ಬೆಂಗಳೂರು: ಬೆಂಗಳೂರಿನಲ್ಲಿ ವಾಸಿಸುವ ಹುಡುಗಿಯರ ಬಗ್ಗೆ ಸಿನಿಮಾದಲ್ಲಿನ ಅವಹೇಳನಕಾರಿ ಸಂಭಾಷಣೆಯೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಜನತೆಯ ಕ್ಷಮೆಯನ್ನು ಮಲಯಾಳದ ‘ಲೋಕಾ–ಚಾಪ್ಟರ್ 1: ಚಂದ್ರ’ ಚಿತ್ರತಂಡ ಕೇಳಿದೆ. ಆ ಸಂಭಾಷಣೆಯನ್ನು ಶೀಘ್ರದಲ್ಲೇ ತೆಗೆಯುವುದಾಗಿ ತಂಡ ತಿಳಿಸಿದೆ.
ಈ ಸಿನಿಮಾವನ್ನು ಕರ್ನಾಟಕದಲ್ಲಿ ನಟ ರಾಜ್ ಬಿ.ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ವಿತರಣೆ ಮಾಡಿದೆ. ಡಾಮಿನಿಕ್ ಅರುಣ್ ನಿರ್ದೇಶನದ ಈ ಚಿತ್ರವನ್ನು ನಟ ದುಲ್ಕರ್ ಸಲ್ಮಾನ್ ಅವರ ವೇಫರರ್ ಫಿಲ್ಮ್ಸ್ ನಿರ್ಮಾಣ ಮಾಡಿದೆ. ಸಿನಿಮಾ ಬೆಂಗಳೂರು ಸೇರಿದಂತೆ ಕೇರಳದಲ್ಲಿ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ.
ವಿವಾದದ ಬೆನ್ನಲ್ಲೇ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ನಿರ್ಮಾಣ ಸಂಸ್ಥೆ, ‘ಸಿನಿಮಾದಲ್ಲಿನ ಸಂಭಾಷಣೆಯೊಂದು ಕರ್ನಾಟಕ ಜನತೆಯ ಭಾವನೆಗಳಿಗೆ ನೋವುಂಟು ಮಾಡಿದೆ. ಇದು ಉದ್ದೇಶಪೂರ್ವಕವಲ್ಲ. ಎಲ್ಲವುದಕ್ಕಿಂತ ಜನರೇ ಮುಖ್ಯ. ನಮ್ಮ ಕಣ್ತಪ್ಪಿನಿಂದಾದ ಈ ತಪ್ಪಿಗೆ ಕ್ಷಮೆಯಾಚಿಸುತ್ತೇವೆ. ಶೀಘ್ರದಲ್ಲೇ ಈ ಸಂಭಾಷಣೆಯನ್ನು ತೆಗೆಯುತ್ತೇವೆ. ನೋವುಂಟು ಮಾಡಿರುವುದಕ್ಕೆ ಕ್ಷಮೆ ಇರಲಿ. ನಮ್ಮ ಕ್ಷಮೆಯನ್ನು ಸ್ವೀಕರಿಸಿ’ ಎಂದು ಉಲ್ಲೇಖಿಸಿದೆ.
ಸಿನಿಮಾದಲ್ಲಿ ಉಲ್ಲೇಖಿಸಿರುವ ವಿಷಯಗಳ ಬಗ್ಗೆಯೂ ನಿರ್ದೇಶಕ ಮಂಸೋರೆ ಆಕ್ಷೇಪವ್ಯಕ್ತಪಡಿಸಿದ್ದಾರೆ. ‘ಕನ್ನಡದ ‘ಭೀಮ’, ಮಲಯಾಳದ ‘ಆಫೀಸರ್ ಆನ್ ಡ್ಯೂಟಿ’, ‘ಆವೇಶಂ’, ‘ಲೋಕಾ’ದಲ್ಲಿ ಬೆಂಗಳೂರನ್ನು ಡ್ರಗ್ಸ್ ಮತ್ತು ಕ್ರೈಂನ ರಾಜಧಾನಿ ಎಂಬಂತೆ ಬಿಂಬಿಸಲಾಗುತ್ತಿದೆ. ಹಿಂದೆಲ್ಲಾ ಬೆಂಗಳೂರನ್ನು ಸುಂದರವಾದ ನಗರ ಎಂದು ಬಿಂಬಿಸಲಾಗುತ್ತಿತ್ತು. ಇದೀಗ ಅನಿಯಂತ್ರಿತ ವಲಸೆಯಿಂದಾಗಿ ಈ ಸ್ಥಿತಿ ತಲುಪಿದೆ’ ಎಂದು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.