ADVERTISEMENT

ಪ್ರಜಾವಾಣಿ ಸಿನಿ ಸಮ್ಮಾನ | ‘ಹುಲಿ ಕಿಶೋರ್‌’ಗೆ ಒಲಿದ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 8 ಜೂನ್ 2023, 11:16 IST
Last Updated 8 ಜೂನ್ 2023, 11:16 IST
ಕಿಶೋರ್‌
ಕಿಶೋರ್‌   

ಕನ್ನಡ ಚಿತ್ರರಂಗದಲ್ಲಿ ‘ಹುಲಿ ಕಿಶೋರ್‌’ ಎಂದೇ ಜನಪ್ರಿಯರಾದ ಕಿಶೋರ್‌ ಕುಮಾರ್‌ಗೆ ‘ಕಾಂತಾರ’ ಚಿತ್ರದಲ್ಲಿನ ಅರಣ್ಯಾಧಿಕಾರಿ ಪಾತ್ರಕ್ಕಾಗಿ ‘ಪ್ರಜಾವಾಣಿ ಸಿನಿ ಸಮ್ಮಾನ’ದಲ್ಲಿ ‘ಅತ್ಯುತ್ತಮ ಪೋಷಕ ನಟ’ ಪ್ರಶಸ್ತಿ ಲಭಿಸಿದೆ. 

‘ಕಾಂತಾರ’ ಚಿತ್ರದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಮುರುಳಿಯಾಗಿ ಕಿಶೋರ್‌ ಅಭಿನಯಿಸಿದ್ದು, ಪ್ರೇಕ್ಷಕನ ಕಣ್ಣಿಗದು ಋಣಾತ್ಮಕ ಪಾತ್ರ. ಕಥೆಯಲ್ಲಿ ಅರಣ್ಯ ಸಂರಕ್ಷಿಸುವ ಅಧಿಕಾರಿಯಾಗಿ ಕಾನೂನು ಪಾಲನೆಯಲ್ಲಿ ತೊಡಗಿಸಿಕೊಂಡರೂ, ಕಾಡಿನಲ್ಲಿ ವಾಸವಿರುವ ಬುಡಕಟ್ಟು ಜನರನ್ನು ಎದುರು ಹಾಕಿಕೊಂಡು ನೋಡುಗನ ಪಾಲಿಗೆ ವೈರಿಯಂತೆ ಕಾಣುತ್ತಾರೆ. ಭೂತದಕೋಲಕ್ಕೆ ಅಡ್ಡಿಪಡಿಸುವ ಮೂಲಕ ನಾಯಕ ಶಿವನನ್ನು ಎದುರು ಹಾಕಿಕೊಳ್ಳುವ ಮುರುಳಿ, ಚಿತ್ರದುದ್ದಕ್ಕೂ ನಾಯಕನ ಎದುರು ಪ್ರತಿನಾಐಕನಂತೆ ಕಾಣುತ್ತಾರೆ. ದೇವರನ್ನೇ ನಂಬದ ಅಧಿಕಾರಿ ಚಿತ್ರದ ಕೊನೆಯಲ್ಲಿ ದೈವಕ್ಕೆ ಶರಣಾಗುವುದನ್ನು ಪ್ರೇಕ್ಷಕರು ಮೆಚ್ಚಿಕೊಂಡರು.

ಬೆಂಗಳೂರು ನ್ಯಾಷನಲ್‌ ಕಾಲೇಜು ವಿದ್ಯಾರ್ಥಿಯಾಗಿದ್ದ ಕಿಶೋರ್‌ ಕುಮಾರ್‌ 2004ರಲ್ಲಿ ‘ಕಂಠಿ’ ಚಿತ್ರದ ಮೂಲಕ ಸಿನಿಮಾ ಜಗತ್ತು ಪ್ರವೇಶಿಸಿದರು. ರಂಗಭೂಮಿಯಲ್ಲಿಯೂ ಆಸಕ್ತಿ ಹೊಂದಿದ್ದ ಇವರು ‘ಸಾಮ್ರಾಟ ಅಶೋಕ’ ಮತ್ತು ‘ತೆರೆಗಳು’ ನಾಟಕದಲ್ಲಿ ಅಭಿನಯಿಸಿ ಗಮನ ಸೆಳೆದವರು. ಬೆಂಗಳೂರಿನ ಕಾಲೇಜೊಂದರಲ್ಲಿ ಅಧ್ಯಾಪಕರಾಗಿ ಎರಡು ವರ್ಷ ಸೇವೆ ಸಲ್ಲಿಸಿ, ಬಳಿಕ ಫ್ಯಾಷನ್‌ ಡಿಸೈನರ್‌ ಆಗಿಯೂ ಒಂದಷ್ಟು ದಿನ ಕೆಲಸ ಮಾಡಿದರು.

ADVERTISEMENT

ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ 80ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ‘ದುನಿಯಾ’, ‘ಜಟ್ಟ’, ‘ಅಟ್ಟಹಾಸ’, ‘ಹುಲಿ’, ‘ಉಳಿದವರು ಕಂಡಂತೆ’, ತಮಿಳಿನ ‘ಪೊಲ್ಲಾದವನ್‌’, ‘ಹರಿದಾಸ’, ‘ತೂಂಗಾವನಂ’ ಮೊದಲಾದವು ಕಿಶೋರ್‌ಗೆ ಖ್ಯಾತಿ ತಂದುಕೊಟ್ಟ ಇತ್ತೀಚಿನ ಚಿತ್ರಗಳು.

‘ಪ್ರಶಸ್ತಿ ಪಡೆಯುತ್ತಿರುವುದಕ್ಕೆ ತುಂಬ ಹೆಮ್ಮೆಯಿದೆ. ಪತ್ರಿಕೋದ್ಯಮದ ಭಾಗವಾಗಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿದ ಪತ್ರಿಕೆ ಪ್ರಜಾವಾಣಿ. ಅದೇ ಮೌಲ್ಯಗಳನ್ನು ಸಿನಿಮಾಗೂ ಕೂಡ ತೆಗೆದುಕೊಂಡು ಬರುತ್ತದೆ ಎಂಬ ನಿರೀಕ್ಷೆಯಿದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಕಿಶೋರ್‌ ಹೇಳಿದರು.

ಅತ್ಯುತ್ತಮ ಪೋಷಕ ನಟ: ‌ಕಿಶೋರ್‌ (ಚಿತ್ರ: ಕಾಂತಾರ)

ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದವರು
* ದತ್ತಣ್ಣ (ಚಿತ್ರ: ನಾನು ಅದು ಮತ್ತು ಸರೋಜ)
* ಅಚ್ಯುತ್‌ ಕುಮಾರ್‌ (ಚಿತ್ರ: ಕಾಂತಾರ)
* ಅನಂತನಾಗ್‌ (ಚಿತ್ರ: ಗಾಳಿಪಟ–2)
* ಕಿಶೋರ್‌ ಕುಮಾರ್‌ (ಚಿತ್ರ: ಕಾಂತಾರ)
* ಗೋಪಾಲಕೃಷ್ಣ ದೇಶಪಾಂಡೆ (ಚಿತ್ರ: ಶುಭಮಂಗಳ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.