ADVERTISEMENT

ಅಭಿಮಾನ ಯುದ್ಧ? ಅಲ್ಲು ಅರ್ಜುನ್‌–ಮಹೇಶ್‌ ಬಾಬು 'ಫ್ಯಾನ್ಸ್‌ ವಾರ್‌' ತಾರಕಕ್ಕೆ!

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 7:44 IST
Last Updated 21 ಜನವರಿ 2020, 7:44 IST
ಅಲ್ಲು ಅರ್ಜುನ್‌ ಮತ್ತು ಮಹೇಶ್‌ ಬಾಬು
ಅಲ್ಲು ಅರ್ಜುನ್‌ ಮತ್ತು ಮಹೇಶ್‌ ಬಾಬು   

ಹೈದರಾಬಾದ್‌:ಭಾರತೀಯ ಚಿತ್ರರಂಗದಲ್ಲಿ ಹಿಂದಿನ ಸ್ಟಾರ್‌ ನಟರ ಅಭಿಮಾನಿಗಳ ನಡುವಿನ ಕದನ ಹೊಸದಲ್ಲ. ಮೆಚ್ಚಿನ ನಟರ ಚಿತ್ರ ಬಿಡುಗಡೆಯಾದಾಗ ಆಳೆತ್ತರದ ಕಟೌಟ್‌ ಕಟ್ಟಿ, ಅದರ ಉದ್ದಕ್ಕೂ ಹೂಹಾರ ಮತ್ತು ಸ್ಟಾರ್‌ ಹಾಕುವಲ್ಲಿ ಕಂಡುಬರುತ್ತಿದ್ದ ಪೈಪೋಟಿ ಈಗ ಹಾಲಿನ ಅಭಿಷೇಕ ಮಾಡುವ ಮಟ್ಟಿಗೆ ಬಂದು ತಲುಪಿದೆ. ಮೆಚ್ಚಿನ ನಟರನ್ನು ಆರಾಧ್ಯ ದೈವವೆಂದು ಆರಾಧಿಸುವ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಮೊದಲಿನಿಂದಲೂ ಇದು ಬೆಳೆದುಕೊಂಡು ಬಂದಿದೆ. ಮೊದಲಿನಿಂದಲೂ ಬಾಲಿವುಡ್‌ನಲ್ಲಿ ಈ ಟ್ರೆಂಡ್‌ ಇಲ್ಲ.

ಕಾಲಿವುಡ್‌ ಮತ್ತು ಟಾಲಿವುಡ್‌ನಲ್ಲಿ ಯುವ ಸ್ಟಾರ್‌ ನಟರ ಫ್ಯಾನ್ಸ್‌ ನಡುವೆ ಹೊಸ ರೀತಿಯ ಕದನ ಆರಂಭವಾಗಿದೆ. ನೆಚ್ಚಿನ ನಟರು ಚಿತ್ರಗಳು ಏಕಕಾಲಕ್ಕೆ ಬಿಡುಗಡೆಯಾದಾಗ ನಡೆಯುತ್ತಿದ್ದಬೀದಿ ಕಾಳಗ ಇದೀಗ ಸಾಮಾಜಿಕ ಜಾಲತಾಣಗಳನ್ನು ಪ್ರವೇಶಿಸಿದೆ. ಅತಿ ಎನಿಸುವಷ್ಟು ರೇಜಿಗೆ ಹುಟ್ಟಿಸುವ ಮಟ್ಟವನ್ನು ತಲುಪುತ್ತಿವೆ.

ಸಂಕ್ರಾಂತಿಗೂ ಮುನ್ನ ಕೆಲವು ದಿನಗಳ ಅಂತರದಲ್ಲಿ ಬಿಡುಗಡೆಯಾದ ಪ್ರಿನ್ಸ್‌ ಮಹೇಶ್‌ ಬಾಬು ಮತ್ತು ಡಾನ್ಸ್‌ಸ್ಟಾರ್‌ ಅಲ್ಲು ಅರ್ಜುನ್‌ಅಭಿನಯದ ಚಿತ್ರಗಳು ಅವರಿಬ್ಬರ ದೊಡ್ಡ ಅಭಿಮಾನಿ ಬಳಗದ ಮಧ್ಯೆ ಕದನಕ್ಕೆ ನಾಂದಿ ಹಾಡಿವೆ.ಮಹೇಶ್‌ ಬಾಬು ಮತ್ತು ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯದ ‘ಸರಿಲೇರು ನೀಕೆವ್ವರು’ ಮತ್ತು ಅಲ್ಲು ಅರ್ಜುನ್‌ ನಟಿಸಿರುವ ‘ಅಲ ವೈಕುಂಠಪುರಮುಲೊ’ ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಗಳಿಸಿವೆ.

ADVERTISEMENT

ಎರಡೂ ಚಿತ್ರಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ ಬಗ್ಗೆ ಪಿನ್ಸ್‌ ಮತ್ತು ಅಲ್ಲು ಅಭಿಮಾನಿಗಳ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಕಿತ್ತಾಟ ಶುರುವಾಗಿದೆ. #ಫೇಕ್‌ಬಾಪ್‌ಅಲ್ಲುಅರ್ಜುನ್‌ ಮತ್ತು #ಫೇಕ್‌ಕ್ವೀನ್‌ಮಹೇಶ್‌ಬಾಬು ಹ್ಯಾಶ್‌ಟ್ಯಾಗ್ ಅಡಿ ಕೆಸರೆರಚಾಟ ನಡೆಯುತ್ತಿದೆ. ತೆಲುಗು ಚಿತ್ರರಂಗಕ್ಕೆ ಇದು ಹೊಸತು. ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆ ನೀಡುತ್ತಿರುವ ಅಂಕಿ, ಸಂಖ್ಯೆಗಳುಉತ್ಪ್ರೇಕ್ಷಿತ ಎಂದು ಅಭಿಮಾನಿಗಳು ಪರಸ್ಪರ ದೋಷಾರೋಪ ಮಾಡಿಕೊಳ್ಳುತ್ತಿದ್ದಾರೆ.

ತಮಿಳರಿಗೂ ಹೊಸದಲ್ಲ

ಮತ್ತೊಂದೆಡೆ ಕಾಲಿವುಡ್‌ನಲ್ಲಿ ತಲಾ ಅಜಿತ್‌ ಮತ್ತು ದಳಪತಿ ವಿಜಯ್‌ ಅಭಿಮಾನಿಗಳ ನಡುವಿನ ಕಾದಾಟ ತಮಿಳು ಪ್ರೇಕ್ಷಕರಿಗೆ ಹೊಸದಲ್ಲ. ಇಬ್ಬರ ಸಿನಿಮಾ ಬಿಡುಗಡೆಯಾಗುತ್ತವೆ ಎಂದರೆ ತಮಿಳುನಾಡಿನ ಚಿತ್ರಣವೇ ಬದಲಾಗುತ್ತದೆ. ಎಂಜಿಆರ್‌–ಶಿವಾಜಿ ಗಣೇಶನ್‌ ಮತ್ತು ರಜನಿಕಾಂತ್‌–ಕಮಲ್‌ ಹಾಸನ್‌ ಕಾಲದಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ. ಬೀದಿಗಿಳಿದು ಪರಸ್ಪರ ಕೈ–ಕೈ ಮಿಲಾಯಿಸುವ ಮಟ್ಟಿಗೆ ಅಭಿಮಾನ ಅತಿರೇಕಕ್ಕೆ ಏರಿರುತ್ತದೆ. ಕಾಲಿವುಡ್‌ನಲ್ಲಿ ವಿಜಯ್‌ ಮತ್ತು ಅಜಿತ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆಸುವ ಕದನ ಕುತೂಹಲ ಹುಟ್ಟಿಸುತ್ತದೆ.

ಈಗ ಈ ವ್ಯಾಧಿ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿದೆ. ಸಾಮಾಜಿಕ ಜಾಲತಾಣಗಳ ವಿಷ ಕಕ್ಕುವ ಅಭಿಮಾನಿಗಳ ಕಿವಿ ಹಿಂಡುವ ಕೆಲಸವನ್ನು ನಟರು ಕೂಡ ಮಾಡುತ್ತಿಲ್ಲ. ಇದರಿಂದಾಗಿ ನೆಚ್ಚಿನ ನಟರ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವಿಷ ಕಾರುವಅಭಿಮಾನಿಗಳ ಸಂಖ್ಯೆ ಹೆಚ್ಚುತ್ತಿದೆ.ಫ್ಯಾನ್ಸ್‌ ವಾರ್‌ ಒಂದು ರೀತಿ ಜನರಿಗೆ ಪುಕ್ಕಟೆ ಮನರಂಜನೆ ನೀಡುತ್ತಿದೆ.

ಮಲಯಾಳ ಚಿತ್ರರಂಗದಲ್ಲಿ ಮಮ್ಮುಟ್ಟಿ ಮತ್ತು ಮೋಹನ್‌ಲಾಲ್‌ ಅಭಿಮಾನಿಗಳ ಮಧ್ಯೆ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಕಿಚ್ಚ ಸುದೀಪ್ ಮತ್ತು ದರ್ಶನ್‌ ಅಭಿಮಾನಿಗಳ ನಡುವೆ ಆಗಾಗ ಚಿಕ್ಕಪುಟ್ಟ ಗಲಾಟೆಗಳು ನಡೆಯುತ್ತಿರುತ್ತವೆ. ಆದರೆ, ಕೀಳು ಮಟ್ಟಕ್ಕೆ ಹೋಗಿಲ್ಲ. ಒಂದು ವೇಳೆ ತಮಿಳು ಮತ್ತು ತೆಲುಗು ಚಿತ್ರರಂಗದ ಗಾಳಿ ಸ್ಯಾಂಡಲ್‌ವುಡ್‌ ಮತ್ತು ಮಾಲಿವುಡ್‌ಗೂ ಸೋಕಿದರೆ ಅಲ್ಲಿಯೂ ಫ್ಯಾನ್ಸ್‌ ವಾರ್‌ ಟ್ರೆಂಡ್‌ ಶುರುವಾಗುವ ದಿನ ದೂರವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.