
ಕಿಚ್ಚ ಸುದೀಪ್
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿ 30 ವರ್ಷಗಳನ್ನು ಪೂರೈಸಿದ್ದಾರೆ. ಇದೇ ಸಂದರ್ಭದಲ್ಲಿ ಈ ಮೂರು ದಶಕಗಳ ಯಶಸ್ಸಿನ ಪಯಣದಲ್ಲಿ ಭಾಗಿಯಾದ ಎಲ್ಲರಿಗೂ ಅವರು ಧನ್ಯವಾದ ತಿಳಿಸಿದ್ದಾರೆ. ಅಭಿಮಾನಿಗಳು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ಸಹ ಕಲಾವಿದರು, ಮಾಧ್ಯಮ ಮತ್ತು ತಮ್ಮ ಕುಟುಂಬಕ್ಕೆ ಪತ್ರವನ್ನು ಬರೆಯುವ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.
ಸುದೀಪ್ ಪೋಸ್ಟ್‌ನಲ್ಲಿ ಹೇಳಿದ್ದೇನು?
‘ಕನ್ನಡ ಚಿತ್ರರಂಗದಲ್ಲಿ 3 ದಶಕಗಳನ್ನು ಪೂರೈಸಿ ನಿಂತಿರುವ ಈ ಕ್ಷಣದಲ್ಲಿ ನನ್ನ ಹೃದಯ ತುಂಬಿ ಬಂದಿದೆ. ಅಂದು ಕನಸುಗಳು, ಅನುಮಾನಗಳು ಮತ್ತು ಅಪಾರ ಭರವಸೆ ಹೊತ್ತಿದ್ದ ಒಬ್ಬ ಹುಡುಗನಾಗಿದ್ದೆ. ಅಂದಿನ ಸ್ಥಿತಿಗೆ, ಇಂದು ಬೆಳೆದಿರುವ ರೀತಿ ಊಹಿಸಿದ್ದಕ್ಕಿಂತ ದೊಡ್ಡದಾಗಿದೆ.
ಅಭಿಮಾನಿಗಳು: ನನ್ನ ಶಕ್ತಿ, ನೀವೇ ನನ್ನ ಪ್ರೇರಣೆ. ನಾನು ಪ್ರತಿದಿನ ಕೆಲಸಕ್ಕೆ ಬರಲು ನೀವೇ ಕಾರಣ.
ನಿರ್ದೇಶಕರು ಮತ್ತು ಬರಹಗಾರರು: ನಿಮ್ಮ ಕಥೆಗಳಿಗೆ ನಾನು ಸರಿ ಹೊಂದುತ್ತೇನೆ ಎಂದು ನಂಬಿ ಜವಾಬ್ದಾರಿ ನೀಡಿದ್ದಕ್ಕಾಗಿ, ನನ್ನನ್ನು ಹುರಿದುಂಬಿಸಿದ್ದಕ್ಕಾಗಿ ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಮೇಲೆ ಭರವಸೆ ಇಟ್ಟಿದ್ದಕ್ಕಾಗಿ ಧನ್ಯವಾದಗಳು.
ನಿರ್ಮಾಪಕರು: ನಿಮ್ಮ ಧೈರ್ಯ ಮತ್ತು ನಂಬಿಕೆ ನನ್ನ ಕನಸುಗಳನ್ನು ನನಸಾಗಿಸಿವೆ.
ಸಹ ಕಲಾವಿದರು ಮತ್ತು ತಂತ್ರಜ್ಞರು: ಸಿನಿಮಾ ಎಂಬುದು ಸಂಘಟಿತ ಕೆಲಸ. ಲೈಟ್ ಬಾಯ್ ಇಂದ ಕ್ಯಾಮೆರಾಮನ್‌ಗಳವರೆಗೆ, ಕಲಾ ತಂಡದಿಂದ ಕಾಸ್ಟ್ಯೂಮ್ ಡಿಸೈನರ್ವರೆಗೆ, ಸ್ಪಾಟ್ ಬಾಯ್ಸ್‌ನಿಂದ ಹಿಡಿದು ಎಡಿಟರ್‌ಗಳವರೆಗೆ, ನಿಮ್ಮ ತೆರೆಯ ಹಿಂದಿನ ಶ್ರಮವೇ ಎಲ್ಲದಕ್ಕೂ ಕಾರಣ.
ಮಾಧ್ಯಮ: ನೀವು ನನ್ನ ಧ್ವನಿಯನ್ನು ಜನರಿಗೆ ತಲುಪಿಸಿದ್ದೀರಿ. ನನ್ನನ್ನು ಪ್ರಶ್ನಿಸಿದ್ದೀರಿ, ನನ್ನ ಯಶಸ್ಸನ್ನು ಸಂಭ್ರಮಿಸಿದ್ದೀರಿ ಮತ್ತು ನಾನು ಬೆಳೆಯಲು ಸಹಾಯ ಮಾಡಿದ್ದೀರಿ.
ಕನ್ನಡ ಚಿತ್ರರಂಗ: ನನಗೆ ಗುರುತು, ಹೆಮ್ಮೆ. ಚಿತ್ರರಂಗ ನನಗೆ ನೆಲೆ ನೀಡಿದೆ. ನಾನು ಸದಾ ಕನ್ನಡ ಚಿತ್ರವನ್ನು ನನ್ನ ಹೃದಯದಲ್ಲಿ ಹೊತ್ತು ನಡೆಯುತ್ತೇನೆ.
ನನ್ನ ಕುಟುಂಬ ಹಾಗೂ ಸ್ನೇಹಿತರು: ಈ ಎಲ್ಲಾ ಏರಿಳಿತಗಳ ನಡುವೆ ನನ್ನನ್ನು ಸಾಮಾನ್ಯ ಮನುಷ್ಯನನ್ನಾಗಿ ನೀವು ನೋಡಿದ್ದೀರಿ. ನಾನು ಹೇಗಿದ್ದೇನೋ ಹಾಗೆ ಸ್ವೀಕರಿಸಿದ್ದಕ್ಕೆ ಧನ್ಯವಾದ.
ಈ 30 ವರ್ಷಗಳು ನನಗೆ ಒಂದು ಪಾಠ ಕಲಿಸಿದ್ದರೆ ಅದು ‘ಮಾನವೀಯತೆ’. ಪ್ರತಿಯೊಂದು ಗೆಲುವೂ ನನಗೆ ಪ್ರಸಾದ. ನಾನು ಇನ್ನೂ ಕಠಿಣವಾಗಿ ಶ್ರಮಿಸುತ್ತೇನೆ. ಕಲೆಯನ್ನು ಗೌರವಿಸುತ್ತೇನೆ ಮತ್ತು ಸಿನಿಮಾ ಮಾಡುವುದಾಗಿ ಭರವಸೆ ನೀಡುತ್ತೇನೆ. ಕೈ ಮುಗಿದು ಕೃತಜ್ಞತೆಯಿಂದ ನಿಮ್ಮೆಲ್ಲರಿಗೂ ಧನ್ಯವಾದಗಳು’ ಎಂದು ಸುದೀಪ್ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.