ADVERTISEMENT

ನಾವು ನೋಡಿದ ಸಿನಿಮಾ: ‘ಕಥೆಯೊಂದು ಶುರುವಾಗಿದೆ’ ಸಾವಧಾನವಾಗಿ ಸಾಗಿದೆ

ವಿಜಯ್ ಜೋಷಿ
Published 3 ಆಗಸ್ಟ್ 2018, 13:05 IST
Last Updated 3 ಆಗಸ್ಟ್ 2018, 13:05 IST
ದಿಗಂತ್ ಮತ್ತು ಪೂಜಾ
ದಿಗಂತ್ ಮತ್ತು ಪೂಜಾ   

ಪ್ರೀತಿಯೆಂಬುದು ಒಂದು ಭಾವ. ಅದು ವ್ಯಕ್ತವಾಗುವ ಬಗೆಗಳು ಹತ್ತಾರು. ವ್ಯಕ್ತವಾಗುವುದು ಒಂದೇ ಬಗೆಯಲ್ಲಾಗಿದ್ದರೂ ನೋಡುವ ವ್ಯಕ್ತಿಗೆ ಹಲವು ರೀತಿಗಳಲ್ಲಿ ಅದು ಕಾಣಿಸುತ್ತದೆಯೋ?! ಹೀಗೆ, ಪ್ರೀತಿಯ ಬಗ್ಗೆ ಹಲವೆಂಟು ಪ್ರಶ್ನೆಗಳನ್ನು ಮೂಡಿಸುತ್ತ ಸಾಗುವ ಚಿತ್ರ ‘ಕಥೆಯೊಂದು ಶುರುವಾಗಿದೆ’.

ದಿಗಂತ್ ಮಂಚಾಲೆ (ತರುಣ್), ಪೂಜಾ (ತಾನ್ಯಾ) ಇಲ್ಲಿನ ಮುಖ್ಯ ಪಾತ್ರಗಳು. ಅವರ ಜೊತೆಯಲ್ಲಿ ಇನ್ನೂ ನಾಲ್ಕು ಪಾತ್ರಗಳು ಚಿತ್ರದುದ್ದಕ್ಕೂ ಬರುತ್ತವೆ. ಈ ಪಾತ್ರಗಳು ಹಾಸ್ಯ ಮಾಡುತ್ತ, ಕೀಟಲೆ ಮಾಡುತ್ತ ಹೇಳುವುದು ಕೂಡ ‘ಪ್ರೀತಿ’ಯನ್ನೇ.

ತರುಣ್‌ ಒಂದು ಚಿಕ್ಕ ಊರಿನಲ್ಲಿ ತನ್ನದೊಂದು ರೆಸಾರ್ಟ್‌ ನಡೆಸಿಕೊಂಡು ಹೋಗುತ್ತಿರುವ ಯುವಕ. ಸ್ವರ್ಣಾ (ಶ್ರೇಯಾ ಅಂಚನ್) ಮತ್ತು ಪೆಡ್ರೋ (ಅಶ್ವಿನ್ ರಾವ್ ಪಲ್ಲಕ್ಕಿ) ಅವನ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರು. ಮಕ್ಕಳಿಲ್ಲದ ಮೂರ್ತಿ (ಬಾಬು ಹಿರಣ್ಣಯ್ಯ) ಮತ್ತು ರಾಧಾ (ಅರುಣಾ ಬಾಲರಾಜ್) ದಂಪತಿಗೆ ತರುಣ್‌ ದೊಡ್ಡ ಆಸರೆ ಇದ್ದಂತೆ. ಇದು ಸಿನಿಮಾ ಆರಂಭದಲ್ಲಿ ಸಿಗುವ ಚಿತ್ರಣ.

ADVERTISEMENT

ಮನಸ್ಸನ್ನು ಹಗುರ ಮಾಡಿಕೊಳ್ಳಲು ಆ ರೆಸಾರ್ಟ್‌ಗೆ ಬರುವವಳು ತಾನ್ಯಾ. ರೆಸಾರ್ಟ್‌ನ ವಿಚಾರದಲ್ಲಿ ತರುಣ್‌ ಹಣಕಾಸಿನ ಬಿಕ್ಕಟ್ಟಿನಲ್ಲಿ ಸಿಲುಕಿದ್ದಂತೆ ತೋರುತ್ತದೆ. ಬಿಕ್ಕಟ್ಟಿನಿಂದ ಹೊರಬರುವ ಬಗೆ ಹೇಗೆ ಎಂಬ ಪ್ರಶ್ನೆ ತರುಣ್‌ ಮುಂದೆ ಇರುತ್ತದೆ. ಅಲ್ಲದೆ, ಅವನಿಗೊಂದು ಭಾವನಾತ್ಮಕ ಆಸರೆ ಕೂಡ ಬೇಕಿರುತ್ತದೆ. ಇಂತಹ ಸಂದರ್ಭದಲ್ಲಿ ಅಲ್ಲಿಗೆ ಬರುತ್ತಾಳೆ ತಾನ್ಯಾ. ಅವಳು ಬಂದ ನಂತರ, ತಾನ್ಯಾ ಹಾಗೂ ತರುಣ್‌ ನಡುವೆ ತುಸು ಸಲುಗೆ ಬೆಳೆದು ಸಿನಿಮಾದಲ್ಲಿ ಕಥೆಯೊಂದು ಶುರುವಾಗುತ್ತದೆ. ತಾನ್ಯಾ ಕೂಡ ಅಲ್ಲಿಗೆ ಬರುವ ಹೊತ್ತಿನಲ್ಲಿ ಭಾವನಾತ್ಮಕವಾಗಿ ಕುಗ್ಗಿಹೋಗಿರುತ್ತಾಳೆ. ಆಕೆಯ ಮನಸ್ಸು ಕೂಡ ಆಸರೆಯೊಂದನ್ನು ಬಯಸಿರುತ್ತದೆ.

ಸ್ವರ್ಣಾಳನ್ನು ಪ್ರೀತಿಸುವ ಪೆಡ್ರೊ ಅದನ್ನು ಆಕೆಗೆ ಹೇಳಿಕೊಳ್ಳಲಾಗದೆ ಒದ್ದಾಡುತ್ತಿರುತ್ತಾನೆ. ತನ್ನ ಪೆದ್ದುತನದಿಂದಾಗಿಯೇ ಇಷ್ಟವಾಗುವ ಪಾತ್ರ ಪೆಡ್ರೊ. ಇಳಿ ವಯಸ್ಸಿನಲ್ಲೂ ಪತ್ನಿಯನ್ನು ರೇಗಿಸುತ್ತ, ರೇಗಿಸುವ ಮೂಲಕವೇ ಪ್ರೀತಿಯನ್ನು ವ್ಯಕ್ತಪಡಿಸುವ ಮೂರ್ತಿ ಆ ಕಾರಣಕ್ಕಾಗಿಯೇ ನೆನಪಿನಲ್ಲಿ ಉಳಿದುಕೊಳ್ಳುತ್ತಾನೆ. ಅಂದಹಾಗೆ, ಈ ಸಿನಿಮಾ ಭಯಂಕರ ವೇಗದ ಕಥೆ ಬಯಸುವವರಿಗೋ ಅಥವಾ ಉಸಿರುವ ಬಿಗಿ ಹಿಡಿದು ನೋಡಬೇಕಾದ ಥ್ರಿಲ್ಲರ್ ಕಥಾ ಹಂದರ ಕೇಳುವವರಿಗೋ ಅಲ್ಲ. ‘ಪಂಚಿಂಗ್ ಡೈಲಾಗ್‌ ಬೇಕು’ ಎನ್ನುವವರಿಗೂ ಅಲ್ಲ ಇದು.

ಸಾವಧಾನವಾಗಿ ಕುಳಿತು, ಭಾವನಾತ್ಮಕ ಅವಲಂಬನೆಯ ಜೊತೆ ತಮ್ಮನ್ನು ಗುರುತಿಸಿಕೊಳ್ಳುವ ಮನಸ್ಸು ಇರುವ ವೀಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ನಿರ್ದೇಶಕ ಸೆನ್ನಾ ಹೆಗ್ಡೆ ಈ ಸಿನಿಮಾ ಮಾಡಿದಂತಿದೆ. ಚಿತ್ರದಲ್ಲಿ ಬರುವ ದೃಶ್ಯಗಳು ಕರಾವಳಿಯ ಸೊಬಗನ್ನು ಚೆಂದವಾಗಿ ತೋರಿಸಿವೆ.
**
ಚಿತ್ರ: ಕಥೆಯೊಂದು ಶುರುವಾಗಿದೆ
ನಿರ್ದೇಶನ: ಸೆನ್ನಾ ಹೆಗ್ಡೆ
ನಿರ್ಮಾಣ: ರಕ್ಷಿತ್ ಶೆಟ್ಟಿ, ಪುಷ್ಕರ ಮಲ್ಲಿಕಾರ್ಜುನಯ್ಯ, ವಿನೋದ್ ದಿವಾಕರ್
ತಾರಾಗಣ: ದಿಗಂತ್, ಪೂಜಾ, ಶ್ರೇಯಾ, ಬಾಬು ಹಿರಣ್ಣಯ್ಯ
ಸಂಗೀತ: ಸಚಿನ್ ವಾರಿಯರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.