
ಕೊಚ್ಚಿ: ‘ದಿ ಕೇರಳ ಸ್ಟೋರಿ 2’ ಸಿನಿಮಾ ಬಿಡುಗಡೆಯಾಗಿಲ್ಲ. ಬುಕ್ಕಿಂಗ್ ಆಗಿದ್ದ ಟಿಕೆಟ್ ಹಣವನ್ನು ಕೂಡ ವಾಪಾಸ್ ಮಾಡಲಾಗಿದೆ ಎಂದು ಸಿನಿಮಾ ಬಿಡುಗಡೆಯನ್ನು ವಿರೋಧಿಸಿದ್ದ ಅರ್ಜಿದಾರರ ಪರ ವಕೀಲರು ತಿಳಿಸಿದ್ದಾರೆ.
ಚಿತ್ರವು ಕೋಮು ಸಾಮರಸ್ಯವನ್ನು ಹಾಳುಮಾಡುವ, ಅಶಾಂತಿ ಸೃಷ್ಟಿಸುವ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕದಡುವ, ಸಾಮಾಜಿಕ ಸಾಮರಸ್ಯ ಹಾಳುಮಾಡುವ ಪ್ರವೃತ್ತಿಯನ್ನು ಹೊಂದಿರುವ ಕಾರಣ ಚಿತ್ರದ ಬಿಡುಗಡೆಗೆ ಅನುಮತಿ ನೀಡಬಾರದು ಎಂದು ಶ್ರೀದೇವ್ ನಂಬೂದರಿ ಎನ್ನುವವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಸಿನಿಮಾ ಬಿಡುಗಡೆಗೆ ಕೇರಳ ಹೈಕೋರ್ಟ್ ಗುರುವಾರ ಮಧ್ಯಂತರ ತಡೆ ನೀಡಿತ್ತು.
ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಸಿನಿಮಾದ ಟಿಕೆಟ್‌ಗಳನ್ನು ಮಾರಾಟ ಮಾಡಲಾಗುತ್ತಿದೆ ಆರೋಪಿಸಿ ಅರ್ಜಿದಾರರ ಪರ ವಕೀಲೆ ಮೈತ್ರೇಯಿ ಸಚ್ಚಿದಾನಂದ ಹೆಗ್ಡೆ ಅವರು ಚಿತ್ರದ ನಿರ್ಮಾಪಕರ ವಿರುದ್ಧ ನ್ಯಾಯಂಗ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಿಸಲು ಶುಕ್ರವಾರ ಬೆಳಗ್ಗೆ ಮುಂದಾಗಿದ್ದರು. ಈ ಕುರಿತು ಪರಿಶೀಲಿಸಿ ನಡೆಸಲು ಸಮಯ ಕೋರಿದ್ದರು.
ಶುಕ್ರವಾರ ಮಧ್ಯಾಹ್ನ ಪತ್ರಕರ್ತರೊಂದಿಗೆ ಮಾತನಾಡಿರುವ ವಕೀಲೆ, ‘ಸದ್ಯಕ್ಕೆ ಸಿನಿಮಾ ಬಿಡುಗಡೆಯಾಗಿಲ್ಲ. ಟಿಕೆಟ್ ಹಣವನ್ನು ಕೂಡ ವಾಪಾಸ್ ನೀಡಿರುವುದರಿಂದ ನಾವು ನ್ಯಾಯಂಗ ನಿಂದನೆ ಅಡಿಯಲ್ಲಿ ಪ್ರಕರಣ ದಾಖಲಿಸುವುದಿಲ್ಲ’ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಅವರಿದ್ದ ಏಕಪೀಠವು, ಸಿನಿಮಾ ಬಿಡುಗಡೆಗೆ 15 ದಿನ ತಡೆ ನೀಡಿತ್ತು.
ಸಿನಿಮಾದ ನಿರ್ಮಾಪಕ ವಿಪುಲ್ ಅಮೃತ್‌ಲಾಲ್ ಶಾ ಅವರು ಗುರುವಾರ ತಡರಾತ್ರಿ ಡಿವಿಜನ್ ಬೆಂಚ್ ಎದುರು ಮನವಿ ಮಾಡಿದ್ದರು. ನ್ಯಾ. ಸುಶ್ರುತ್ ಅರವಿಂದ ಧರ್ಮಾಧಿಕಾರಿ ಮತ್ತು ಪಿ.ವಿ ಬಾಲಕೃಷ್ಣನ್ ಅವರಿದ್ದ ಪೀಠವು ಆದೇಶವನ್ನು ಕಾಯ್ದಿರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.