ADVERTISEMENT

ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಅ‍ಪ್ಪು ಭಾವಚಿತ್ರ: KMF ನಿರ್ಧಾರ ನಿಜವೇ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜನವರಿ 2022, 11:26 IST
Last Updated 2 ಜನವರಿ 2022, 11:26 IST
ಪುನೀತ್ ರಾಜ್‌ಕುಮಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಪುನೀತ್ ಭಾವಚಿತ್ರ ಇರುವ ಪೋಟೊ
ಪುನೀತ್ ರಾಜ್‌ಕುಮಾರ್ ಹಾಗೂ ಸಾಮಾಜಿಕ ಜಾಲತಾಣದಲ್ಲಿ ನಂದಿನಿ ಹಾಲಿನ ಪ್ಯಾಕೆಟ್‌ ಮೇಲೆ ಪುನೀತ್ ಭಾವಚಿತ್ರ ಇರುವ ಪೋಟೊ   

ಬೆಂಗಳೂರು: 'ಇತ್ತೀಚೆಗೆ ನಿಧನರಾದ ಖ್ಯಾತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್‌) ವಿಶೇಷ ಗೌರವ ಸಲ್ಲಿಸಿದೆ.ತನ್ನ ಜನಪ್ರಿಯ ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರವನ್ನು ಕೆಎಂಎಫ್ ಮುದ್ರಿಸಿದೆ'ಎಂಬ ಫೋಟೊಗಳು ಕಳೆದ ಎರಡು ದಿನದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆದರೆ, ಪುನೀತ್ ಅವರ ಭಾವಚಿತ್ರವನ್ನು ಹಾಲಿನ ಪ್ಯಾಕೆಟ್‌ಗಳ ಮೇಲೆ ಮುದ್ರಿಸುವ ನಿರ್ಧಾರವನ್ನು ನಾವು ತೆಗೆದುಕೊಂಡಿಲ್ಲ ಎಂದು ಕೆಎಂಎಫ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಭಾವಚಿತ್ರವಿರುವ ನಂದಿನಿ ಹಾಲಿನ ಪ್ಯಾಕೆಟ್‌ಗಳ ಬಗ್ಗೆ ನಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

ADVERTISEMENT

ರೈತರಿಗೆ ಅನುಕೂಲ ಆಗಲಿ ಎಂಬ ನಿಟ್ಟಿನಲ್ಲಿ ಕೆಎಂಎಫ್‌ನ ನಂದಿನಿ ಉತ್ಪನ್ನಗಳಿಗೆಪುನೀತ್ ಅವರು ಸುಮಾರು 10 ವರ್ಷಗಳಿಂದ ಪ್ರಚಾರ ರಾಯಭಾರಿಯಾಗಿದ್ದರು. ಇದಕ್ಕಾಗಿ ಅವರು ಕೆಎಂಎಫ್‌ನಿಂದ ಯಾವುದೇ ಸಂಭಾವನೆಯನ್ನು ಪಡೆಯುತ್ತಿರಲಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ನಂದಿನಿ ಹಾಲಿನ ಪ್ಯಾಕೆಟ್‌ಗಳ ಮೇಲೆ ಪುನೀತ್ ಅವರ ಚಿತ್ರ ಇರುವ ಫೋಟೊಹಂಚಿಕೊಂಡು ಅಭಿಮಾನಿಗಳು ಕೆಎಂಎಫ್‌ಗೆ ಧನ್ಯವಾದ ಸಲ್ಲಿಸಿದ್ದಾರೆ.

ಪುನೀತ್ ಅವರು ನಿಧನರಾಗಿ 2 ತಿಂಗಳು ಕಳೆದಿವೆ. ಅವರ ಅಭಿಮಾನಿಗಳು ಪುನೀತ್ ಸ್ಮರಣೆಗಾಗಿ ಇನ್ನೂ ಕೂಡ ಅಲ್ಲಲ್ಲಿ ವಿವಿಧ ಜನಪರ ಕಾರ್ಯಕ್ರಮಗಳನ್ನು ಮಾಡಿ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.