
ಚಕ್ರವರ್ತಿ ಚಂದ್ರಚೂಡ್, ಕಿಚ್ಚ ಸುದೀಪ್
ಚಿತ್ರ: ಇನ್‌ಸ್ಟಾಗ್ರಾಂ
ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ನಡೆದ ಮಾರ್ಕ್ ಉತ್ಸವದಲ್ಲಿ ಕಿಚ್ಚ ಸುದೀಪ್ ‘ಯುದ್ಧಕ್ಕೆ ಒಂದು ಪಡೆ ಸಿದ್ಧವಾಗಿದೆ’ ಎಂಬ ಹೇಳಿಕೆ ನೀಡಿದ್ದರು. ಅದೊಂದು ಹೇಳಿಕೆ ಕನ್ನಡ ಚಿತ್ರರಂಗದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದೀಗ ನಟ ಸುದೀಪ್ ಆಪ್ತ ಚಕ್ರವರ್ತಿ ಚಂದ್ರಚೂಡ್ ಅವರು ಸ್ಪಷ್ಟನೆ ನೀಡಿದ್ದಾರೆ.
ಏಕಾಏಕಿ ಸಾಮಾಜಿಕ ಮಾಧ್ಯಮ ಫೇಸ್‌ಬುಕ್‌ನಲ್ಲಿ ಲೈವ್ ಬಂದ ಚಕ್ರವರ್ತಿ ಚಂದ್ರಚೂಡ್ ಅವರು, ಸುದೀಪ್ ಮಾತಿನ ಹಿಂದಿದ್ದ ಅಸಲಿ ಅರ್ಥವನ್ನು ತಿಳಿಸಿದ್ದಾರೆ. ‘ಪೈರಸಿ ಮಾಡುವವರ ವಿರುದ್ಧದ ಹೋರಾಟವೇ ಹೊರತು ಯಾವುದೇ ನಟರ ಅಥವಾ ಅಭಿಮಾನಿಗಳ ವಿರುದ್ಧ ಅಲ್ಲ, ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ’ ಎಂದಿದ್ದಾರೆ.
ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಿಷ್ಟು
‘ಭಾರತದ ಸಿನಿಮಾಗಳು ರಿಲೀಸ್ ಆದಾಗ ಅದನ್ನು ನಾಶ ಮಾಡಲು ಸಾಕಷ್ಟು ಪ್ರಯತ್ನ ನಡೆಯುತ್ತವೆ. ಒಂದು ಪಡೆ ಸಿನಿಮಾ ಭಯೋತ್ಪಾದಕರ ರೀತಿ ವರ್ತಿಸುತ್ತವೆ. ಸುದೀಪ್ ಸೇರಿದಂತೆ ಎಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ. ಸುದೀಪ್ ಅವರು ಹೇಳಿದ್ದು ಇದನ್ನೇ. ದುಡ್ಡು ಕೊಟ್ಟು ಟಿಕೆಟ್ ಖರೀದಿ ಮಾಡಿದ ಎಲ್ಲರೂ ಸಿನಿಮಾ ಅಥವಾ ಆಕೃತಿಯನ್ನು ವಿಮರ್ಶೆ ಮಾಡುವ ಹಕ್ಕಿರುತ್ತದೆ. ಆದರೆ, ವಿಮರ್ಶೆ ಹೆಸರಲ್ಲಿ ಸಿನಿಮಾನ ಸಾಯಿಸಲಾಗುತ್ತಿದೆ. ಇದಕ್ಕೆ ಒಂದು ಪಡೆ ಇದೆ. ಸಾಮಾಜಿಕ ಮಾಧ್ಯಮದಲ್ಲಿ ಸಿನಿಮಾ ಹರಿಬಿಡಲು ಒಂದು ಪಡೆ ಇದೆ. ಈ ರೀತಿಯ ಪಡೆಗಳ ವಿರುದ್ಧ ಯುದ್ಧ ಮಾಡುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಇದು ತಪ್ಪಾ? ಕುಂಬಳಕಾಯಿ ಕಳ್ಳ ಎಂದರೆ ಹೆಗಲುಮುಟ್ಟಿಕೊಳ್ಳಬಾರದು’ ಎಂದಿದ್ದಾರೆ.
‘ಪೈರಸಿ ಎಂಬುದು ‘45’, ಮಾರ್ಕ್ಗೆ ಇರುವ ಸವಾಲು. ಡೆವಿಲ್ ಸಿನಿಮಾವನ್ನೂ ಈ ಸಮಸ್ಯೆ ಕಾಡಿತ್ತು. ಸುದೀಪ್ ಅವರು ಎಲ್ಲರಿಗೂ ಒಳ್ಳೆಯದನ್ನೇ ಬಯಸಿದ್ದಾರೆ’ ಎನ್ನುವ ಮೂಲಕ ಸುದೀಪ್ ಮಾತಿಗೆ ಬೇರೆ ಅರ್ಥ ನೀಡುವುದು ಬೇಡ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.