ADVERTISEMENT

ಬಹುಮುಖಿ ನಟಿಯಾಗಬೇಕಂತೆ ‘ಮಾರ್ಟಿನ್‌’ ನಾಯಕಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2022, 10:40 IST
Last Updated 13 ಸೆಪ್ಟೆಂಬರ್ 2022, 10:40 IST
ವೈಭವಿ ಶಾಂಡಿಲ್ಯ
ವೈಭವಿ ಶಾಂಡಿಲ್ಯ   

ಮರಾಠಿ ಮಣ್ಣಿನ ಬೆಡಗಿ ಚಂದನವನಕ್ಕೆ ಎರಡನೇ ಬಾರಿ ಕಾಲಿಟ್ಟು ಹೆಸರು ಮಾಡಿದ್ದಾರೆ. ಇವರೇ ವೈಭವಿ ಶಾಂಡಿಲ್ಯ.‘ಗಾಳಿಪಟ 2’ ಚಿತ್ರದಲ್ಲಿ ಶ್ವೇತಾ ಆಗಿ ಕಾಣಿಸಿಕೊಂಡವರು. ಕೆಲವು ವರ್ಷಗಳ ಹಿಂದೆ ‘ರಾಜ್-ವಿಷ್ಣು’ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಟ್ಟಿದ್ದರು. ಈಗ ‘ಗಾಳಿಪಟ–2’ ಚಿತ್ರದ ಮೂಲಕ ವಾಪಸಾಗಿದ್ದಾರೆ. ತಮ್ಮ ಅಭಿನಯ ಮತ್ತು ಚೆಲುವಿನಿಂದ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚೊತ್ತಿದ್ದಾರೆ.

ಶ್ವೇತಾ ತಮ್ಮ ವೃತ್ತಿಜೀವನದಲ್ಲಿ ಬಹಳ ವಿಭಿನ್ನವಾದ ಪಾತ್ರ ಎನ್ನುವ ವೈಭವಿ, ‘ನಾನು ನಿಜಜೀವನದಲ್ಲಿ ಬಹಳ ಮಾತನಾಡುತ್ತೇನೆ. ಆದರೆ, ಈ ಚಿತ್ರದಲ್ಲಿ ನನಗೆ ಅದಕ್ಕೆ ವಿರುದ್ಧವಾದ ಪಾತ್ರ. ಇಲ್ಲಿ ಮಾತು ಕಡಿಮೆ. ಅಷ್ಟೇ ಅಲ್ಲ, ಪ್ರಬುದ್ಧವಾಗಿರುವ ಜೊತೆಗೆ ಭಾವನಾತ್ಮಕವಾಗಿಇರುವಂತಹ ಪಾತ್ರ ನನ್ನದು. ಹಾಗಾಗಿ, ಶ್ವೇತಾ ಪಾತ್ರ ನನಗೆ ಬಹಳ ಕಷ್ಟವಾಯಿತು. ಆದರೆ, ಇಡೀ ಚಿತ್ರತಂಡದ ಸಹಾಯದೊಂದಿಗೆ ಆ ಪಾತ್ರ ನಿರ್ವಹಿಸಿದೆ. ಅದರಲ್ಲೂ ಕ್ಲೈಮ್ಯಾಕ್ಸ್ ದೃಶ್ಯಗಳ ಚಿತ್ರೀಕರಣ ನಿಜಕ್ಕೂ ಸವಾಲಿನದ್ದಾಗಿತ್ತು. ಈಗ ಜನರ ಪ್ರೀತಿ ನೋಡಿದಾಗ ಬಹಳ ಖುಷಿಯಾಗುತ್ತದೆ’ ಎನ್ನುತ್ತಾರೆ ವೈಭವಿ.

‘ನಾನು ನನ್ನ ಕುಟುಂಬದವರೊಡನೆ ಮುಂಬೈನಲ್ಲಿ ‘ಗಾಳಿಪಟ 2’ ನೋಡುವುದಕ್ಕೆ ಹೋಗಿದ್ದೆ. ಚಿತ್ರ ನೋಡುವುದಕ್ಕೆ ಜನ ದೊಡ್ಡ ಸಂಖ್ಯೆಯಲ್ಲಿ ಬಂದಿದ್ದರು ಮತ್ತು ಅವರೆಲ್ಲರೂ ನನ್ನನ್ನು ಗುರುತಿಸಿ ಪ್ರೀತಿಯಿಂದ ಮಾತನಾಡಿದರು. ಇತ್ತೀಚೆಗೆ ಉಡುಪಿ, ಮಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲೂ, ನನ್ನನ್ನು ‘ಗಾಳಿಪಟ 2’ ಹುಡುಗಿ ಎಂದು ಗುರುತಿಸಿ ಸೆಲ್ಫಿ ತೆಗೆಸಿಕೊಂಡಿದ್ದನ್ನು ಮರೆಯಲಾಗದು’ ಎನ್ನುತ್ತಾರೆ.

ADVERTISEMENT

ಮಾರ್ಟಿನ್‌ ನಾಯಕಿ

ಸದ್ಯ ಧ್ರುವ ಸರ್ಜಾ ಅಭಿನಯದ ‘ಮಾರ್ಟಿನ್’ನಲ್ಲಿ ನಾಯಕಿಯಾಗಿ ಅಭಿನಯಿಸುತ್ತಿರುವ ವೈಭವಿ, ಆ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ‘ಮಾರ್ಟಿನ್’ ನನ್ನ ಮೊದಲ ಪ್ಯಾನ್ ಇಂಡಿಯಾ ಚಿತ್ರ. ಅದು ಇನ್ನೊಂದು ಅದ್ಭುತವಾದ ಅನುಭವ. ಈ ಪಾತ್ರ ನನ್ನ ನಿಜಜೀವನಕ್ಕೆ ಬಹಳ ಹತ್ತಿರವಾದ ಪಾತ್ರ. ಬಬ್ಲಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಯಾರಿಗೂ ಹೆದರದ, ಜೀವನದಲ್ಲಿ ಏನಾದರೂ ಸಾಧಿಸುವ ಆಸೆ ಹೊತ್ತಿರುವ ಗಟ್ಟಿ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ’ ಎನ್ನುತ್ತಾರೆ ವೈಭವಿ.

ಒಬ್ಬ ನಟಿಯಾಗಿ ವಿಭಿನ್ನ ಪ್ರಯೋಗಗಳನ್ನು ಮಾಡುವುದಕ್ಕೆ ಇಷ್ಟ ಎನ್ನುವ ವೈಭವಿ, ‘ಯಾವುದೋ ಒಂದು ತರಹದ ಪಾತ್ರಕ್ಕೆ ನನಗೆ ಸೀಮಿತವಾಗುವುದಕ್ಕೆ ಇಷ್ಟವಿಲ್ಲ. ನನಗೆ ಡ್ರಗ್ ಅಡಿಕ್ಟ್ ಪಾತ್ರ, ಹಾರರ್ ಚಿತ್ರದಲ್ಲಿ ನಟನೆಯ ಆಸೆಯಿದೆ. ಮಹಿಳಾ ಪ್ರಧಾನ ಚಿತ್ರಗಳನ್ನು ಮಾಡಬೇಕು. ಸೂಕ್ಷ್ಮಸಂವೇದನೆಯ ಚಿತ್ರಗಳ ಜೊತೆಗೆ ರಾಜಮೌಳಿ ಅವರ ಶೈಲಿಯ ‘ಲಾರ್ಜರ್ ದ್ಯಾನ್ ಲೈಫ್’ ಚಿತ್ರಗಳಲ್ಲೂ ನಟಿಸುವುದಕ್ಕೆ ಆಸೆ ಇದೆ. ಎಲ್ಲ ತರಹದ ಪಾತ್ರಗಳನ್ನು, ಎಲ್ಲ ಶೈಲಿಯ ನಿರ್ದೇಶಕರ ಜೊತೆಗೆ ಕೆಲಸ ಮಾಡುವುದಕ್ಕೆ ನಾನು ಎದುರು ನೋಡುತ್ತಿದ್ದೇನೆ’ ಎನ್ನುವ ವೈಭವಿ, ಸದ್ಯಕ್ಕೆ ಯಾವುದೇ ಹೊಸ ಚಿತ್ರವನ್ನೂ ಒಪ್ಪಿಕೊಂಡಿಲ್ಲವಂತೆ.ನಾನೊಬ್ಬ ಬಹುಮುಖಿ ನಟಿ ಎಂದು ನಿರೂಪಿಸಬೇಕು. ಹಾಗಾಗಿ, ಅಂತಹ ಪಾತ್ರಗಳ ಆಯ್ಕೆ ಮತ್ತು ಹುಡುಕಾಟದಲ್ಲಿದ್ದೇನೆ. ಸದ್ಯದಲ್ಲೇ ಒಂದೊಳ್ಳೆಯ ಸುದ್ದಿ ಕೊಡುತ್ತೇನೆ’ ಎನ್ನುತ್ತಾರೆ ವೈಭವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.