾದ ಮೊದಲ ವಾರದಲ್ಲಿ ವಿಶ್ವದಾದ್ಯಂತ ₹509.25 ಕೋಟಿ ಗಳಿಸಿದ ಈ ಸಿನಿಮಾ ಇಲ್ಲಿಯವರೆಗೂ ಸುಮಾರು ₹650 ಕೋಟಿ ಬಾಚಿದೆ. ಕರ್ನಾಟಕದಲ್ಲೇ ಸಿನಿಮಾ ಸುಮಾರು ₹190 ಕೋಟಿಯಷ್ಟು ಗಳಿಸಿದೆ ಎಂದಿವೆ ಮೂಲಗಳು. ಈ ಮೂಲಕ ಸಿನಿಮಾವು ಸೊರಗಿದ್ದ ಏಕಪರದೆ ಚಿತ್ರಮಂದಿರಗಳಿಗೆ ಉಸಿರು ತುಂಬಿದೆ. ರಾಜಧಾನಿ ಬೆಂಗಳೂರಿನ ಏಕಪರದೆ ಚಿತ್ರಮಂದಿರಗಳಲ್ಲಿ ಮೊದಲ ವಾರ ಸುಮಾರು ₹80 ಲಕ್ಷದಿಂದ ₹1 ಕೋಟಿವರೆಗೆ ಗಳಿಕೆಯಾಗಿದೆ. ‘ಕಾಂತಾರ’ ಸಿನಿಮಾ ಗುರುವಾರವೇ (ಅ.2) ತೆರೆಕಂಡಿತ್ತು. ಅದಕ್ಕೂ ಮೊದಲೇ ಅಂದರೆ ಅ.1ರಂದು ಸಂಜೆಯಿಂದಲೇ ಪ್ರೀಮಿಯರ್ ಶೋಗಳು ಇದ್ದವು. ಈ ವಿಶೇಷ ಪ್ರದರ್ಶನಕ್ಕೆ ಏಕಪರದೆ ಚಿತ್ರಮಂದಿರಗಳಲ್ಲೇ ₹400 ದರ ನಿಗದಿತಯಾಗಿತ್ತು. ಅ.2ರಿಂದ ಏಕಪರದೆ ಚಿತ್ರಮಂದಿರಗಳಲ್ಲಿ ಈ ಸಿನಿಮಾದ ಟಿಕೆಟ್ ದರ ₹150–₹200ರವರೆಗಿದೆ. ಹಿಂದೆ ಇವೇ ಚಿತ್ರಮಂದಿರಗಳಲ್ಲಿ ಇತರೆ ಸಿನಿಮಾಗಳ ಟಿಕೆಟ್‌ಗೆ ₹100–₹120 ಇತ್ತು. ಈ ದರ ಏರಿಕೆಯ ಕಾರಣದಿಂದಲೂ ಏಕಪರದೆ ಚಿತ್ರಮಂದಿರಗಳಲ್ಲಿ ಒಟ್ಟು ಗಳಿಕೆ ಹೆಚ್ಚಾಗಿದೆ. ವರ್ಷದ ಮೊದಲಾರ್ಧದಲ್ಲಿ ಕಳೆಗುಂದಿದ್ದ ಏಕಪರದೆ ಚಿತ್ರಮಂದಿರಗಳಿಗೆ ಇದೀಗ ಜೀವಕಳೆ ಬಂದಿದೆ.
ಸೆ.19ರವರೆಗೂ ಪ್ರತಿ ಶುಕ್ರವಾರ ಸರಾಸರಿ ಐದಾರು ಕನ್ನಡ ಸಿನಿಮಾಗಳು ತೆರೆಕಾಣುತ್ತಿದ್ದವು. ಕಾಂತಾರ ಬಿಡುಗಡೆಗೂ ಒಂದು ವಾರ ಮುನ್ನ(ಸೆ.26) ಎರಡು ಕನ್ನಡ ಸಿನಿಮಾಗಳು ತೆರೆಕಂಡಿದ್ದವು. ಅಲ್ಲಿಂದ ಇಲ್ಲಿಯವರೆಗೂ ‘ಕಾಂತಾರ’ ಬಿಟ್ಟರೆ ಯಾವುದೇ ಕನ್ನಡ ಸಿನಿಮಾ ತೆರೆಕಂಡಿಲ್ಲ. ಸೆಪ್ಟೆಂಬರ್‌ನಲ್ಲಿ ಇಪ್ಪತ್ತಕ್ಕೂ ಅಧಿಕ ಕನ್ನಡ ಸಿನಿಮಾಗಳು ಬಿಡುಗಡೆಯಾದರೂ ಸದ್ಯ ಯಾವುದೇ ಕನ್ನಡ ಸಿನಿಮಾಗಳೂ ಚಿತ್ರಮಂದಿರಗಳಲ್ಲಿಲ್ಲ.
‘ಕಾಂತಾರ ಸಿನಿಮಾ ಬರುತ್ತಿದೆ ಎನ್ನುವ ಕಾರಣಕ್ಕೆ ಯಾವುದೇ ಬೇರೆ ಕನ್ನಡ ಸಿನಿಮಾಗಳೂ ಕಳೆದ ಒಂದೆರಡು ವಾರದಲ್ಲಿ ಬಿಡುಗಡೆಯಾಗಿಲ್ಲ. ಸ್ಪರ್ಧೆ ಬೇಡವೆಂದು ದೂರವಿದ್ದರು. ತಿಂಗಳಾಂತ್ಯದಿಂದ ಹೊಸ ಕನ್ನಡ ಸಿನಿಮಾಗಳು ಬರಲಿವೆ. ಕರ್ನಾಟಕದಲ್ಲಿ ಸುಮಾರು 500 ಚಿತ್ರಮಂದಿರಗಳಿವೆ. ಇವುಗಳಲ್ಲಿ ಶೇಕಡ 75ರಷ್ಟು ಚಿತ್ರಮಂದಿರಗಳಿಗೆ ಜನರು ಬಂದಾಗ ಚಿತ್ರರಂಗದ ಅಭಿವೃದ್ಧಿ ಎಂದು ಪರಿಗಣಿಸುತ್ತೇವೆ. ನಮ್ಮ ಚಿತ್ರಮಂದಿರದಲ್ಲಿ ಒಂದು ವಾರಕ್ಕೆ 35 ಪ್ರದರ್ಶನವಿರುತ್ತದೆ. ಪ್ರೀಮಿಯರ್‌ನಿಂದ ಲೆಕ್ಕ ಹಿಡಿದರೆ ನಮ್ಮಲ್ಲಿ ‘ಕಾಂತಾರ’ದ 43 ಪ್ರದರ್ಶನವನ್ನು 9 ದಿನದಲ್ಲಿ ನೀಡಿದ್ದೆವು. ಇದರಿಂದ ನಮಗೆ ₹1.10 ಕೋಟಿ ಕಲೆಕ್ಷನ್ ಆಗಿದ್ದು, ಇದರಲ್ಲಿ ಸುಮಾರು ₹81 ಲಕ್ಷ ವಿತರಕರಿಗೆ ದೊರೆಯಲಿದೆ. ಇದರಲ್ಲಿ ನಮಗೆ ನಿಗದಿಯಾದ ಬಾಡಿಗೆಯನ್ನು ನೀಡುತ್ತಾರೆ. ನಮ್ಮ ಚಿತ್ರಮಂದಿರದ ಇತಿಹಾಸದಲ್ಲಿ ಒಂದು ವಾರದಲ್ಲಿ ಇಷ್ಟು ಕಲೆಕ್ಷನ್ ಆಗಿದ್ದು ಇದೇ ಮೊದಲು. ಹೆಚ್ಚಿನ ಪ್ರೇಕ್ಷಕರು, ಟಿಕೆಟ್ ದರ ಹೆಚ್ಚಳವಾಗಿರುವುದೂ ಇದಕ್ಕೆ ಕಾರಣ. ಬೆಂಗಳೂರಿನ ಬಹುತೇಕ ಏಕಪರದೆ ಚಿತ್ರಮಂದಿರಗಳಲ್ಲಿ ಇಷ್ಟೇ ಗಳಿಕೆಯಾಗಿದೆ’ ಎನ್ನುತ್ತಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.
‘ಮುಂದಿನ ವಾರಗಳಲ್ಲಿ ಸ್ಟಾರ್ ಸಿನಿಮಾಗಳ ಹರಿವು ಜೋರಾಗಿಯೇ ಇರಲಿದ್ದು, ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಬೋರ್ಡ್‌ಗಳು ನಿರಂತರವಾಗಿರಲಿದೆ’ ಎಂದರು ಚಂದ್ರಶೇಖರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.