
ಸುದೀಪ್ ನಟನೆಯ ‘ಮಾರ್ಕ್’ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ಚಿತ್ರ ಡಿ.25ಕ್ಕೆ ತೆರೆಗೆ ಬರಲಿದೆ. ಆರ್. ಚಂದ್ರು, ಎ.ಪಿ. ಅರ್ಜುನ್, ರಾಕ್‌ಲೈನ್ ವೆಂಕಟೇಶ್, ಜೆಕೆ, ಜೋಗಿ ಪ್ರೇಮ್, ಚಂದನ್, ಅನೂಪ್ ಭಂಡಾರಿ ಮುಂತಾದವರು ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಂಡಕ್ಕೆ ಶುಭ ಹಾರೈಸಿದರು.
‘ಮ್ಯಾಕ್ಸ್’ ಸಿನಿಮಾದ ರೀತಿಯದ್ದೇ ಆ್ಯಕ್ಷನ್ ಕಥೆ ಈ ಚಿತ್ರದಲ್ಲಿಯೂ ಇದೆ. ಮಕ್ಕಳ ಅಪಹರಣದ ಕಥೆಯನ್ನು ಈ ಸಿನಿಮಾ ಹೊಂದಿದೆ. ಮಕ್ಕಳನ್ನು ಅಪಹರಿಸುವ ಖಳರಿಗೆ ಮಾರ್ಕ್ ಹೇಗೆ ಪಾಠ ಕಲಿಸುತ್ತಾನೆ ಎಂಬುದೇ ಒಟ್ಟಾರೆ ಚಿತ್ರಕಥೆ ಎಂಬುದು ಟ್ರೇಲರ್‌ನಿಂದ ಮೇಲ್ನೋಟಕ್ಕೆ ಗೊತ್ತಾಗುತ್ತಿದೆ.
‘ಇವತ್ತಿನ ಪರಿಸ್ಥಿತಿಯಲ್ಲಿ ಸಿನಿಮಾವನ್ನು ಅಚ್ಚುಕಟ್ಟಾಗಿ, ಅಂದುಕೊಂಡ ಸಮಯದಲ್ಲಿ ಮುಗಿಸುವುದು ಬಹಳ ಮುಖ್ಯ. ನನ್ನ ಸಿನಿಮಾದ ತಾಂತ್ರಿಕ ತಂಡದ ಬೆಂಬಲದಿಂದ ಇದು ಸಾಧ್ಯವಾಗಿದೆ. 107 ದಿನಗಳ ಕಾಲ ಚಿತ್ರೀಕರಣ ಮಾಡಿ, ಮೂರು ತಿಂಗಳಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿದ್ದೇವೆ. ಹಿಂದಿನ ಪಯಣದಿಂದಲೇ ಇವತ್ತಿನ ಕೆಲಸ ಸುಲಭವಾಗಿದೆ. ಸ್ಟಾರ್‌ಗಳ ಎರಡು ಸಿನಿಮಾ ಒಟ್ಟಿಗೆ ಬರುತ್ತಿವೆ. ‘ಡೆವಿಲ್’ ಮೂರ ವಾರಗಳ ಮೊದಲು ಬರುತ್ತಿದೆ. ದೀಪಾವಳಿಗೆ ಎಲ್ಲರ ಮನೆಯಲ್ಲೂ ಹಬ್ಬ ನಡೆಯುತ್ತದೆ. ಆದರೂ ಎಲ್ಲರಿಗೂ ತರಕಾರಿ ದೊರೆಯುತ್ತದೆ. ಅದೇ ರೀತಿ ಡಿಸೆಂಬರ್‌ನಲ್ಲಿ ಸ್ಟಾರ್‌ಗಳ ಸಿನಿಮಾ ಬರುತ್ತವೆ. ಎಲ್ಲರಿಗೂ ಚಿತ್ರಮಂದಿರಗಳು ಸಿಗುತ್ತವೆ. ಪೈಪೋಟಿ ಏನಿಲ್ಲ, ಈ ರೀತಿ ಚಿತ್ರ ಬಿಡುಗಡೆಯಿಂದ ಪ್ರದರ್ಶಕರು ಸಂತಸಗೊಂಡಿದ್ದಾರೆ’ ಎಂದರು ಸುದೀಪ್.
‘ಪ್ರತಿ ಸಲ ಸಿನಿಮಾ ಮಾಡಿದಾಗ ವಿಭಿನ್ನವಾಗಿರುವುದನ್ನು ಹೇಳಬೇಕು, ಯಾರೂ ನೋಡದ ಪ್ರಪಂಚವನ್ನು ತೋರಿಸಬೇಕು, ಯಾರೂ ಹೇಳದ ಕಥೆಯನ್ನು ಹೇಳಬೇಕು ಎಂದರೆ, ಯಾರಿಗೂ ಸಿನಿಮಾ ಮಾಡಲು ಸಾಧ್ಯವಿಲ್ಲ. ಅಂತಿಮವಾಗಿ ಬೇಕಿರುವುದು ಮನರಂಜನೆ. ಅದೇ ರೀತಿ ಈ ಸಿನಿಮಾ ಕೂಡ. ಆದರೆ ಹಿಂದೆ ಮಾಡಿರದ ಪಾತ್ರ ಇದರಲ್ಲಿದೆ ಎನ್ನಬಹುದು. ‘ಮ್ಯಾಕ್ಸ್’ ಸಿನಿಮಾ ಸ್ಫೂರ್ತಿಯಿಂದ ‘ಮಾರ್ಕ್’ ಹುಟ್ಟಿದ್ದು’ ಎಂದು ಸುದೀಪ್ ತಿಳಿಸಿದರು.
‘ಸತ್ಯಜ್ಯೋತಿ ಫಿಲ್ಮ್ಸ್’ ಮತ್ತು ‘ಕಿಚ್ಚ ಕ್ರಿಯೇಷನ್ಸ್’ ಮೂಲಕ ‘ಮಾರ್ಕ್’ ಸಿನಿಮಾ ನಿರ್ಮಾಣಗೊಂಡಿದೆ. ಇದೇ ತಂಡದಿಂದ ‘ಮ್ಯಾಕ್ಸ್’ ಸಿನಿಮಾ ಕೂಡ 2024ರ ಡಿಸೆಂಬರ್ 25ರಂದು ಬಿಡುಗಡೆಯಾಗಿ ಯಶಸ್ವಿಯಾಗಿತ್ತು.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ, ಶೇಖರ್ ಚಂದ್ರ ಅವರ ಛಾಯಾಚಿತ್ರಗ್ರಹಣವಿದೆ. ತಮಿಳು ಚಿತ್ರರಂಗದ ಖ್ಯಾತ ನಟ ಯೋಗಿಬಾಬು, ಮಲಯಾಳದ ಶೈನ್ ಟಾಮ್ ಚಾಕೋ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.