
ಲಾಲೋ ಸಿನಿಮಾದ ಪೋಸ್ಟರ್
ಚಿತ್ರ: ಎಕ್ಸ್
2025ರಲ್ಲಿ ಕಾಂತಾರ ಅಧ್ಯಾಯ–1, ಧುರಂಧರ್ ಸಿನಿಮಾಗಳು ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಗಳಿಕೆಯಲ್ಲೂ ದಾಖಲೆ ಬರೆದಿವೆ. ಈ ನಡುವೆ ಕೇವಲ ₹50 ಲಕ್ಷದಲ್ಲಿ ನಿರ್ಮಾಣವಾದ ಗುಜರಾತ್‌ನ ‘ಲಾಲೋ: ಕೃಷ್ಣ ಸದಾ ಸಹಾಯತೆ’ ಎನ್ನುವ ಸಿನಿಮಾವೊಂದು ಗಳಿಕೆಯಲ್ಲಿ ಬಿಗ್ ಬಜೆಟ್ ಸಿನಿಮಾಗಳಂತೆ ಗಳಿಕೆ ಕಂಡು 2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪಟ್ಟಿಗೆ ಸೇರಿದೆ.
ಅ.2ರಂದು ಕಾಂತಾರ ಅಧ್ಯಾಯ ಒಂದು ಬಿಡುಗಡೆಯಾಗಿತ್ತು. ಹೀಗಾಗಿ ಚಿತ್ರಮಂದಿರಗಳ ಕೊರತೆಯಿಂದ ಒಂದು ವಾರದ ಬಳಿಕ ಈ ಸಿನಿಮಾ ಥಿಯೇಟರ್‌ನಲ್ಲಿ ತೆರೆಕಂಡಿತ್ತು.
ಯಾವುದೇ ಅಬ್ಬರದ ಪ್ರಚಾರ ಇಲ್ಲದೆ, ದೊಡ್ಡ ಸ್ಟಾರ್‌ಗಳ ಸಿನಿಮಾವೂ ಅಲ್ಲದ ಲಾಲೋ ಸಿನಿಮಾ ತಣ್ಣಗೆ ಪ್ರದರ್ಶನಗೊಳ್ಳುತ್ತಿತ್ತು. ಆರಂಭದಲ್ಲಿ ಮೊದಲ ವಾರಾಂತ್ಯಕ್ಕೆ ₹33 ಲಕ್ಷ ಗಳಿಕೆ ಕಂಡಿತ್ತು. ಎರಡನೇ ವಾರವೂ ಅಷ್ಟಾಗಿ ಗಳಿಕೆ ಮಾಡದ ಕಾರಣ ಸಿನಿಮಾ ನಿರ್ಮಾಣಕ್ಕೆ ಬಳಸಿದ ಹಣವೂ ವಾಪಸ್ಸಾಗಲಿಲ್ಲ ಎನ್ನುವ ಹತಾಶೆಯಿಂದ ಚಿತ್ರಮಂದಿರಗಳಲ್ಲಿ ಪ್ರದರ್ಶನ ನಿಲ್ಲಿಸಲು ತಂಡ ಮುಂದಾಗಿತ್ತು.
ಆದರೆ, ಅಚ್ಚರಿ ಎಂಬಂತೆ ಮೂರನೇ ವಾರದಲ್ಲಿ ಚಿತ್ರಮಂದಿರಗಳಿಗೆ ಬರುವವರ ಸಂಖ್ಯೆಯಲ್ಲಿ ಏರಿಕೆ ಕಂಡಿತ್ತು. ಮೂರನೇ ವಾರಾಂತ್ಯಕ್ಕೆ ₹62 ಲಕ್ಷ ಗಳಿಕೆ ಮಾಡಿತ್ತು. ಹೀಗಾಗಿ ಚಿತ್ರತಂಡ ಪ್ರದರ್ಶನವನ್ನು ಮುಂದುವರಿಸಿತ್ತು. ನಾಲ್ಕನೇ ವಾರದ ಶನಿವಾರ ಒಂದೇ ದಿನ ₹1 ಕೋಟಿ ಗಳಿಕೆಯಾಗಿತ್ತು. ಹೀಗೆ ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ ಗುಜರಾತಿ ಭಾಷೆಯಲ್ಲಿರುವ ಚಿತ್ರದ ಗಳಿಕೆ ದುಪ್ಪಟ್ಟಾಗುತ್ತಲೇ ಇತ್ತು.
ಭಾರತದಲ್ಲಿ ಒಟ್ಟಾರೆ ₹113.08 ಕೋಟಿ ಗಳಿಸಿದೆ. ಇದರೊಂದಿಗೆ ಜಾಗತಿಕ ಮಟ್ಟದಲ್ಲಿ ₹7.5 ಕೋಟಿ ಗಳಿಸಿದೆ. ಹೀಗಾಗಿ ಒಟ್ಟಾರೆ ಚಿತ್ರದ ಗಳಿಕೆ ₹120.58 ಕೋಟಿ ಗಳಿಸಿದೆ
ಸಿನಿಮಾದಲ್ಲಿ ಅಂಥದ್ದೇನಿದೆ?
ಸ್ನೇಹಿತರಿಂದ ಪಡೆದ ಒಂದು ಕ್ಯಾಮರಾದಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ ಎಂದು ಸಿನಿಮಾ ನಿರ್ದೇಶಕ ಅಂಕಿತ್ ಸಖಿಯಾ ವರದಿಗಾರರಿಗೆ ಮಾಹಿತಿ ನೀಡುವ ವೇಳೆ ತಿಳಿಸಿದ್ದಾರೆ.
ಲಾಲೋ ಚಿತ್ರವು ರಿಕ್ಷಾ ಚಾಲಕನೊಬ್ಬ ತೋಟದ ಮನೆಯಲ್ಲಿ ಸಿಲುಕಿಕೊಂಡು, ಕೃಷ್ಣನ ದೈವಿಕ ದರ್ಶನಗಳನ್ನು ಅನುಭವಿಸುತ್ತಾ ತನ್ನ ಆಂತರಿಕ ಹೋರಾಟಗಳನ್ನು ಎದುರಿಸುವ ಕಥೆಯನ್ನು ಹೇಳುತ್ತದೆ. ಚಿತ್ರದ ಆಧ್ಯಾತ್ಮಿಕ ಮತ್ತು ಭಾವನಾತ್ಮಕ ಅಂಶ ವಿವಿಧ ಪ್ರದೇಶಗಳ ವೀಕ್ಷಕರನ್ನು ಆಕರ್ಷಿಸಿದೆ. ವೀಕ್ಷಕರ ಈ ಅನುಭವವೇ ಗಡಿಯನ್ನೂ ಮೀರಿ ಸಿನಿಮಾ ತಲುಪಲು ಸಾಧ್ಯವಾಯಿತು ಎಂದು ನಿರ್ದೇಶಕ ಅಂಕಿತ್ ಹೇಳಿರುವುದಾಗಿ ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.
ಈ ಸಿನಿಮಾ ಜ.9ರಂದು ಹಿಂದಿಯಲ್ಲೂ ಮರುಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಒಟಿಟಿಯಲ್ಲೂ ತೆರೆಕಾಣುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.