ಬಾಬಿ ಚೆಮ್ಮನ್ನೂರ್ ಮತ್ತು ನಟಿ ಹನಿ ರೋಸ್
ತಿರುವನಂತಪುರ: ಬಹುಭಾಷಾ ನಟಿ ಹನಿ ರೋಸ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಚೆಮ್ಮನ್ನೂರ್ ಜುವೆಲ್ಲರ್ಸ್‌ನ ಮಾಲೀಕ ಬಾಬಿ ಚೆಮ್ಮನ್ನೂರ್ ಅಲಿಯಾಸ್ ‘ಬೋಚೆ’ ಅವರಿಗೆ ಕೇರಳ ಹೈಕೋರ್ಟ್ ಇಂದು (ಮಂಗಳವಾರ) ಜಾಮೀನು ಮಂಜೂರು ಮಾಡಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ.ವಿ. ಕುಂಞಿಕೃಷ್ಣನ್ ಅವರು, ಪ್ರಕರಣಕ್ಕೆ ಸಂಬಂಧಿಸಿ ಮಧ್ಯಾಹ್ನ 3.30ರೊಳಗೆ ವಿವರವಾದ ಆದೇಶವನ್ನು ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ.
ಬಾಬಿ ಚೆಮ್ಮನ್ನೂರ್ ಅವರು ನಟಿ ಬಗ್ಗೆ ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್ ಅಥವಾ ಹೇಳಿಕೆಗಳಲ್ಲಿ ಡಬಲ್ ಮೀನಿಂಗ್ ಇಲ್ಲವೆಂದು ಹೇಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯಲ್ಲೂ ನಟಿಯ ವೃತ್ತಿಪರ ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ತಪ್ಪು ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಇದು ಕೂಡಾ ‘ಅವಮಾನಕರ’ ಎಂದು ಕೋರ್ಟ್ ಹೇಳಿದೆ.
ಜಾಮೀನು ಅರ್ಜಿಯನ್ನು ಪ್ರಾಸಿಕ್ಯೂಷನ್ ಬಲವಾಗಿ ವಿರೋಧಿಸಿತ್ತು. ಚೆಮ್ಮನೂರ್ ಅವರ ಬಹುತೇಕ ಎಲ್ಲಾ ಸಾಮಾಜಿಕ ಮಾಧ್ಯಮಗಳ ಪೋಸ್ಟ್‌ಗಳು ಮಹಿಳೆಯರಿಗೆ ಅವಮಾನ ಮಾಡುವ ಉದ್ದೇಶ ಹೊಂದಿದ್ದವು ಎಂದು ಪ್ರತಿಪಾದಿಸಿದ್ದರು.
ಬಾಬಿ ಅವರಿಗೆ ಜಾಮೀನು ಮಂಜೂರು ಮಾಡುವುದಾದರೇ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದೂ ಪ್ರಾಸಿಕ್ಯೂಷನ್ ಪ್ರತಿಪಾದಿಸಿತ್ತು.
ಜನವರಿ 9ರಂದು ಬಾಬಿ ಅವರಿಗೆ ಸ್ಥಳೀಯ ನ್ಯಾಯಾಲಯ ಗುರುವಾರ ಜಾಮೀನು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಾಬಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಲೈಂಗಿಕ ಕಿರುಕುಳ ಕುರಿತು ನಟಿ ರೋಸ್ ಅವರು ಕೊಚ್ಚಿ ಸಿಟಿ ಪೊಲೀಸ್ ಠಾಣೆಯಲ್ಲಿ ಜ.7ರಂದು ದೂರು ದಾಖಲಿಸಿದ್ದರು. ಪೊಲೀಸರು ‘ಬೋಚೆ’ ಅವರನ್ನು ವಯನಾಡ್‌ನಲ್ಲಿ ಬಂಧಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.