
ನಟ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ ‘ಕಾಂತಾರ ಚಾಪ್ಟರ್ 1’ ಅ. 2ರಂದು ತೆರೆಕಂಡು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ದೇಶದಾದ್ಯಂತ 7 ಸಾವಿರಕ್ಕೂ ಅಧಿಕ ಪರದೆಯಲ್ಲಿ ಬಿಡುಗಡೆಯಾಗಿದ್ದ ‘ಕಾಂತಾರ ಚಾಪ್ಟರ್ 1’ ಮೊದಲ ವಾರದಲ್ಲೇ ₹509.25 ಕೋಟಿ ಗಳಿಕೆ ಮಾಡಿತ್ತು.
ಎರಡು ವಾರದ ಬಳಿಕವೂ ಚಿತ್ರಮಂದಿರಗಳು ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ದೀಪಾವಳಿಗೆ ಕಾಂತಾರ ಚಾಪ್ಟರ್ 1ರ ಮತ್ತೊಂದು ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.
‘ಪ್ರೀತಿ ಮತ್ತು ಭಕ್ತಿ ತುಂಬಿದ ಹೃದಯಗಳೊಂದಿಗೆ, ದೈವಿಕ ಕಥೆ ಈ ಬೆಳಕಿನ ಹಬ್ಬವನ್ನು ಬೆಳಗಿಸುತ್ತದೆ. ಕಾಂತಾರ ಚಾಪ್ಟರ್ 1 ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ಅದ್ಭುತ ಪ್ರಯಾಣವನ್ನು ಮುಂದುವರೆಸಿದೆ. ಬ್ಲಾಕ್ ಬಾಸ್ಟರ್ ಕಾಂತಾರ ದೀಪಾವಳಿ ಟ್ರೇಲರ್ ಅನ್ನು ಪ್ರಸ್ತುತಪಡಿಸಲಾಗುತ್ತಿದೆ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
ಬಿಡುಗಡೆಯಾದ 3 ನಿಮಿಷದ ಟ್ರೇಲರ್‌ನಲ್ಲಿ, ‘ಕದಂಬರು ಬನವಾಸಿ ಆಳುತ್ತಿದ್ದ ಕಾಲ. ಪಡುವಣದ ಪಾಳೆಗಾರರು ಕದಂಬರ ಕೆಳಗೆ ಸಾಮಂತರಾಗಿ ಮೆರೆಯುತ್ತಿದ್ದರು. ಪ್ರಕೃತಿಯನ್ನೇ ಆರಾಧಿಸುವ ನಮ್ಮವರು ಕಲ್ಲಲ್ಲಿ ದೈವತ್ವವನ್ನು ಕಾಣುವ ಹೊತ್ತಿನಲ್ಲಿ ತಿಳಿ ನೀರಿನಲ್ಲಿ ನೆತ್ತರು ಹರಿಯಿತು. ಧರ್ಮದ ಬೀಡು ಬರುಡಾದಾಗಲೆಲ್ಲಾ ಉಳ್ಳಾಯ ಮಳೆ ಸುರಿಸುತ್ತಾನಂತೆ. ಈ ಮಣ್ಣಲ್ಲಿ ದೈವತ್ವ ಮತ್ತೆ ಮತ್ತೆ ಹುಟ್ಟುತ್ತದೆ ಎಂದು ಹೇಳುತ್ತಿದ್ದಂತೆ ಆಗ ರಿಷಬ್ ಶೆಟ್ಟಿ ಅವರ ಆಗಮನ ಆಗಲಿದೆ. ಇದು ಕನ್ನಡ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಟ್ರೇಲರ್ ಬಿಡುಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.