ADVERTISEMENT

ಮಲ್ಟಿಪ್ಲೆಕ್ಸ್‌ ಟಿಕೆಟ್‌ ದರ ₹250 ಮೀರದಂತೆ ನಿಗದಿಪಡಿಸಿ: ಚಲನಚಿತ್ರ ವಾಣಿಜ್ಯ ಮಂಡಳಿ

ಮುಖ್ಯಮಂತ್ರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2023, 20:45 IST
Last Updated 12 ಜುಲೈ 2023, 20:45 IST
ಭಾ.ಮ.ಹರೀಶ್‌ 
ಭಾ.ಮ.ಹರೀಶ್‌    

ಬೆಂಗಳೂರು: ‘ನೆರೆರಾಜ್ಯಗಳಲ್ಲಿ ನಿಗದಿಪಡಿಸಿರುವಂತೆ ಕರ್ನಾಟಕದಲ್ಲೂ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ₹250 ಮೀರದಂತೆ ಹಾಗೂ ಏಕಪರದೆ ಚಿತ್ರಮಂದಿರಗಳಲ್ಲಿ ₹150 ಮೀರದಂತೆ ಚಿತ್ರಗಳಿಗೆ ಪ್ರವೇಶದರ ನಿಗದಿಪಡಿಸಿ ಆದೇಶ ಹೊರಡಿಸಿ’ ಎಂಬ ಬೇಡಿಕೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎದುರಿಗಿರಿಸಿದೆ. 

ಮಂಡಳಿಯ ಅಧ್ಯಕ್ಷ ಭಾ.ಮ.ಹರೀಶ್‌ ಅವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಬೇಡಿಕೆ ಪತ್ರ ಸಲ್ಲಿಸಿದ್ದು, ‘ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಪ್ರವೇಶದರ ದುಬಾರಿಯಾಗಿದ್ದು, ಕನ್ನಡ ಪ್ರೇಕ್ಷಕರಿಗೆ ಹೊರೆಯಾಗುತ್ತಿದೆ. ಆದಕಾರಣ ಏಕರೀತಿಯ ಪ್ರವೇಶದರ ನಿಗದಿಪಡಿಸಿದರೆ, ಚಿತ್ರಮಂದಿರಗಳಿಗೆ ಹೆಚ್ಚಿನ ಪ್ರೇಕ್ಷಕರು ಬರುವಂತಾಗಲಿದೆ’ ಎಂದು ಉಲ್ಲೇಖಿಸಿದ್ದಾರೆ. 

‘ರಾಜ್ಯದ ಚಿತ್ರಮಂದಿರಗಳಲ್ಲಿನ ಪ್ರೊಜೆಕ್ಟರ್‌ಗಳು ವಿದೇಶದಿಂದ, ಅದರಲ್ಲೂ ಒಂದಿಬ್ಬರು ಸರ್ವೀಸ್ ಪ್ರೊವೈಡರ್‌ಗಳಿಂದ ಪಡೆಯಬೇಕಾಗಿದೆ. ಚಿತ್ರಮಂದಿರಗಳು ಇಂದಿಗೂ ಬಾಡಿಗೆ ರೂಪದಲ್ಲಿ ಇವುಗಳನ್ನು ಪಡೆದು ಪ್ರದರ್ಶನ ನಡೆಸುತ್ತಿವೆ. ಸ್ವಂತ ಪ್ರೊಜೆಕ್ಟರ್ ಖರೀದಿಸಲು ₹40-50 ಲಕ್ಷ ಬಂಡವಾಳ ಹೂಡಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರದರ್ಶಕರಿಗೆ ತಲಾ ಒಂದು ಪ್ರೊಜೆಕ್ಟರ್ ಖರೀದಿಗೆ ₹10 ರಿಂದ 15 ಲಕ್ಷ ಸಹಾಯಧನ ನೀಡಬೇಕು’ ಎನ್ನುವ ಮನವಿಯನ್ನೂ ಮಂಡಳಿ ಮುಖ್ಯಮಂತ್ರಿಗಳ ಮುಂದಿಟ್ಟಿದೆ. ಈ ಸಂದರ್ಭದಲ್ಲಿ ಮಂಡಳಿಯ ಪದಾಧಿಕಾರಿಗಳಾದ ಎಚ್.ಸಿ. ಶ್ರೀನಿವಾಸ, ಸುಂದರ್ ರಾಜ್ ಮತ್ತಿತರರು ಉಪಸ್ಥಿತರಿದ್ದರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.