‘ಎಲ್ಲೆಡೆ ನಿರಾಸೆ, ಅದೇ ನೆಪ, ಅದೇ ಸಬೂಬು...!’
ಇದು ನಟ ರಕ್ಷಿತ್ ಶೆಟ್ಟಿ ಮಾತು. ಅವರು ಹೀಗೆ ಹೇಳಿದ್ದು ತಮ್ಮ ನಿರ್ಮಾಣದ ‘ಏಕಂ’ ವೆಬ್ ಸರಣಿಯನ್ನು ಒಟಿಟಿ ವೇದಿಕೆಗಳೂ ಪ್ರಸಾರ ಮಾಡಲು ಹಿಂದೇಟು ಹಾಕಿದಾಗ. ಈ ವೆಬ್ ಸರಣಿಯನ್ನು ಜನರ ಎದುರಿಗೆ ಇರಿಸಲು ಕೊನೆಗೆ ತಮ್ಮದೇ ಹೊಸ ದಾರಿ ಸೃಷ್ಟಿಸಿಕೊಂಡರು.
ಹೊಸಬರ ಕನ್ನಡ ಸಿನಿಮಾಗಳಿಗೆ, ವೆಬ್ ಸರಣಿಗಳಿಗೆ ಒಟಿಟಿ ವೇದಿಕೆಗಳಲ್ಲಿ ಅವಕಾಶ ಸಿಗುತ್ತಿಲ್ಲ ಎನ್ನುವ ಕೂಗು ಹೊಸದೇನಲ್ಲ. ಕನ್ನಡದ ಖ್ಯಾತ ನಟರೇ ತಮ್ಮ ನಿರ್ಮಾಣದ ಸಿನಿಮಾಗಳನ್ನು, ವೆಬ್ ಸರಣಿಗಳನ್ನು ಒಟಿಟಿ ವೇದಿಕೆಯಲ್ಲಿ ಹಾಕಿಸಲು ಪರದಾಡುವಂತಹ ಸ್ಥಿತಿ ಇದೆ. ಇಂತಹ ಪರಿಸ್ಥಿತಿಯಲ್ಲಿ ‘ಲೂಸಿಯಾ’ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಹೊಸ ಯೋಚನೆಯೊಂದನ್ನು ಚಿತ್ರರಂಗದ ಎದುರಿಗೆ ಇರಿಸಿದ್ದಾರೆ.
ಮೇ 31, 2024 ರಂದು ಪವನ್ ನಿರ್ದೇಶನದ ‘ಧೂಮಂ’ ಅನ್ನು ಚಿತ್ರದ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತನ್ನ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿತು. ಅಲ್ಲಿ ಈ ಸಿನಿಮಾದ ಮಲಯಾಳ ಆವೃತ್ತಿಯನ್ನು ಇಲ್ಲಿಯವರೆಗೆ 22 ಲಕ್ಷ ಜನ ವೀಕ್ಷಿಸಿದ್ದಾರೆ. ಜೂನ್ 28ರಂದು ಇದೇ ಸಿನಿಮಾದ ಕನ್ನಡ ಆವೃತ್ತಿಯನ್ನು ಅಪ್‌ಲೋಡ್ ಮಾಡಿದ್ದು, ಇದನ್ನು 60 ಸಾವಿರಕ್ಕೂ ಅಧಿಕ ಜನ ವೀಕ್ಷಿಸಿದ್ದಾರೆ.
ಈ ಅಂಕಿಅಂಶಗಳನ್ನು ಇಟ್ಟುಕೊಂಡು ಮಾತನಾಡಿರುವ ಪವನ್, ‘ನಮ್ಮ ಸಿನಿಮಾವನ್ನು ಒಟಿಟಿ ಖರೀದಿಸಿಲ್ಲ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಒಂದು ಲಕ್ಷ ಜನ ನೋಡಿರಬಹುದು. ಯುಟ್ಯೂಬ್‌ನಲ್ಲಿ 22 ಲಕ್ಷಕ್ಕೂ ಅಧಿಕ ಜನ ಸಿನಿಮಾವನ್ನು ಉಚಿತವಾಗಿ ನೋಡಿದರು. ನಾವು ಇದಕ್ಕೆ ಯಾವುದೇ ಹೆಚ್ಚಿನ ಪ್ರಚಾರ ಮಾಡಿಲ್ಲ. ಶೀಘ್ರದಲ್ಲೇ ಯುಟ್ಯೂಬ್‌ನಲ್ಲಿ ಸಿನಿಮಾ ಹಾಕುವ ಅಲೆ ಏಳಲಿದೆ. ಇದಕ್ಕೆ ಪ್ರೇಕ್ಷಕರು ತಮಗಿಷ್ಟವಾದಷ್ಟು ಹಣ ನೀಡಿದರೆ ಅದು ನಿರ್ಮಾಪಕನಿಗೆ, ನಿರ್ದೇಶಕನಿಗೆ ಪ್ರೋತ್ಸಾಹಿಸಿದಂತೆ ಆಗುತ್ತದೆ’ ಎಂದಿದ್ದಾರೆ.
ಒಟಿಟಿ ಎಂಬ ಸವಾಲು:
ಒಟಿಟಿ ವೇದಿಕೆಗಳು ಪ್ರಸ್ತುತ ಸಿನಿಮಾಗಳನ್ನು ಮೂರು ವಿಧಗಳಲ್ಲಿ ಪಡೆಯುತ್ತಿವೆ. ಒಂದು–ಬಿಡುಗಡೆಗೂ ಮುನ್ನವೇ ಕೆಲ ಸ್ಟಾರ್ ನಟರ ಸಿನಿಮಾಗಳು ಖರೀದಿಸಲ್ಪಡುತ್ತಿವೆ. ಉದಾಹರಣೆಗೆ ಶೂಟಿಂಗ್ ಹಂತದಲ್ಲಿರುವ ‘ಕಾಂತಾರ’ ಸಿನಿಮಾದ ಪ್ರೀಕ್ವೆಲ್ ಅನ್ನು ಅಮೆಜಾನ್ ಪ್ರೈಂ ಈಗಾಗಲೇ ಖರೀದಿಸಿದೆ. ಎರಡು–ಇನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಹೆಚ್ಚಿನ ಪ್ರೇಕ್ಷಕರನ್ನು ಸೆಳೆದ, ಬಜ್ ಸೃಷ್ಟಿಸಿದ ಸಿನಿಮಾವನ್ನು ‘ಪೇ ಪರ್ ವ್ಯೂ’ ಆಧಾರದಲ್ಲಿ ಖರೀದಿಸಲಾಗುತ್ತಿದೆ. ಮೂರು– ರೆಂಟ್ (ಬಾಡಿಗೆ) ಆಧಾರದಲ್ಲಿ ಸಿನಿಮಾಗಳನ್ನು ಹಾಕುವ ಹೊಸ ಮಾದರಿಯೂ ಬಂದಿದೆ. ವಾರ್ಷಿಕ ಚಂದಾದಾರಿಕೆ ನೀಡಿ ಅದರ ಮೇಲೆ ಸಿನಿಮಾಗೂ ಬಾಡಿಗೆ ನೀಡುವ ಈ ಮಾದರಿ ನಿರ್ಮಾಪಕರ ಮೂಗಿಗೆ ತುಪ್ಪ ಸವರುವ ಕೆಲಸವಷ್ಟೇ. ಈ ಒಟಿಟಿ ಕಂಪನಿಗಳನ್ನು ಮೆಚ್ಚಿಸಿ ಸಿನಿಮಾ ಹಾಕಿಸಿಕೊಳ್ಳುವುದು ಕನ್ನಡ ಚಿತ್ರರಂಗಕ್ಕೆ ಸವಾಲಿನ ವಿಷಯವೇ ಆಗಿದೆ.
ಸಿನಿಮಾಗಳನ್ನು ಕೊಲ್ಲುವ ‘ಬಜ್’
‘ಬಹಳ ಶ್ರದ್ಧೆ, ಆಸಕ್ತಿಯಿಂದ ಮಾಡಿದ ನೂರಾರು ಸಿನಿಮಾಗಳು ವೇದಿಕೆ ಸಿಗದೆ ಹಾರ್ಡ್‌ಡ್ರೈವ್‌ಗಳಲ್ಲಿ ಕೂತಿವೆ. ಕಂಟೆಂಟ್ ಸಿನಿಮಾಗಳಿಗೆ ಬೇರೆಯೇ ಪ್ರೇಕ್ಷಕರಿದ್ದಾರೆ. ಇವರನ್ನು ತಲುಪುವುದು ಕಷ್ಟವೇ. ಯುಟ್ಯೂಬ್‌ನಲ್ಲಿ ‘ಧೂಮಂ’ ನೋಡಿದ 22 ಲಕ್ಷ ಜನರಲ್ಲಿ ಶೇಕಡ 30ರಷ್ಟು ಜನ ಬುಕ್‌ಮೈ ಶೋ ಕ್ಲಿಕ್ ಮಾಡಿದ್ದರೆ, ಈ ಸಿನಿಮಾ ಬಾಕ್ಸ್ ಆಫೀಸ್ ಹಿಟ್ ಆಗುತ್ತಿತ್ತು. //‘ಸಿನಿಮಾ ಚೆನ್ನಾಗಿಲ್ಲವಂತೆ’ ಎಂಬ ಬಜ್ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಬರದಂತೆ ಮಾಡಿತು.// ‘ಬಜ್’ ಎನ್ನುವ ಶಬ್ದ ಹಲವು ಸಿನಿಮಾಗಳನ್ನು ಕೊಲ್ಲುತ್ತಿದೆ. ಹೊಂಬಾಳೆ ‘ಧೂಮಂ’ ಸಿನಿಮಾವನ್ನು ಯೂಟ್ಯೂಬ್‌ನಲ್ಲಿ ಹಾಕಲು ನಿರ್ಧರಿಸಿತು. ಅವರಿಗೆ ಆ ನಷ್ಟವನ್ನು ತಡೆದುಕೊಳ್ಳುವ ಶಕ್ತಿಯಿದೆ. ಆದರೆ ಇಂತಹ ಅವಕಾಶವಿಲ್ಲದ ಸಿನಿಮಾ ನಿರ್ಮಾಪಕರು ಇದ್ದಾರೆ’ ಎನ್ನುತ್ತಾರೆ ಪವನ್.
‘ಒಟಿಟಿ ಪೂರ್ಣವಾಗಿ ಖಾಸಗಿ ಕಂಪನಿಗಳು. ಸಿನಿಮಾ ತೆಗೆದುಕೊಳ್ಳುವುದು ಅಥವಾ ಬಿಡುವುದು ಅವರ ನಿರ್ಧಾರ. ಅವರಿಗೆ ಒತ್ತಡ ಹಾಕಲು ಸಾಧ್ಯವೇ ಇಲ್ಲ. ಹೀಗಿರುವಾಗ ಚಿತ್ರಗಳನ್ನು ಪ್ರೇಕ್ಷಕರ ಎದುರಿಗೆ ಇಡಲು ಪ್ರಸ್ತುತ ಇರುವ ಅತ್ಯುತ್ತಮ ವೇದಿಕೆ ಯೂಟ್ಯೂಬ್. ಇದನ್ನು ಹಲವರಿಗೆ ಸಲಹೆಯಾಗಿ ನೀಡಿದ್ದೇನೆ. ಸಿನಿಮಾದ ಜೊತೆಗೆ ಯುಪಿಐ ಕ್ಯೂಆರ್ ಕೋಡ್ ಹಾಕಿ. ಸಿನಿಮಾ ಇಷ್ಟವಾದರೆ ತಮಗಿಷ್ಟವಾದಷ್ಟು ಹಣ ನೀಡಿ ಎಂದು //ಕೇಳಿ// ಎಂದಿದ್ದೇನೆ. ಇದರಿಂದ ಆ ನಿರ್ದೇಶಕ, ನಿರ್ಮಾಪಕ ಇನ್ನೊಂದು ಸಿನಿಮಾ ಮಾಡಲು ಸಾಧ್ಯ. ಏಕೆಂದರೆ ಸಿನಿಮಾ ನಿರ್ಮಾಣ ದುಬಾರಿಯಾಗಿದೆ. ಸಣ್ಣ ಸಿನಿಮಾಗೂ ₹30 ಲಕ್ಷ ಖರ್ಚಾಗುತ್ತದೆ. ಇದನ್ನು ಹಿಂಪಡೆಯುವುದಾದರೂ ಹೇಗೆ?. ‘ಧೂಮಂ’ ಸಿನಿಮಾವನ್ನು ಯುಟ್ಯೂಬ್‌ನಲ್ಲಿ ನೋಡಿದ 20 ಲಕ್ಷ ಮಂದಿ ಕನಿಷ್ಠ ₹100 ರೂಪಾಯಿ ನೀಡಿದರೆ ₹20 ಕೋಟಿಯಾಗುತ್ತದೆ. ಆದರೆ ಹೊಂಬಾಳೆ ಕ್ಯೂಆರ್ ಕೋಡ್ ಹಾಕಿಲ್ಲ. ಅದರ ಅವಶ್ಯಕತೆಯೂ ಅವರಿಗೆ ಇರಲಿಲ್ಲ. ಆದರೆ ಬೇರೆ ಸಿನಿಮಾ ನಿರ್ದೇಶಕ, ನಿರ್ಮಾಪಕರಿಗೆ ಅವಶ್ಯ’ ಎಂದು ಪವನ್ ಹೇಳಿದರು.
‘ಕ್ಯೂಆರ್ ಕೋಡ್ ಎಂದರೆ ಸೋತಿದ್ದೇವೆ ಎಂದಲ್ಲ’
‘ಹೊಂದಿಸಿ ಬರೆಯಿರಿ’ ಸಿನಿಮಾವು ಒಟಿಟಿಯಲ್ಲಿ ಇರುವಾಗಲೇ ಯುಟ್ಯೂಬ್‌ಗೆ ಹಾಕಿ ಪ್ರಯೋಗ ನಡೆಸಿದವರು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ‘ನಿರೀಕ್ಷಿಸಿದ ಮಟ್ಟಕ್ಕೆ ವ್ಯವಹಾರ ಆಗಲಿಲ್ಲ ಎಂದರೂ ಸಿನಿಮಾವನ್ನು ಜನರಿಗೆ ತಲುಪಿಸಬೇಕು ಎನ್ನುವ ಇಚ್ಛೆ ಹಲವರಿಗೆ ಇರುತ್ತದೆ. ನಮ್ಮ ಸಿನಿಮಾವನ್ನು ಕೇವಲ 38 ಸಾವಿರ ಜನ ಚಿತ್ರಮಂದಿರಗಳಲ್ಲಿ ನೋಡಿದ್ದರು. ನಂತರದಲ್ಲಿ ಸಿನಿಮಾವನ್ನು ನಾವು ಅಮೆಜಾನ್‌ಗೆ ನೀಡಿದೆವು. ಇದು ದೊಡ್ಡಮಟ್ಟದಲ್ಲಿ ಜನರನ್ನು ತಲುಪಿತು. ಪ್ರೈಂನಲ್ಲಿ ಇಲ್ಲಿಯವರೆಗೆ ₹55–60 ಲಕ್ಷ ಹಣ ಬಂದಿದೆ. ಭಾರತದಲ್ಲಿರುವ ಮತ್ತು ಯುಎಸ್, ಯುಕೆ ಹೊರತುಪಡಿಸಿ ಇತರೆ ದೇಶದಲ್ಲಿರುವ ನಮ್ಮ ಜನರಿಗೆ ಸಿನಿಮಾವನ್ನು ವೀಕ್ಷಿಸಲು ಆಗುತ್ತಿರಲಿಲ್ಲ. ಹೀಗಾಗಿ ಮೇ 17ರಂದು ಸಿನಿಮಾವನ್ನು ಯುಟ್ಯೂಬ್‌ಗೆ ಹಾಕಿದೆವು. ಅಲ್ಲಿ ಯುಪಿಐ ಕೋಡ್ ಹಾಕಿದೆ. ಸಿನಿಮಾ ಇಷ್ಟವಾಗಿ ಟಿಕೆಟ್ ದರಕ್ಕೆ ಸೂಕ್ತವಾದರೆ ಪಾವತಿಸಲಿ ಎಂದು ಕೋಡ್ ಹಾಕಿದ್ದೆ. ಯುಟ್ಯೂಬ್‌ನಲ್ಲಿ 13 ಲಕ್ಷ ಜನರು ಸಿನಿಮಾ ನೋಡಿದ್ದು, ಎರಡು ತಿಂಗಳಲ್ಲಿ ₹1.18 ಲಕ್ಷ ಬಂದಿದೆ. ಕ್ಯೂಆರ್ ಕೋಡ್ ಮೂಲಕ ₹30 ಸಾವಿರ ಬಂದಿದೆ. ಸ್ಕ್ಯಾನ್ ಕೋಡ್ ಬಗ್ಗೆ ಇಡೀ ಚಿತ್ರತಂಡ ಮಾತನಾಡಬೇಕು. ಸಿನಿಮಾ ಹೆಚ್ಚಿನ ಜನಕ್ಕೆ ತಲುಪಿದರೆ ನನ್ನ ಮುಂದಿನ ಸಿನಿಮಾಗೆ ಸಹಾಯವಾಗಲಿದೆ ಎನ್ನುವ ಉದ್ದೇಶ ಯುಟ್ಯೂಬ್‌ಗೆ ಹಾಕುವುದರ ಹಿಂದಿತ್ತು. ಕ್ಯೂಆರ್ ಕೋಡ್ ಹಾಕಿದ್ದೇವೆ ಎಂದರೆ ಸೋತಿದ್ದೇವೆ ಎಂದಲ್ಲ. ಹಾಕುವುದರಲ್ಲಿ ಅವಮಾನವೂ ಇಲ್ಲ’ ಎನ್ನುತ್ತಾರೆ ಅವರು.
‘ಒಟಿಟಿಯಲ್ಲಿ ಕನ್ನಡ ಸಿನಿಮಾಗಳಿಗೆ ಮಾರುಕಟ್ಟೆಯೇ ಇಲ್ಲ. ನನ್ನ ಸಿನಿಮಾ ಬಿಡುಗಡೆ ಮಾಡಿ ಒಂದು ವರ್ಷ ಕಾಯ್ದೆ. ಈ ರೀತಿಯ ಕಂಟೆಂಟ್‌ಗಳನ್ನು ನಾವು ಹಾಕುವುದಿಲ್ಲ ಎಂದು ಕೆಲವರು ತಿರಸ್ಕರಿಸಿದರು. ನಮ್ಮಲ್ಲಿರುವ ಕೆಲ ಒಟಿಟಿಯವರು ಕೇಳಿದರು. ಆದರೆ ಅವರಿಗೆ ಚಂದಾದಾರರು ಹೆಚ್ಚಿಲ್ಲ. ಅವರು ಕೊಡುವ ಹಣವೂ ಅಲ್ಪವಾಗಿರುತ್ತದೆ. ಹೀಗಾಗಿ ಯುಟ್ಯೂಬ್‌ನಲ್ಲಿ ಸಿನಿಮಾ ಹಾಕಿ ಕ್ಯೂಆರ್‌ಕೋಡ್ ಹಾಕಿದೆ. ನನ್ನ ಸಿನಿಮಾದ ಪ್ರೇಕ್ಷಕರು ಇರುವುದೇ ಗ್ರಾಮೀಣ ಭಾಗದಲ್ಲಿ. ಅವರು ಯಾರೂ ಹೆಸರಾಂತ ಒಟಿಟಿ ಕಂಪನಿಗಳ ಚಂದಾದಾರರಲ್ಲ. ಸಾಮಾನ್ಯ ಜನರ ಮೊಬೈಲ್‌ನಲ್ಲೂ ಯುಟ್ಯೂಬ್ ಇರುತ್ತದೆ. ಸಿನಿಮಾ ನೋಡಿ ಇಷ್ಟಪಟ್ಟವರು ಕ್ಯೂಆರ್ ಕೋಡ್ ಮೂಲಕ ಸುಮಾರು ₹50 ಸಾವಿರ ಹಣ ಕಳುಹಿಸಿದ್ದಾರೆ’ ಎನ್ನುತ್ತಾರೆ ನಿರ್ದೇಶಕ ಜೀವಾ ನವೀನ್.
ಪ್ರಸ್ತುತ ನಾವು ಅಂತರರಾಷ್ಟ್ರೀಯ ಸ್ಟುಡಿಯೊಗಳ ಮುಂದೆ ಬೇಡುವ ಸ್ಥಿತಿ ಬಂದಿದೆ. ನಮ್ಮ ನೆಲದ ಸಿನಿಮಾವನ್ನು ನಮ್ಮವರಿಗೆ ತೋರಿಸಲು ಹೊರದೇಶದಲ್ಲಿರುವವರ ಒಪ್ಪಿಗೆ ಬೇಕು. ಈ ಸ್ಥಿತಿಗೆ ನಮ್ಮನ್ನು ನಾವೇ ತಂದುಕೊಂಡಿದ್ದೇವೆ ಎನ್ನುವುದು ದುರದೃಷ್ಟಕರ. ಈ ವ್ಯವಸ್ಥೆಯನ್ನು ಪ್ರೇಕ್ಷಕರು ಒಡೆಯಬೇಕಿದೆ. ಕರ್ನಾಟಕಕ್ಕೆ ತನ್ನದೇ ನೆಲದಲ್ಲಿ ಬೆಳೆದ ಒಟಿಟಿಯೊಂದರ ಅವಶ್ಯಕತೆ ಇದೆ–ಪವನ್ ಕುಮಾರ್ ನಿರ್ದೇಶಕ
‘ಬಾಡಿಗೆ ನೀಡಿ ಜನ ನೋಡುವುದಿಲ್ಲ’
ಒಟಿಟಿಯ ಹೊಸ ಮಾದರಿ ಬಗ್ಗೆ ಮಾತನಾಡಿದ ನಿರ್ದೇಶಕ ಮಂಸೋರೆ ‘ಒಟಿಟಿ ವೇದಿಕೆಗಳಲ್ಲಿ ‘19.20.21’ ಸಿನಿಮಾಗೆ ಜಾಗ ಸಿಗದೇ ಇದ್ದಾಗ ‘ಡಿಜಿಟಲ್ ಡಿಸ್ಟ್ರಿಬ್ಯೂಷನ್’ ಮೊರೆ ಹೋಗಿದ್ದೆವು. ಅದರಿಂದ ಅಷ್ಟೇನು ಹಣ ಬರಲಿಲ್ಲ. ಏಕೆಂದರೆ ಇವುಗಳಿಗೆ ಒಂದು ನಿಗದಿತ ಪ್ರೇಕ್ಷಕರು ಇಲ್ಲ. ‘19.20.21’ ಸಿನಿಮಾವನ್ನು ಬಾಡಿಗೆ ಆಧಾರದ ಮೇಲೆ ಯುಎಸ್ ಯುಕೆ ಪ್ರೈಂಗೆ ಹಾಕಿದ್ದೆವು. ಅಲ್ಲಿ ಹೆಚ್ಚೆಂದರೆ ಐನೂರು ಜನ ಕನ್ನಡಿಗರು ನೋಡಿರಬಹುದು. ಅದೇ ‘ಆ್ಯಕ್ಟ್ 1978’ ಸಿನಿಮಾವನ್ನು ಲಕ್ಷಾಂತರ ಜನರು ನೋಡಿದ್ದರು. ಅಲ್ಲಿರುವವರೇ ಬಾಡಿಗೆ ನೀಡಿ ಸಿನಿಮಾವನ್ನು ನೋಡುತ್ತಿಲ್ಲ ಎಂದ ಮೇಲೆ ನಮ್ಮವರು ನೋಡಿಯಾರೇ? ಸಿನಿಮಾ ಟಿಕೆಟ್ ದರ ಹೆಚ್ಚು ಎಂದು ದೂರುವವರು ಯುಟ್ಯೂಬ್‌ನಲ್ಲಿ ₹100ಕ್ಕೆ ಸಿನಿಮಾ ಬಾಡಿಗೆಗೆ ಕೊಟ್ಟರೂ ನೋಡುವುದಿಲ್ಲ ಎನ್ನುವುದು ವಾಸ್ತವ. ಯುಟ್ಯೂಬ್‌ನಲ್ಲಿ ಸಿನಿಮಾ ಹಾಕಲು ಆ ಚಾನಲ್‌ಗೆ ಹೆಚ್ಚಿನ ಚಂದಾದಾರರು ಇರಬೇಕು. ಯುಟ್ಯೂಬ್ ಎಲ್ಲರಿಗೂ ಸುಲಭವಾಗಿ ಸಿಗುವ ಮಾಧ್ಯಮ. ಹೀಗಾಗಿ ಇದರಲ್ಲಿ ಸಿನಿಮಾ ಬಿಡುಗಡೆಯೂ ಸುಲಭ ಆದರೆ ಆದಾಯ ಬಹಳ ಕಡಿಮೆ. ನಮ್ಮ ಎರಡೂ ಸಿನಿಮಾಗಳನ್ನೂ 2–3 ತಿಂಗಳಲ್ಲಿ ಯುಟ್ಯೂಬ್‌ಗೆ ಹಾಕಲಿದ್ದೇವೆ’ ಎನ್ನುತ್ತಾರೆ.
‘ಲೈಕ್ಸ್ ಬಂದಷ್ಟು ಜನ ನೋಡಿಲ್ಲ’
‘ರಕ್ಷಿತ್ ಶೆಟ್ಟಿ ಅವರು ‘ಏಕಂ’ ವೆಬ್ ಸರಣಿಯನ್ನು ಘೋಷಿಸಿದಾಗ ಅದಕ್ಕೆ ಬಂದ ಬೆಂಬಲವು ಟಿಕೆಟ್ ಮಾರಾಟವಾಗಿ ಪರಿವರ್ತನೆ ಹೊಂದಿಲ್ಲ. ನಿರೀಕ್ಷೆ ಮಾಡಿದಷ್ಟು ಜನ ₹149 ಪಾವತಿಸಿ ಸರಣಿ ನೋಡಿಲ್ಲ. ಇದಕ್ಕೆ ಜನರಿಗೂ ಸಮಯ ನೀಡಬೇಕಾಗುತ್ತದೆ. ಒಟಿಟಿ ಕಂಪನಿಗಳಿಗೆ ತೋರಿಸಿ ಅವರ ಪ್ರತಿಕ್ರಿಯೆಗಾಗಿ ಕಾಯುತ್ತಾ ಮೂರು ವರ್ಷ ‘ಏಕಂ’ ಹಿಡಿದು ಕುಳಿತಿದ್ದೆವು. ಕೊನೆಗೆ ನಮ್ಮದೇ ಪೋರ್ಟಲ್ ಸಿದ್ಧಪಡಿಸಿ ಜನರ ಎದುರಿಗೆ ಇರಿಸಿದೆವು. ಇಂತಹ ಕಂಟೆಂಟ್‌ಗೂ ಪ್ರೇಕ್ಷಕರು ಇದ್ದಾರೆ ಎನ್ನುವ ಭರವಸೆಯನ್ನು ಕೆಲವರು ‘ಏಕಂ’ ನೋಡುವ ಮೂಲಕ ಮೂಡಿಸಿದ್ದಾರೆ. ಸದ್ಯ ನಮ್ಮ ಕಥೆಗಳನ್ನು ನಮ್ಮವರಿಗೇ ತಲುಪಿಸಲು ಕಷ್ಟಪಡುತ್ತಿದ್ದೇವೆ. ನಮ್ಮ ರೀತಿ ಪ್ರತ್ಯೇಕ ಪೋರ್ಟಲ್ ಸೃಷ್ಟಿಸುತ್ತಾ ಕುಳಿತರೆ ಪ್ರಯೋಜನವಾಗುವುದಿಲ್ಲ. ಅದರಲ್ಲಿ ಅರ್ಥವೂ ಇಲ್ಲ. ಇದಕ್ಕೆ ಸಾಕಷ್ಟು ಪರಿಶ್ರಮ ಬೇಕು. ಜನರೂ ಈ ರೀತಿ ಪ್ರತ್ಯೇಕವಾಗಿ ಹಣ ಪಾವತಿಸುತ್ತಾ ನೋಡಲು ಬಯಸುವುದಿಲ್ಲ. ತೆಲುಗಿನಲ್ಲಿರುವಂತೆ ‘ಆಹಾ’ ರೀತಿ ವೇದಿಕೆ ಸೃಷ್ಟಿಯಾಗಬೇಕು. ಕೇರಳದಲ್ಲೂ ಈ ರೀತಿ ಸರ್ಕಾರವೇ ವೇದಿಕೆ ಸೃಷ್ಟಿಸಿದೆ. ನಮ್ಮಲ್ಲೂ ಇಂತಹ ವೇದಿಕೆ ಸೃಷ್ಟಿಯಾಗುವ ಅವಶ್ಯಕತೆ ಬಹಳಷ್ಟಿದೆ’ ಎನ್ನುತ್ತಾರೆ ನಿರ್ದೇಶಕ ಸುಮಂತ್ ಭಟ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.