ADVERTISEMENT

ಚುನಾವಣೆ ಎಫೆಕ್ಟ್‌: ಯುಗಾದಿಗೆ ಕುರುಕ್ಷೇತ್ರ ಬಿಡುಗಡೆ ಅನುಮಾನ?

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2019, 11:49 IST
Last Updated 4 ಮಾರ್ಚ್ 2019, 11:49 IST
ದರ್ಶನ್‌
ದರ್ಶನ್‌   

ಕನ್ನಡ ಚಿತ್ರರಂಗದ ದೊಡ್ಡ ತಾರಾಬಳಗವೇ ಇರುವ ‘ಮುನಿರತ್ನ ಕುರುಕ್ಷೇತ್ರ’ ಚಿತ್ರದ ಬಿಡುಗಡೆಯ ಮೇಲೆ ಲೋಕಸಭಾ ಚುನಾವಣೆಯ ಕಾರ್ಮೋಡ ಕವಿದಿದೆ.ಏಪ್ರಿಲ್‌ 5ರಂದು ಸಿನಿಮಾ ಬಿಡುಗಡೆಗೆ ಮುಹೂರ್ತ ನಿಗದಿಯಾಗಿದೆ. ಆದರೆ, ಚುನಾವಣೆ ಘೋಷಣೆಯಾದರೆ ಬಿಡುಗಡೆಯ ದಿನಾಂಕ ಮತ್ತೆ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಇದಕ್ಕೆ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಪುತ್ರ ನಟ ನಿಖಿಲ್ ಕುಮಾರ್‌ ಅವರು ಚುನಾವಣಾ ಅಖಾಡಕ್ಕೆ ಧುಮುಕಲು ಸಜ್ಜಾಗಿರುವುದೇ ಮೂಲ ಕಾರಣ ಎನ್ನಲಾಗಿದೆ.ಚಿತ್ರದಲ್ಲಿ ಅವರದು ಅಭಿಮನ್ಯು ಪಾತ್ರ.

ನಿಖಿಲ್ ಕುಮಾರ್‌ ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ನ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ. ಚುನಾವಣೆಗೆ ದಿನಾಂಕ ಘೋಷಣೆಗಾಗಿ ದಿನಗಣನೆ ಆರಂಭವಾಗಿದೆ. ಏಪ್ರಿಲ್‌ ಮೊದಲ ವಾರ ಚಿತ್ರ ಬಿಡುಗಡೆಯಾಗಲಿದೆ. ಆ ವೇಳೆಗೆ ಚುನಾವಣೆ ಘೋಷಣೆಯಾದರೆ ನೀತಿಸಂಹಿತೆ ಜಾರಿಯಾಗಲಿದೆ. ನಿಖಿಲ್‌ ಕುಮಾರ್‌ ಈ ಚಿತ್ರದಲ್ಲಿ ನಟಿಸಿರುವುದರಿಂದ ಸಿನಿಮಾ ಪ್ರದರ್ಶನಕ್ಕೆ ಚುನಾವಣಾ ಆಯೋಗ ತಡೆ ನೀಡಲಿದೆ ಎನ್ನುವುದು ಚಿತ್ರತಂಡದ ಆತಂಕ.

‘ಚಾಲೆಂಜಿಂಗ್ ಸ್ಟಾರ್’ ದರ್ಶನ್‌ ದುರ್ಯೋಧನನಾಗಿ ನಟಿಸಿರುವ ಈ ಚಿತ್ರಕ್ಕೆ ಶಾಸಕ ಮುನಿರತ್ನ ಆರ್ಥಿಕ ಇಂಧನ ಒದಗಿಸಿದ್ದಾರೆ. ಕಳೆದ ವರ್ಷವೇ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿತ್ತು.

ADVERTISEMENT

ಚಿತ್ರದ 2D ಆವೃತ್ತಿಗೆ ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಪ್ರಮಾಣಪತ್ರ ನೀಡಿದೆ. 3D ಆವೃತ್ತಿ ಕಾರ್ಯ ಇನ್ನೂ ನಡೆಯುತ್ತಿದೆ. ಏಕಕಾಲಕ್ಕೆ 2D ಮತ್ತು 3D ಆವೃತ್ತಿ ಬಿಡುಗಡೆಯಾಗಲಿದೆ.

ಈ ಚಿತ್ರ ತಮಿಳು, ತೆಲುಗು, ಮಲಯಾಳ ಭಾಷೆಗೂ ಡಬ್‌ ಆಗುತ್ತಿದೆ. ನಾಗಣ್ಣ ಈ ಸಿನಿಮಾ ನಿರ್ದೇಶಿಸಿದ್ದು, ಮುನಿರತ್ನ ಕಥೆ ಬರೆದಿದ್ದಾರೆ. ಜಿ.ಕೆ. ಭಾರವಿ ಸಂಭಾಷಣೆ ಬರೆದಿದ್ದಾರೆ. ಜಯನನ್‌ ವಿನ್ಸೆಂಟ್‌ ಅವರ ಛಾಯಾಗ್ರಹಣವಿದೆ. ವಿ. ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿ. ನಾಗೇಂದ್ರಪ್ರಸಾದ್‌ ಸಾಹಿತ್ಯ ನೀಡಿದ್ದಾರೆ. ‘ಬಾಹುಬಲಿ’ ಖ್ಯಾತಿಯ ಕಿಂಗ್‌ ಸಾಲೋಮನ್‌ ಅವರ ಸಾಹಸ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.