ADVERTISEMENT

ಯಶಸ್ಸು ಗಳಿಸುವ ನಿರೀಕ್ಷೆಯಲ್ಲಿದ್ದೇನೆ: ಲವ್‌ ಒಟಿಪಿ ನಾಯಕ ಅನೀಶ್ ತೇಜೇಶ್ವರ್

ವಿನಾಯಕ ಕೆ.ಎಸ್.
Published 14 ನವೆಂಬರ್ 2025, 2:57 IST
Last Updated 14 ನವೆಂಬರ್ 2025, 2:57 IST
   
ಅನೀಶ್ ತೇಜೇಶ್ವರ್‌ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ಲವ್‌ ಒಟಿಪಿ ಚಿತ್ರ ಇಂದು (ನ.14) ತೆರೆ ಕಾಣುತ್ತಿದೆ. ಚಿತ್ರದಲ್ಲಿನ ಪಾತ್ರ ಹಾಗೂ ತಮ್ಮ ಸಿನಿಪಯಣ ಕುರಿತು ಅವರು ಮಾತನಾಡಿದ್ದಾರೆ. 

ಚಿತ್ರದಲ್ಲಿನ ನಿಮ್ಮ ಪಾತ್ರ...

ಅಕ್ಷಯ್‌ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಕ್ರಿಕೆಟರ್‌ ಆಗಬೇಕೆಂಬ ಗುರಿ ಹೊಂದಿರುವ ಪಾತ್ರ. ಅಪ್ಪ ಎಂದರೆ ತೀರ ಭಯ. ಅಪ್ಪನ ಹೆಸರು ಕೇಳಿದರೆ ಮೂತ್ರ ಮಾಡಿಕೊಳ್ಳುವ ಸ್ವಭಾವದ ಹುಡುಗ. ಆದರೂ ಇಬ್ಬರು ಹುಡುಗಿಯರ ಹಿಂದೆ ಇರುತ್ತಾನೆ. ಅಪ್ಪನಿಗೆ ಲವ್ ಅಂದ್ರೆ ಆಗುವುದೇ ಇಲ್ಲ. ಮಗನಿಗೆ ಪ್ರೇಮದ ಹಂಬಲ. ಆಗ ಏನೆಲ್ಲ ಘಟನೆಗಳು ನಡೆಯುತ್ತವೆ ಎಂಬುದನ್ನು ಹಾಸ್ಯಮಯ ದಾಟಿಯಲ್ಲಿ ಹೇಳಿದ್ದೇನೆ. ರಾಮ್‌ಕಾಮ್‌ ಜಾನರ್‌ನ ಸಿನಿಮಾ.

ತ್ರಿಕೋನ ಪ್ರೇಮಕಥೆಯೆ?

ಹಾಸ್ಯಮಯ ಪ್ರೇಮಕಥೆ. ಆದರೆ ಇಬ್ಬರು ನಾಯಕಿಯರು ಓರ್ವ ನಾಯಕ ಎಂಬ ರೀತಿ ಹೇಳಿಲ್ಲ. ಆ ರೀತಿ ಕಥೆಯ ಸಿನಿಮಾ ಮಾಡಿದರೆ ಜನ ನೋಡುವುದಿಲ್ಲ, ಒಂದೇ ದಿನಕ್ಕೆ ಚಿತ್ರಮಂದಿರಗಳಿಂದ ಎತ್ತಂಗಡಿ ಆಗುತ್ತದೆ ಎಂಬುದು ಚೆನ್ನಾಗಿ ಗೊತ್ತಿದೆ. ಹೀಗಾಗಿ ಚಿತ್ರಕಥೆಯನ್ನು ಬೇರೆ ರೀತಿ ತೆಗೆದುಕೊಂಡು ಹೋಗಿರುವೆ. 

ನಿರ್ದೇಶಕ ಮತ್ತು ನಟನಾಗಿ ಏನೆಲ್ಲ ಸವಾಲುಗಳಿತ್ತು?

ನಟನೆಗಿಂತ ನಿರ್ದೇಶನದಲ್ಲಿ ಸವಾಲು, ಒತ್ತಡ ಇತ್ತು. ಈಗಲೂ ಅದೇ ಒತ್ತಡ ಇದೆ. ಸಾಧನೆ ಮಾಡಲು ಹೊರಟಾಗ ಇದೆಲ್ಲ ಸಹಜ. ಆದರೆ ಒಂದು ಉತ್ತಮ ಚಿತ್ರ ಮಾಡಿದ ತೃಪ್ತಿಯಿದೆ.

ADVERTISEMENT

ನಟನೆಯ ಜತೆ ನಿರ್ದೇಶನದ ಆಯ್ಕೆ ಯಾಕೆ?

ಈ ಹಿಂದೆ ನಟನೆ ಜತೆಗೆ ನಿರ್ಮಾಣ ಮಾಡಿದ್ದೆ. ಆದರೆ ನಿರ್ಮಾಪಕ ಯಾಕೆ ಆದೆ ಎಂಬುದನ್ನು ಯಾರೂ ಕೇಳಿಲ್ಲ. ನಿರ್ದೇಶನಕ್ಕೆ ಇಳಿದಾಗ ಯಾಕೆ ಎಂಬ ಪ್ರಶ್ನೆ ತುಂಬ ಬಂತು. ನಿರ್ಮಾಪಕ ಆದಾಗಲೂ ಸಿನಿಮಾಕ್ಕೆ ನ್ಯಾಯ ಒದಗಿಸಿದ್ದೆ. ಸರಿಯಾಗಿ ಪ್ರಚಾರ ಮಾಡಿ ಸಿನಿಮಾವನ್ನು ದಡ ಮುಟ್ಟಿ ಸಿದ್ದೆ. ನಿರ್ದೇಶಕನಾಗಿ ಕೂಡ ನನ್ನ ಸಿನಿಮಾದಲ್ಲಿ ಪ್ರೇಕ್ಷಕರಿಗೆ ಮನರಂಜನೆ ನೀಡುವೆ ಎಂಬ ಭರವಸೆ ಇದೆ. ನಿರ್ದೇಶನ ಮಾಡುತ್ತೇನೆ ಎಂದು ಸುಮ್ಮನೆ ಮಾಡಿಲ್ಲ. ಈ ಕಥೆ ನಿರ್ದೇಶನ ವರ್ಕೌಟ್‌ ಆಗುತ್ತದೆ ಎಂಬ ಕಾರಣಕ್ಕೆ ಮಾಡಿರುವೆ. ಕಥೆ, ಚಿತ್ರಕಥೆ, ಸಂಭಾಷಣೆ ಎಲ್ಲವೂ ನನ್ನದೇ.

ತೆಲುಗಿನಲ್ಲಿಯೂ ಈ ಚಿತ್ರ ಮಾಡಿರುವ ಕಾರಣವೇನು?

ಇಂಥದ್ದೆ ಕಾರಣ ಎಂದಿಲ್ಲ. 2010ರಲ್ಲಿಯೇ ತೆಲುಗಿನಲ್ಲಿ ನನ್ನ ಸಿನಿಮಾವೊಂದು ಅರ್ಧಕ್ಕೆ ನಿಂತಿತ್ತು. ಯಾವ ಕೆಲಸವನ್ನು ಅರ್ಧದಲ್ಲಿ ಬಿಟ್ಟುಹೋಗುವ ಸ್ವಭಾವ ನನ್ನದಲ್ಲ. ಅದನ್ನು ಪೂರ್ತಿ ಮಾಡುವ ಬಯಕೆ ಇತ್ತು. ಈ ಸಿನಿಮಾ ಮೂಲಕವಾದರೂ ಅದನ್ನು ಪೂರ್ತಿಗೊಳಿಸೋಣ,  ಅಲ್ಲಿಯೂ ನಾಯಕನಾಗಿ ನೆಲೆಯೂರೋಣ ಎಂಬ ಬಯಕೆಯಷ್ಟೆ. ತೆಲುಗು ಸ್ಫೂರ್ತಿ ಪಡೆದ ಕಥೆಯೇನಲ್ಲ, ಎರಡೂ ರಾಜ್ಯಗಳಿಗೂ ಕನೆಕ್ಟ್‌ ಆಗುವ ಕಥೆ.

ಈತನಕದ ಸಿನಿಪಯಣ ಹೇಗಿತ್ತು?

ಇಲ್ಲಿತನಕದ ಸಿನಿಪಯಣ ನೂರರಷ್ಟು ಎಕ್ಸೈಟ್‌ ಆಗಿದೆ. ಏಳು, ಬೀಳುಗಳು ಸಹಜ. ಅವುಗಳಾಚೆಗೆ ಖುಷಿಯಿದೆ. ಈ ಚಿತ್ರದಿಂದ ಮ್ಯಾಜಿಕ್‌ ಆಗುತ್ತದೆ ಎಂದು ನಂಬಿರುವೆ.

ನಿಮ್ಮ ಹದಿನೈದು ವರ್ಷಗಳ ಈ ಪಯಣದಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿದೆಯಾ?

ಖಂಡಿತ ಸಿಕ್ಕಿಲ್ಲ. ಅದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ಪ್ರಯತ್ನ ಇದೆ. ಪ್ರಯತ್ನಕ್ಕೆ ಒಂದು ದಿನ ಫಲ ಸಿಗುತ್ತದೆ ಎಂದು ನಂಬಿರುವೆ. ಸ್ವಲ್ಪ ತಡವಾಗಬಹುದು. 15 ವರ್ಷಗಳ ಸಿನಿಪಯಣದ ಅನುಭವ ಅದ್ಭುತ. ಜೀವನದಲ್ಲಿ ವೈಫಲ್ಯ ಮತ್ತು ಯಶಸ್ಸು ಎರಡು ಇರುತ್ತದೆ. ನಾನು ಈಗಾಗಲೇ ವೈಫಲ್ಯವನ್ನು ಸಾಧಿಸಿ ಬಿಟ್ಟಿದ್ದೇನೆ! ಬಾಕಿ ಇರುವುದು ಯಶಸ್ಸು. ಅದನ್ನು ತಲುಪುತ್ತೇನೆ ಎಂಬ ನಂಬಿಕೆ ಇದೆ. ಆ ನಿಟ್ಟಿನಲ್ಲಿ ಯತ್ನ ನಿರಂತರ. ಪ್ರಯತ್ನ ಪಡದೆ ಇರುವವರು ತುಂಬ ಜನ ಇದ್ದಾರೆ. ಆದರೆ ನಾನು ನಿರಂತರವಾಗಿ ಪ್ರಯತ್ನ ಮಾಡುತ್ತಿರುವೆ. 

ನಿಮ್ಮ ಮುಂದಿನ ಸಿನಿಮಾಗಳು...

ಸದ್ಯಕ್ಕೆ ಈ ಸಿನಿಮಾ ಮಾತ್ರ. ಇದರ ಬಿಡುಗಡೆ ನಂತರ ಮುಂದಿನ ಸಿನಿಮಾಗಳ ಬಗ್ಗೆ ಯೋಚಿಸುವೆ. ಯಾವುದೇ ಕಥೆ ಒಪ್ಪಿಕೊಂಡಿಲ್ಲ.

ಚಿತ್ರರಂಗದಲ್ಲಿ ನಿಮ್ಮ ಮುಂದಿನ ಗುರಿಗಳೇನು?

ನಟ, ನಿರ್ದೇಶಕ, ನಿರ್ಮಾಪಕ ಎಲ್ಲವೂ ಆಗಿರುವೆ. ಸಿನಿಮಾವಷ್ಟೇ ನನ್ನ ಗುರಿ. ನನ್ನ ಸಿನಿಮಾ ಬಂದಾಗ ಜನ ಮುಗಿಬಿದ್ದರೆ ಅದಕ್ಕಿಂತ ಸಂತೋಷ ಇನ್ನೊಂದಿಲ್ಲ. ನಮ್ಮಲ್ಲೇ ಏನೋ ಕೊರತೆ ಇರುತ್ತೆ. ಅದರಿಂದ ಜನ ನನ್ನ ಸಿನಿಮಾಗಳಿಗೆ ಮುಗಿಬೀಳುತ್ತಿಲ್ಲ. ಬಹುಶಃ ದೇವರು ಎಲ್ಲ ಗುಣಪಾಠಗಳನ್ನು ಕಲಿಸಿದ ಬಳಿಕ ಆ ಕೊರತೆಯನ್ನು ಅರ್ಥ ಮಾಡಿಸುತ್ತಾನೆ ಅಂದುಕೊಳ್ಳುವೆ. ಗೆಲುವಿನ ಪ್ರಯತ್ನವಂತೂ ಜಾರಿಯಲ್ಲಿರುತ್ತದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.