ADVERTISEMENT

ಜುಲೈ 7ಕ್ಕೆ ‘ಮುನಿರತ್ನ ಕುರುಕ್ಷೇತ್ರ’ದ ಆಡಿಯೊ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 11:11 IST
Last Updated 28 ಜೂನ್ 2019, 11:11 IST
ಕುರುಕ್ಷೇತ್ರದಲ್ಲಿ ರವಿಚಂದ್ರನ್, ಅರ್ಜುನ್ ಸರ್ಜಾ, ದರ್ಶನ್‌, ನಿಖಿಲ್‌ ಹಾಗೂ ಅಂಬರೀಷ್‌
ಕುರುಕ್ಷೇತ್ರದಲ್ಲಿ ರವಿಚಂದ್ರನ್, ಅರ್ಜುನ್ ಸರ್ಜಾ, ದರ್ಶನ್‌, ನಿಖಿಲ್‌ ಹಾಗೂ ಅಂಬರೀಷ್‌   

‘ಮುನಿರತ್ನ ಕುರುಕ್ಷೇತ್ರ’ ನಟ ದರ್ಶನ್‌ ನಟನೆಯ 50ನೇ ಚಿತ್ರ. ಇದರಲ್ಲಿ ಅವರದು ದುರ್ಯೋಧನನ ಪಾತ್ರ. 2D ಮತ್ತು 3D ರೂಪದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಆಗಸ್ಟ್‌ 9ರಂದು ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಮೊದಲ ಬಾರಿಗೆ ಕುರುಕ್ಷೇತ್ರ ದೃಶ್ಯರೂಪ ತಳೆಯುತ್ತಿರುವುದರಿಂದ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿರುವುದು ಗುಟ್ಟೇನಲ್ಲ.

ಅಂದಹಾಗೆ ಜುಲೈ 7ರಂದು ಚಿತ್ರದ ಆಡಿಯೊ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳ ಭಾಷೆಯಲ್ಲಿ ಹಾಡುಗಳು ಬಿಡುಗಡೆಯಾಗಲಿವೆ. ಅದ್ದೂರಿ ಕಾರ್ಯಕ್ರಮಕ್ಕೆ ತಯಾರಿ ನಡೆದಿದ್ದು ಅಂದು ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ.

ಕಳೆದ ವರ್ಷವೇ ಈ ಚಿತ್ರ ತೆರೆ ಕಾಣಬೇಕಿತ್ತು. ಆದರೆ, ಗ್ರಾಫಿಕ್ಸ್‌ಗೆ ಹೆಚ್ಚು ಸಮಯ ಬೇಡಿದ್ದರಿಂದ ಬಿಡುಗಡೆಗೆ ತಡವಾಗಿದೆ. ವರಮಹಾಲಕ್ಷ್ಮಿ ಹಬ್ಬದಂದು ಜನರ ಮುಂದೆ ಬರುವುದು ದಿಟ. ಚಿತ್ರದ ಕಾಲಾವಧಿ 2 ಗಂಟೆ 55 ನಿಮಿಷ.

ADVERTISEMENT

ಈ ಸಿನಿಮಾಕ್ಕೆ ಜಯನ್ ವಿನ್ಸೆಂಟ್ ಅವರ ಛಾಯಾಗ್ರಹಣವಿದೆ. ಸಂಗೀತ ಸಂಯೋಜಿಸಿರುವುದು ವಿ.‌ ಹರಿಕೃಷ್ಣ.

ನಟ ಅಂಬರೀಷ್‌ ಭೀಷ್ಮನ ಪಾತ್ರದಲ್ಲಿ ನಟಿಸಿದ್ದಾರೆ. ಅವರು ನಿಧನರಾಗುವುದಕ್ಕೂ ಮೊದಲೇ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಉಳಿದಂತೆ ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಕೃಷ್ಣ), ಶಶಿಕುಮಾರ್ (ಧರ್ಮರಾಯ), ಡ್ಯಾನಿಶ್ ಅಖ್ತರ್ (ಭೀಮ), ಸೋನು ಸೂದ್ (ಅರ್ಜುನ), ಯಶಸ್ ಸೂರ್ಯ (ನಕುಲ), ಚಂದನ್ (ಸಹದೇವ), ನಿಖಿಲ್ ಕುಮಾರಸ್ವಾಮಿ (ಅಭಿಮನ್ಯು), ರವಿಶಂಕರ್ (ಶಕುನಿ), ಭಾರತಿ (ಕುಂತಿ), ಸ್ನೇಹಾ (ದ್ರೌಪದಿ), ರಾಕ್‌ಲೈನ್ ವೆಂಕಟೇಶ್ (ಶಲ್ಯ), ರಮೇಶ್ ಭಟ್ (ವಿದುರ), ಶ್ರೀನಿವಾಸ ಮೂರ್ತಿ (ದ್ರೋಣಾಚಾರ್ಯ), ಶ್ರೀನಾಥ್ (ಧೃತರಾಷ್ಟ್ರ), ರವಿಚೇತನ್‌ (ದುಶ್ಯಾಸನ), ಅವಿನಾಶ್ (ಗಂಧರ್ವರಾಜ), ಪವಿತ್ರಾ ಲೋಕೇಶ್ (ಸುಭದ್ರಾ) ಹರಿಪ್ರಿಯಾ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.