ADVERTISEMENT

ನಮ್ಮನ್ನು ಬಾಲಿವುಡ್‌ನಲ್ಲಿ ವೇಶ್ಯೆಯ ಪಾತ್ರ ಮಾಡಲು ಕರೆಯುತ್ತಾರೆ: ನಟಿ ಅಳಲು

ಈಶಾನ್ಯ ಭಾರತದ ಚೆಲುವೆ ಲಿನ್ ಲೈಶ್ರಾಮ್‌ ಅಸಮಾಧಾನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜೂನ್ 2021, 9:29 IST
Last Updated 15 ಜೂನ್ 2021, 9:29 IST
ಲಿನ್ ಲೈಶ್ರಮ್, ಇನ್ಸ್ಟಾಗ್ರಾಮ್ ಚಿತ್ರ
ಲಿನ್ ಲೈಶ್ರಮ್, ಇನ್ಸ್ಟಾಗ್ರಾಮ್ ಚಿತ್ರ   

ಬೆಂಗಳೂರು: ಮಣಿಪುರದ ನಟಿ ಹಾಗೂ ಮಾಡೆಲ್ ಲಿನ್ ಲೈಶ್ರಾಮ್‌ ಬಾಲಿವುಡ್‌ನಲ್ಲಿ ಜನಾಂಗೀಯ ತಾರತಮ್ಯವಿದೆ ಎಂದು ಆರೋಪಿಸಿದ್ದಾರೆ.

‘ಫ್ರಿ ಪ್ರೆಸ್ ಜರ್ನಲ್‘ ವೆಬ್‌ಸೈಟ್‌ಗೆ ಸಂದರ್ಶನ ನೀಡಿರುವ ಅವರು, ‘ಈಶಾನ್ಯ ಭಾರತದವರನ್ನು ಭಾರತೀಯ ಚಿತ್ರರಂಗ ಅಥವಾ ಬಾಲಿವುಡ್‌ನಲ್ಲಿ ಒಂದು ರೀತಿ ನೋಡಲಾಗುತ್ತದೆ. ನಮ್ಮನ್ನೂ ಏಕೆ ಎಲ್ಲ ಭಾರತೀಯರಂತೆ ನೋಡುವುದಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಿನ್ ಲೈಶ್ರಾಮ್‌ ಹಿಂದಿಯ ಮೇರಿ ಕೊಮ್, ಆಕ್ಸೋನ್, ರಂಗೂನ್, ಓಂ ಶಾಂತಿ ಓಂ ಸೇರಿದಂತೆ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದು, ಅಂತರರಾಷ್ಟ್ರೀಯ ಮಟ್ಟದ ಮಾಡೆಲ್ ಎನಿಸಿಕೊಂಡಿದ್ದಾರೆ.

ADVERTISEMENT

‘ಈಶಾನ್ಯ ರಾಜ್ಯದ ನಟಿಯರಿಗೆ ಬಾಲಿವುಡ್‌ ಸಿನಿಮಾಗಳಲ್ಲಿ ವೇಶ್ಯೆಯ ಪಾತ್ರ ಮಾಡಲು ಕರೆಯುತ್ತಾರೆ. ಇಲ್ಲವಾದರೆ, ಮಸಾಜ್ ಮಾಡುವುದು, ಹೋಟೆಲ್‌ಗಳಲ್ಲಿನ ಮಾಣಿಯ ಪಾತ್ರ ಮಾಡಲು ಕರೆಯುತ್ತಾರೆ‘ ಎಂದು ಆರೋಪಿಸಿದ್ದಾರೆ.

‘ಮೇರಿ ಕೊಮ್ ಸಿನಿಮಾದಲ್ಲಿ ಮೇರಿ ಪಾತ್ರವನ್ನು ಪ್ರಿಯಾಂಕಾ ಚೋಪ್ರಾ ಮಾಡಿದ್ದರು. ಮೇರಿಯಂತೆ ಕಾಣಲು ಅವರು ಸಾಕಷ್ಟು ಕಷ್ಟಪಟ್ಟಿದ್ದರು ಎಂಬುದನ್ನು ನಾನು ಬಲ್ಲೆ. ಆದರೆ, ಆ ಪಾತ್ರಕ್ಕೆ ಹೋಲಿಕೆಯಾಗುವ ಈಶಾನ್ಯ ರಾಜ್ಯಗಳ ನಟಿ ಯಾರು ಸಿಗಲಿಲ್ವಾ? ಎಂದು ಪ್ರಶ್ನಿಸಿದ್ದಾರೆ.

‘ನಮ್ಮದೇ ದೇಶದಲ್ಲಿ ನಾವು ಪರಕೀಯರಂತೆ ಕಾಣುತ್ತಿದ್ದೇವೆ ಎಂದು ಹೇಳಿಕೊಳ್ಳಲು ನನಗೆ ನೋವಾಗುತ್ತದೆ. ದಿ ಫ್ಯಾಮಿಲಿ ಮ್ಯಾನ್ 2 ಸಿನಿಮಾದಲ್ಲಿ ದಕ್ಷಿಣ ಭಾರತದ ಸಂಸ್ಕೃತಿಯ ಪ್ರತಿಬಿಂಬವಾಗಿ ಅಲ್ಲಿನ ಕಲಾವಿದರನ್ನು ಬಳಸಿಕೊಂಡಿದ್ದಾರೆ. ಅಲ್ಲದೇ ಯಶಸ್ವಿ ಕೂಡ ಆಗಿದ್ದಾರೆ. ದಕ್ಷಿಣ ಭಾರತಕ್ಕೆ ಸಿಗುವ ನ್ಯಾಯ ನಮಗೇಕೆ ಸಿಗುವುದಿಲ್ಲ?‘ ಎಂದು ಲಿನ್ ಖಾರವಾಗಿ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.