ADVERTISEMENT

Interview | ಉತ್ತಮ ಕಥೆಗಾಗಿ ಕಾಯುತ್ತಿರುವೆ: ಮೋಕ್ಷಿತ ಪೈ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 22:30 IST
Last Updated 3 ಸೆಪ್ಟೆಂಬರ್ 2025, 22:30 IST
ಮೋಕ್ಷಿತ ಪೈ
ಮೋಕ್ಷಿತ ಪೈ   

‘ಪಾರು’ ಧಾರಾವಾಹಿ ಮೂಲಕ ಮನೆಮಾತಾದ ಮೋಕ್ಷಿತ ಪೈ ನಟನೆಯ ‘ಮಿಡಲ್‌ಕ್ಲಾಸ್‌ ರಾಮಾಯಣ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ಸಿನಿಮಾದಲ್ಲಿನ ನಾಯಕಿ ಎಂದರೆ ಗ್ಲಾಮರ್‌ ಪಾತ್ರಕ್ಕೆ ಮಾತ್ರ ಸೀಮಿತವಲ್ಲ ಎಂದು ನಂಬಿರುವ ಅವರು ತಮ್ಮ ಸಿನಿಪಯಣದ ಕುರಿತು ಮಾತನಾಡಿದ್ದಾರೆ.

‘ಮಿಡಲ್‌ಕ್ಲಾಸ್‌ ರಾಮಾಯಣ’ ಚಿತ್ರದಲ್ಲಿ ‘ಸೌಂದರ್ಯ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿರುವೆ. ಇಡೀ ಸಿನಿಮಾವೇ ಮಿಡಲ್‌ಕ್ಲಾಸ್‌ನವರ ಕಥೆ. ನಮ್ಮ ಕುಟುಂಬ ಸ್ವಲ್ಪ ಅಪ್ಪರ್‌ ಮಿಡಲ್‌ಕ್ಲಾಸ್‌ ಆಗಿರುತ್ತದೆ. ನಾನು ಕೂಡ ಎಂಎನ್‌ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತೇನೆ. ಚಿತ್ರದಲ್ಲಿ ಡಿಗ್ಲಾಮರ್‌ ಆಗಿ ಕಾಣಿಸಿಕೊಂಡಿದ್ದೇನೆ. ನನ್ನ ಮೈಬಣ್ಣದಿಂದ ನನಗೆ ಹುಡುಗ ಸಿಗುತ್ತಿರುವುದಿಲ್ಲ. ಇಂಥ ಸನ್ನಿವೇಶದಲ್ಲಿ ಕೊನೆಗೆ ನನಗೆ ಹೇಗೆ, ಎಂಥ ಹುಡುಗ ಸಿಗುತ್ತಾನೆ? ಮದುವೆಯಾದ ಬಳಿಕ ಏನೆಲ್ಲ ರಾಮಾಯಣ ನಡೆಯುತ್ತದೆ ಎನ್ನುವುದೇ ಚಿತ್ರದ ಒಟ್ಟಾರೆ ಕಥೆ’ ಎಂದು ಮಾತು ಪ್ರಾರಂಭಿಸಿದರು.

ಕೌಟಂಬಿಕ ಕಥಾ ಹಂದರ ಹೊಂದಿರುವ ಚಿತ್ರ 2022ರಲ್ಲಿಯೇ ಸೆಟ್ಟೇರಿತ್ತು. ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿರುವ ಸಿನಿಮಾ ಸೆಪ್ಟೆಂಬರ್‌ 12ರಂದು ತೆರೆಗೆ ಬರುತ್ತಿದೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್‌ ಕೂಡ ಬಿಡುಗಡೆಗೊಂಡಿದೆ. ಧನುಶ್ ಗೌಡ ವಿ. ನಿರ್ದೇಶನವಿದ್ದು, ವಿನು ಗೌಡ ಚಿತ್ರದ ನಾಯಕ.

ADVERTISEMENT

‘ಸಿನಿಮಾದಿಂದ ಜನಪ್ರಿಯತೆ ಸಿಗುತ್ತದೆ ಎಂಬ ಮಾತಿದೆ. ಆದರೆ ಕಿರುತೆರೆ ಕೂಡ ಅದಕ್ಕಿಂತ ಹೆಚ್ಚಿನ ಜನಪ್ರಿಯತೆ ನೀಡುತ್ತದೆ. ನನ್ನ ಮೊದಲ ಧಾರಾವಾಹಿ ‘ಪಾರು’ ನನಗೆ ಅತ್ಯಂತ ಜನಪ್ರಿಯತೆ ತಂದುಕೊಟ್ಟಿತು. ನಾನು ಇವತ್ತು ಈ ಸ್ಥಾನದಲ್ಲಿರಲು ಆ ಧಾರಾವಾಹಿಯೇ ಕಾರಣ. ಅದರಿಂದಾಗಿಯೇ ಬಿಗ್‌ಬಾಸ್‌ನಲ್ಲಿ ಅವಕಾಶ ಲಭಿಸಿತು’ ಎನ್ನುತ್ತಾರೆ.  

ಬೆಂಗಳೂರಿನವರಾದ ಇವರು ಪದವಿ ಮುಗಿಯುತ್ತಿದ್ದಂತೆ ಕಿರುತೆರೆಗೆ ಕಾಲಿಟ್ಟರು. ‘ನನಗೆ ನಟನೆ ಬಗ್ಗೆ ಏನೂ ಗೊತ್ತಿರಲಿಲ್ಲ. ಆಸಕ್ತಿಯೂ ಇರಲಿಲ್ಲ. ಭಾವಚಿತ್ರಗಳನ್ನು ನೋಡಿ ಬಲವಂತವಾಗಿ ಕರೆತಂದು ಧಾರಾವಾಹಿಯಲ್ಲಿ ಅವಕಾಶ ಕೊಟ್ಟರು. ನಾನು ಕೊಟ್ಟ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತೇನೆ. ಅದೇ ಕಠಿಣ ಶ್ರಮವೇ ನನ್ನನ್ನು ಇಲ್ಲಿತನಕ ಕರೆತಂದಿದೆ. ನಟನೆ ಕೈಹಿಡಿಯಿತು. ಜನರ ಪ್ರೀತಿಯಿಂದ ‘ಪಾರು’ ದೊಡ್ಡ ಮಟ್ಟದಲ್ಲಿ ಯಶಸ್ಸಾಯಿತು’ ಎಂದರು.

‘ಧಾರಾವಾಹಿ, ಸಿನಿಮಾಗಳಲ್ಲಿ ಅವಕಾಶ ಅರಸಿ ಬರುತ್ತಿದೆ. ಸಿನಿಮಾಕ್ಕೆ ಮಾತ್ರ ಸೀಮಿತವಾಗಿಲ್ಲ. ಧಾರಾವಾಹಿಯಾದರೂ ಉತ್ತಮ ಪಾತ್ರ ಸಿಗಬೇಕು. ಯಾವುದೇ ಉತ್ತಮ ಪ್ರಾಜೆಕ್ಟ್‌ ಸಿಕ್ಕರೂ ಕೆಲಸ ಮಾಡುವೆ. ಸಿನಿಮಾ ನಾಯಕಿ ಎಂದರೆ ಗ್ಲಾಮರ್‌ಗೆ ಮಾತ್ರ ಸೀಮಿತವಲ್ಲ. ಮಾಡುವ ಪಾತ್ರ ನೆನಪಿನಲ್ಲಿ ಉಳಿಯಬೇಕು. ಅಂಥ ಕಥೆಗಳಿಗೆ ಎದುರು ನೋಡುತ್ತಿರುವೆ. ಎಲ್ಲ ವಾಹಿನಿಗಳಿಂದಲೂ ಧಾರಾವಾಹಿ ಅವಕಾಶಗಳು ಬರುತ್ತಿವೆ. ಆದರೆ ಯಾವುದನ್ನೂ ಒಪ್ಪಿಕೊಂಡಿಲ್ಲ. ನನಗೆ ಕಥೆ ಇಷ್ಟವಾಗಬೇಕು’ ಎನ್ನುತ್ತಾರೆ ಅವರು.

‘ಇನ್ನೊಂದು ಸಿನಿಮಾ ಒಪ್ಪಿಕೊಂಡಿರುವೆ. ನವೆಂಬರ್‌ನಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಸದ್ಯಕ್ಕೆ ನಟನೆ ಬಿಟ್ಟು ಬೇರೇನೂ ಮಾಡುತ್ತಿಲ್ಲ. ಆದರೆ ಭವಿಷ್ಯದಲ್ಲಿ ಚಿತ್ರರಂಗಕ್ಕೆ ಸಂಬಂಧಿತ ಚಟುವಟಿಕೆಗಳನ್ನು ಪ್ರಾರಂಭಿಸುವ ಆಲೋಚನೆಯಿದೆ. ನಟಿ ಎಂದಾಕ್ಷಣ ಅಂದವಾಗಿ ಕಾಣಬೇಕಿಲ್ಲ, ನಟನೆಗೂ ಪ್ರಾಮುಖ್ಯತೆ ಇರಬೇಕು. ಈಗ ಸಿನಿಮಾ ಮತ್ತು ಧಾರಾವಾಹಿ ಎಂಬ ಬೇಧಭಾವವಿಲ್ಲ. ಎರಡೂ ಒಂದೇ ಎಂಬಂತೆ ಆಗಿವೆ. ಎಲ್ಲಾದರೂ ಕಂಟೆಂಟ್‌ ಉತ್ತಮವಾಗಿರಬೇಕಷ್ಟೆ ಎಂಬುದು ನನ್ನ ನಿಲುವು’ ಎಂದು ಮಾತಿಗೆ ವಿರಾಮವಿತ್ತರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.