ADVERTISEMENT

ಮಲಯಾಳಂ ಚಲನಚಿತ್ರ ನಟ ನೆಡುಮುಡಿ ವೇಣು ನಿಧನ

ಪಿಟಿಐ
Published 11 ಅಕ್ಟೋಬರ್ 2021, 18:36 IST
Last Updated 11 ಅಕ್ಟೋಬರ್ 2021, 18:36 IST
ನೆಡುಮುಡಿ ವೇಣು
ನೆಡುಮುಡಿ ವೇಣು   

ತಿರುವನಂತಪುರ: ಮಲಯಾಳ ಚಿತ್ರರಂಗದ ಹೆಸರಾಂತ ನಟ ನೆಡುಮುಡಿ ವೇಣು ಅವರು ಸೋಮವಾರ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 73 ವರ್ಷ ವಯಸ್ಸಾಗಿತ್ತು. ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ಕೋವಿಡ್‌ನಿಂದ ಗುಣಮುಖರಾಗಿದ್ದ ಅವರು ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದರು. ಆಯಾಸಗೊಂಡಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ನಿಧನರಾದರು ಎಂದು ಚಿತ್ರರಂಗದ ಮೂಲಗಳು ಹೇಳಿವೆ.

ಅಂತ್ಯಕ್ರಿಯೆ ಮಂಗಳವಾರ ನಡೆಯಲಿದೆ. ನಟ ನೆಡುಮುಡಿ ವೇಣು ಅವರು ತಮ್ಮ 40 ವರ್ಷಗಳ ಸುದೀರ್ಘ ಸಿನಿ ಪಯಣದಲ್ಲಿ ಅವರು 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು.

ADVERTISEMENT

ವೇಣು ಅವರು ರಂಗಭೂಮಿ ಕಲಾವಿದರಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. 1978ರಲ್ಲಿ ಜಿ.ಅರವಿಂದನ್‌ ಅವರ ‘ತಂಬು’ ಚಿತ್ರದ ಮೂಲಕ ಮಲಯಾಳ ಚಿತ್ರರಂಗವನ್ನು ಪ್ರವೇಶಿಸಿದ್ದರು. ನಾಯಕ, ಖಳನಾಯಕ, ಹಾಸ್ಯಪ್ರಧಾನ ಪಾತ್ರಗಳು ಸೇರಿದಂತೆ ಹಲವು ವೈವಿಧ್ಯಮಯ ಪಾತ್ರಗಳನ್ನು ನಿಭಾಯಿಸಿದ್ದು, ತಮ್ಮದೇ ಆದ ಛಾಪು ಮೂಡಿಸಿದ್ದರು.

ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರು ಎಂದೇ ಗುರುತಿಸಲ್ಪಡುವ ವೇಣು ಅವರು, ಹೆಸರಾಂತ ರಂಗಕರ್ಮಿ ಕವಳಂ ನಾರಾಯಣಪಣಿಕ್ಕರ್ ಅವರ ಪ್ರಯೋಗಶೀಲ ರಂಗತಂಡದ ಮೂಲಕ ವೃತ್ತಿ ಬದುಕನ್ನು ಆರಂಭಿಸಿದ್ದರು.

ಅವರ ನಟನಾ ಸಾಮರ್ಥ್ಯ, ಪ್ರತಿಭೆಗೆ ಕನ್ನಡಿ ಹಿಡಿದಿದ್ದ ಚಿತ್ರ 1979ರಲ್ಲಿ ತೆರೆಕಂಡಿದ್ದ ‘ತಂಕರ’. ಪದ್ಮರಾಜನ್‌ ರಚನೆ, ಭರತನ್‌ ನಿರ್ದೇಶನದ ಈ ಚಿತ್ರದಲ್ಲಿ ಅವರು ಮರಗೆಲಸದವನ ಪಾತ್ರ ನಿಭಾಯಿಸಿದ್ದರು. ತದನಂತರದ್ದು ಯಶೋಗಾಥೆ.

ಚಿತ್ರರಂಗದ ಪರಿಣತ ಎನ್‌.ಬಾಲಗೋಪಾಲ್‌ ಅವರ ಪ್ರಕಾರ, ವೇಣು ತಮ್ಮ ಸಹಜ ಅಭಿಯನದಿಂದ ಗಮನಸೆಳೆದಿದ್ದರು. ಪಿ.ಪದ್ಮರಾಜನ್‌ ರಚಿಸಿ, ನಿರ್ದೇಶಿಸಿದ್ದ ಚಿತ್ರಗಳಲ್ಲಿ ಅದ್ವಿತೀಯ ಅಭಿನಯವನ್ನು ನೀಡಿದ್ದರು. ಇವುಗಳಲ್ಲಿ ಮುಖ್ಯವಾಗಿ ಹೆಸರಿಸಬಹುದಾದ ಚಿತ್ರಗಳು: ಕಳ್ಳನ್‌ ಪವಿತ್ರನ್‌ ಮತ್ತು ಒರಿಡಾತೋರು ಫಯಲವನ್.

30 ಮತ್ತು 40ನೇ ವಯಸ್ಸಿನಲ್ಲಿಯೇ 70 ವರ್ಷದ ವ್ಯಕ್ತಿಯ ಪಾತ್ರಧಾರಿಯಾಗಿ ಅಭಿನಯಿಸಿಸಿ ಪಾತ್ರಕ್ಕೆ ಜೀವತುಂಬಿದ್ದರು. ಮಲಯಾಳ ಕಾವ್ಯಗಳ ವಾಚನದಲ್ಲಿಯೇ ಸಿದ್ಧಹಸ್ತರಾಗಿದ್ದು, ದಕ್ಷಿಣ ಭಾರತದಲ್ಲಿಯೇ ಹೆಸರಾಗಿದ್ದರು.

1948ರಲ್ಲಿ ಅಲಪ್ಪುಜಾ ಜಿಲ್ಲೆಯಲ್ಲಿ ಜನಿಸಿದ್ದ ನೆಡುಮುಡಿ ವೇಣು ಕಾಲೇಜು ದಿನಗಳಲ್ಲಿಯೇ ನಾಟಕಗಳಲ್ಲಿ ಅಭಿನಯಿಸಿದ್ದರು. ಆಗ ಅವರೊಂದಿಗೆ ನಟಿಸಿದ್ದ ಫಾಜಿಲ್‌ ಬಳಿಕ ಜನಪ್ರಿಯ ಚಿತ್ರನಿರ್ದೇಶಕರಾಗಿ ಹೊರಹೊಮ್ಮಿದ್ದರು.

ಹಲವು ರಾಷ್ಟ್ರೀಯ ಮತ್ತು ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪುರಸ್ಕೃತರಾಗಿದ್ದರು. ಮಲಯಾಳದ ಕಿರುತೆರೆ ಧಾರವಾಹಿ ಕೈರಾಳಿವಿಲಾಸಂ ಅನ್ನು ನಿರ್ದೇಶಿಸಿ, ಒಂದು ಪಾತ್ರವನ್ನೂ ನಿಭಾಯಿಸಿದ್ದರು. ದೂರದರ್ಶನ ಇದನ್ನು ನಿರ್ಮಾಣ ಮಾಡಿತ್ತು.

ಸುಬ್ರಹ್ಮಣ್ಯಂ ಅವರು ನಿರ್ದೇಶಿಸಿದ್ದ ‘ಎಂಟೆ ಮಳಾ’ ಅವರು ನಟಿಸಿದ್ದ ಕಡೆಯ ಚಿತ್ರ. ವೇಣು ಅಗಲಿಕೆಗೆ ಚಿತ್ರರಂಗ, ರಾಜಕೀಯ ರಂಗದ ಹಲವರು ಕಂಬನಿ ಮಿಡಿದಿದ್ದು, ಅವರ ನಟನಾ ಕೌಶಲವನ್ನು ಸ್ಮರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.