ADVERTISEMENT

‘ಮಂತ್ರಾಲಯ ಮಹಾತ್ಮೆ’ ಚಿತ್ರಕ್ಕೆ ಬಣ್ಣದ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 8:23 IST
Last Updated 29 ಜೂನ್ 2020, 8:23 IST
ಎಸ್‌.ಕೆ. ಭಗವಾನ್
ಎಸ್‌.ಕೆ. ಭಗವಾನ್   

ವರನಟ ರಾಜ್‌ಕುಮಾರ್‌ ನಟನೆಯ ‘ಮಂತ್ರಾಲಯ ಮಹಾತ್ಮೆ’ ಚಿತ್ರ ತೆರೆಕಂಡಿದ್ದು 1966ರಲ್ಲಿ. ಅವರಿಗೆ ತುಂಬಾ ಇಷ್ಟವಾಗಿದ್ದ ಸಿನಿಮಾವೂ ಹೌದು. ಟಿ.ವಿ. ಸಿಂಗ್‌ ಠಾಕೂರ್‌ ಆ್ಯಕ್ಷನ್‌ ಕಟ್‌ ಹೇಳಿದ್ದ ಈ ಕಪ್ಪು–ಬಿಳುಪು ಸಿನಿಮಾ ಈಗ ಬಣ್ಣ ಮೆತ್ತಿಕೊಂಡು ಬಿಡುಗಡೆಗೆ ಸಜ್ಜಾಗುತ್ತಿದೆ.

ಇದರಲ್ಲಿ ರಾಜ್‌ಕುಮಾರ್‌ ಅವರು ರಾಘವೇಂದ್ರ ಸ್ವಾಮಿಯ ಪಾತ್ರದಲ್ಲಿ ನಟಿಸಿದ್ದರು. ಉದಯ್‌ಕುಮಾರ್‌, ಕಲ್ಪನಾ, ಜಯಂತಿ, ಶೇಷಗಿರಿರಾವ್‌ ನಟಿಸಿದ್ದ ಈ ಚಿತ್ರ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ.

ಕಪ್ಪು-ಬಿಳುಪಿನಲ್ಲಿದ್ದ ರಾಜ್‌ಕುಮಾರ್‌ ನಟನೆಯ ‘ಸತ್ಯ ಹರಿಶ್ಚಂದ್ರ’ ಮತ್ತು ‘ಕಸ್ತೂರಿ ನಿವಾಸ’ ಸಿನಿಮಾಗಳು ಈಗಾಗಲೇ ಬಣ್ಣ ತುಂಬಿಕೊಂಡು ಮರುಬಿಡುಗಡೆಯಾಗಿದ್ದು, ಪ್ರೇಕ್ಷಕರನ್ನು ರಂಜಿಸಿವೆ. ಹಾಗಾಗಿ, ‘ಕಸ್ತೂರಿ ನಿವಾಸ’ ಸಿನಿಮಾವನ್ನು ಬಣ್ಣದ ರೂಪದಲ್ಲಿ ಪ್ರೇಕ್ಷಕರ ಮುಂದಿಟ್ಟಿದ್ದ ತಂಡವೇ ಈಗ ‘ಮಂತ್ರಾಲಯ ಮಹಾತ್ಮೆ’ ಸಿನಿಮಾಕ್ಕೂ ಬಣ್ಣದ ಸ್ಪರ್ಶ ನೀಡುತ್ತಿದೆ.

ADVERTISEMENT

ಈಗಾಗಲೇ, ಕಲರಿಂಗ್ ಮಾಡುವ ಪ್ರಕ್ರಿಯೆ ಆರಂಭಗೊಂಡಿದ್ದು, ಈ ವರ್ಷದ ಅಂತ್ಯದವರೆಗೂ ಈ ಪ್ರಕ್ರಿಯೆ ನಡೆಯಲಿದೆಯಂತೆ. ‘ಕಸ್ತೂರಿ ನಿವಾಸ ಸಿನಿಮಾಕ್ಕೆ ಬಣ್ಣದ ಸ್ಪರ್ಶ ನೀಡಿ ಮರುಬಿಡುಗಡೆ ಮಾಡಿದಾಗ ಮಂತ್ರಾಲಯ ಮಹಾತ್ಮೆ ಸಿನಿಮಾವನ್ನೂ ಇದೇ ಮಾದರಿಯಲ್ಲಿ ಮಾಡಿ ಮರುಬಿಡುಗಡೆ ಮಾಡುವಂತೆ ಪಾರ್ವತಮ್ಮ ರಾಜ್‌ಕುಮಾರ್‌ ನನಗೆ ಕೋರಿದ್ದರು. ಅವರ ಆಸೆಯಂತೆ ಈಗ ಚಿತ್ರಕ್ಕೆ ಬಣ್ಣದ ಲೇಪನ ನೀಡಿ ಜನರ ಮುಂದಿಡಲು ನಿರ್ಧರಿಸಿದ್ದೇವೆ’ ಎಂದು ಹಿರಿಯ ನಿರ್ದೇಶಕ ಎಸ್.ಕೆ. ಭಗವಾನ್‌ ‘ಪ್ರಜಾ ಪ್ಲಸ್‌’ಗೆ ವಿವರಿಸಿದರು.

‘ರಾಜ್‌ಕುಮಾರ್‌ ಅವರು ತುಂಬಾ ಇಷ್ಟಪಟ್ಟಿದ್ದ ಸಿನಿಮಾ ಇದು. ಬಣ್ಣದ ರೂಪದಲ್ಲಿ ಈ ಸಿನಿಮಾ ಮತ್ತೆ ತೆರೆಕಾಣಬೇಕು ಎಂಬುದು ಮಂತ್ರಾಲಯದ ಶ್ರೀಗಳ ಆಸೆಯೂ ಆಗಿದೆ. ಈಗ ಪ್ರಕ್ರಿಯೆ ಆರಂಭವಾಗಿದೆ. ಇದು ಪೂರ್ಣಗೊಳ್ಳಲು ವರ್ಷಾಂತ್ಯವಾಗಲಿದೆ. ಆ ನಂತರ ಚಿತ್ರದ ಮರುಬಿಡುಗಡೆಯ ದಿನಾಂಕವನ್ನು ನಿರ್ಧರಿಸಲಾಗುವುದು’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.