ADVERTISEMENT

ತಮಿಳಿಗೆ ಕಾಲಿಟ್ಟ ಹೊಂಬಾಳೆ : ಕೀರ್ತಿ ಸುರೇಶ್ ಜೊತೆ ಹೊಸ ಚಿತ್ರ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2022, 9:03 IST
Last Updated 4 ಡಿಸೆಂಬರ್ 2022, 9:03 IST
   

‘ಕೆಜಿಎಫ್ –2’ ಮತ್ತು ‘ಕಾಂತಾರ’ದಂತಹ ಅತ್ಯಂತ ಯಶಸ್ವಿ ಚಿತ್ರ ನಿರ್ಮಾಣ ಮಾಡಿರುವ ಕನ್ನಡದ ಹೊಂಬಾಳೆ ಫಿಲಂಸ್‌ ಇದೀಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದೆ. ಮಹಾನಟಿ ಕೀರ್ತಿ ಸುರೇಶ್ ಅವರ ‘ರಘುತಥಾ’ಚಿತ್ರದ ಪೋಸ್ಟರ್‌ ಬಿಡುಗಡೆಗೊಂಡಿದ್ದು, ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲಂಸ್‌ ಈ ಚಿತ್ರ ನಿರ್ಮಿಸುತ್ತಿರುವುದು ಅಧಿಕೃತವಾಗಿದೆ.

ಪ್ರಭಾಸ್‌ ಹಾಗೂ ಪ್ರಶಾಂತ್ ನೀಲ್‌ ಜೋಡಿಯ ‘ಸಲಾರ್‌’ ಮೂಲಕ ತೆಲುಗು, ನಟ ಫಹಾದ್‌ ಫಾಸಿಲ್‌–ನಿರ್ದೇಶಕ ಪವನ್‌ ಕುಮಾರ್ ಜೋಡಿಯ ‘ಧೂಮಂ’ ಮೂಲಕ ಮಲಯಾಳಕ್ಕೆ ಕಾಲಿಟ್ಟಿರುವ ಹೊಂಬಾಳೆ ಇದೀಗ ತಮಿಳು ಚಿತ್ರರಂಗದಲ್ಲಿಯೂ ಸಕ್ರಿಯವಾಗಿರುವ ಕನ್ನಡದ ನಿರ್ಮಾಣ ಸಂಸ್ಥೆ ಎನಿಸಿಕೊಂಡಿದೆ.


ಈ ಹಿಂದೆ, ‘ದಿ ಫ್ಯಾಮಿಲಿ ಮ್ಯಾನ್’ ವೆಬ್ ಸೀರೀಸ್ ಜತೆಗೆ ಕೆಲವು ಚಿತ್ರಗಳಿಗೆ ಕಥೆ-ಚಿತ್ರಕಥೆ ರಚಿಸಿದ್ದ ಸುಮನ್ ಕುಮಾರ್ ಈ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ.

ADVERTISEMENT


‘ರಘುತಥಾ’ ಒಂದು ಮಹಿಳಾಪ್ರಧಾನ ಚಿತ್ರವಾಗಿದ್ದು, ಒಬ್ಬ ಯುವತಿಯ ಸುತ್ತ ಸುತ್ತುತ್ತದೆ. ಆಕೆ ತನ್ನ ನೆಲ ಮತ್ತು ಜನರ ಗುರುತನ್ನು ರಕ್ಷಿಸುವ ನಿಟ್ಟಿನಲ್ಲಿ ಏನೆಲ್ಲ ಸಾಹಸಗಳನ್ನು ಮಾಡುತ್ತಾಳೆ ಎಂಬುದು ಕಥೆ.


ಈ ಚಿತ್ರದ ಕುರಿತು ಮಾತನಾಡಿರುವ ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಗಂದೂರು, ‘ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ಸಮಾಜದ ವಿರುದ್ದ ಸವಾಲೆಸೆಯುವ ಒಬ್ಬ ಗಟ್ಟಿಗಿತ್ತಿ ಯುವತಿಯ ಸುತ್ತ ಸುತ್ತತ್ತದೆ. ತನ್ನ ಸಿದ್ಧಾಂತಗಳನ್ನು ಎತ್ತಿಹಿಡಿಯುವುದರ ಜತೆಗೆ, ಸಮಾಜದ ವಿರುದ್ಧ ಹೋರಾಡುತ್ತಲೇ, ಆಕೆ ಹೇಗೆ ಎಲ್ಲರಿಗೂ ಸ್ಫೂರ್ತಿಯಾಗುತ್ತಾಳೆ ಎಂಬುದು ಚಿತ್ರದ ಕಥೆ. ಇಂಥದ್ದೊಂದು ಕಥೆ ಮತ್ತು ಪಾತ್ರಕ್ಕೆ ಕೀರ್ತಿ ಸುರೇಶ್ ಅವರು ಅತ್ಯುತ್ತಮ ಆಯ್ಕೆಯಾಗಿದ್ದು, ಅವರೊಂದಿಗೆ ಕೆಲಸ ಮಾಡಲು ಹೊಂಬಾಳೆ ಫಿಲಂಸ್ ಹೆಮ್ಮೆ ಪಡುತ್ತದೆ’ ಎಂದು ಹೇಳಿದ್ದಾರೆ.


ಈ ಚಿತ್ರದಲ್ಲಿ ಕೀರ್ತಿ ಸುರೇಶ್ ಜತೆಗೆ ಎಂ.ಎಸ್. ಭಾಸ್ಕರ್, ದೇವದರ್ಶಿನಿ, ರವೀಂದ್ರ ವಿಜಯ್, ಆನಂದ್‌ಸಾಮಿ, ರಾಜೇಶ್ ಬಾಲಕೃಷ್ಣನ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಮಿನಿ ಯಜ್ನಮೂರ್ತಿ ಚಿತ್ರಕ್ಕೆ ಛಾಯಾಗ್ರಹಣ ಮಾಡುತ್ತಿದ್ದು, ಜೈ ಭೀಮ್ ಖ್ಯಾತಿಯ ಸೀನ್ ರೋಲ್ಡನ್ ಸಂಗೀತ ಸಂಯೋಜಿಸುತ್ತಿದ್ದಾರೆ.


‘ರಘುತಥಾ’ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದ್ದು, 2023ರ ಬೇಸಿಗೆ ರಜೆಯ ಸಂದರ್ಭದಲ್ಲಿ ಚಿತ್ರವು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.