ADVERTISEMENT

ಅಮೆರಿಕದಿಂದ ಇಂಗ್ಲೆಂಡಿಗೆ ಕೂಡಿ ಬಂತು ಕಾಲ...

ಕೆ.ಎಂ.ಸಂತೋಷ್‌ ಕುಮಾರ್‌
Published 17 ಜನವರಿ 2020, 5:51 IST
Last Updated 17 ಜನವರಿ 2020, 5:51 IST
ನಾಗತಿಹಳ್ಳಿ ಚಂದ್ರಶೇಖರ್‌
ನಾಗತಿಹಳ್ಳಿ ಚಂದ್ರಶೇಖರ್‌   
""
""

ನನ್ನನ್ನು ಮೇಷ್ಟ್ರು ಅಂತ ಕರೀತಾರೆಂದು ನಾನು ಸಿನಿಮಾದಲ್ಲೂ ಪಾಠ ಮಾಡಲು ಹೋದರೆ ಪ್ರೇಕ್ಷಕರು ನನ್ನನ್ನು ಮನೆಗೆ ಕಳಿಸ್ತಾರೆ. ಸೂಚ್ಯವಾಗಿ ಹೇಳಿ ಸುಮ್ಮನಾಗಬೇಕು. ಈಗ ಎಲ್ರಿಗೆ ಎಲ್ಲವೂ ಗೊತ್ತಿದೆ. ಅಥವಾ ಆ ಭ್ರಮೆ ಇದೆ ಎನ್ನುತ್ತಾರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌.

ಕನ್ನಡ ಚಿತ್ರರಂಗದಲ್ಲಿ ಎಲ್ಲರಿಂದಲೂ ಪ್ರೀತಿಯಿಂದ ‘ಮೇಷ್ಟ್ರು’ಎಂದು ಕರೆಸಿಕೊಳ್ಳುವ ಏಕೈಕ ವ್ಯಕ್ತಿ ಎಂದರೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌. ‘ಟೆಂಟ್‌’ ಸಿನಿಮಾ ಶಾಲೆಯ ಮೂಲಕ ಅನೇಕ ಕಲಾವಿದರು, ತಂತ್ರಜ್ಞರನ್ನು ಚಿತ್ರರಂಗಕ್ಕೆ ಕೊಟ್ಟಿದ್ದಾರೆ. ಈಗಲೂ ಕೊಡುತ್ತಿದ್ದಾರೆ. ಸಾಹಿತ್ಯ ಕೃಷಿ ಜತೆಗೆ ಸಿನಿಮಾಗಳಿಗೂ ಆ್ಯಕ್ಷನ್‌ ಕಟ್‌ ಹೇಳುವುದು ಅವರ ನೆಚ್ಚಿನ ವೃತ್ತಿ. ‘ಅಮೆರಿಕಾ ಅಮೆರಿಕಾ’, ‘ಅಮೃತಧಾರೆ’ಯಂತಹ ಯಶಸ್ವಿ ಚಿತ್ರಗಳನ್ನು ನೀಡಿದ್ದಾರೆ. ಇವರ ನಿರ್ದೇಶನದ ‘ಇಂಡಿಯಾ ವರ್ಸಸ್‌ ಇಂಗ್ಲೆಂಡ್‌’ ಚಿತ್ರ ಇದೇ ತಿಂಗಳ 24ರಂದು ತೆರೆಕಾಣುತ್ತಿದೆ. ಇದು ಇವರ ನಿರ್ದೇಶನದಲ್ಲಿ ಬರುತ್ತಿರುವ 15ನೇ ಚಿತ್ರ. ಈ ಚಿತ್ರದ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ಅವರು ‘ಸಿನಿಮಾ ಪುರವಣಿ’ ಜೊತೆಗಿನ ಸಂದರ್ಶನದಲ್ಲಿ ತೆರೆದಿಟ್ಟಿದ್ದಾರೆ.

*ಅಮೆರಿಕ ಬೆನ್ನು ಹತ್ತಿದ್ದವರು ಇದ್ದಕ್ಕಿದ್ದಂತೆ ಇಂಗ್ಲೆಂಡ್ ಬೆನ್ನೇರಿ ಹೊರಟ ಗುಟ್ಟೇನು?

ADVERTISEMENT

ಒಬ್ಬ ಮನುಷ್ಯನ ಬೆನ್ನು ಹತ್ತುವುದಕ್ಕಿಂತ ಒಂದು ದೇಶದ ಬೆನ್ನು ಹತ್ತುವುದು ಸೃಜನಶೀಲರಿಗೆ ಲಾಭದಾಯಕ. ಅಲ್ಲಿ ನಮಗೆ ಮನುಷ್ಯರು, ಅವರ ಸಕಲೆಂಟು ಸಂಭ್ರಮ, ಗೋಳು ಸಿಗುತ್ತವೆ. ಚರಿತ್ರೆ, ಎಕಾನಮಿ, ವಲಸೆ, ಯುದ್ಧ, ಆಕ್ರಮಣ, ವಸಾಹತುಶಾಹಿ, ಅಧ್ಯಾತ್ಮ, ಕಲೆ ಹೀಗೆ ಸಾವಿರಾರು ಸಂಗತಿಗಳು. ನೋಡಲು ಪುಟ್ಟ ದ್ವೀಪವಾದರೂ ಇಂಗ್ಲೆಂಡ್ ಒಂದು ಕಾಲಕ್ಕೆ ಹಲವು ರಾಷ್ಟ್ರಗಳನ್ನು ಆಳಿದೆ. ಸಾಹಿತ್ಯದಲ್ಲಿ ಈ ಬಗ್ಗೆ ಹಲವು ಕೃತಿಗಳು ಬಂದಿವೆ. ಕನ್ನಡ ಸಿನಿಮಾದಲ್ಲಿ ಬಂದಿಲ್ಲ. ಇಂಗ್ಲೆಂಡ್ ಕುರಿತು ಸಿನಿಮಾ ಮಾಡಲು ಹೊಂಚು ಹಾಕುತ್ತಿದ್ದೆ. ಈಗ ಕಾಲ ಕೂಡಿ ಬಂತು.

*ಚಿತ್ರದ ಕಥೆ ಹುಟ್ಟಿದ್ದು ಹೇಗೆ?

ಇದೇ ಪ್ರಶ್ನೆಯನ್ನು ನಾನು ನನ್ನ ಮಗಳು ಕನಸು ಪುಟ್ಟಿಗೆ ಕೇಳಿದ್ದೆ. ಅಲ್ಲಿಗೆ ಹೋದ ಭಾರತೀಯರನೇಕರ ಮನಸ್ಸಿನಲ್ಲಿ ಒಂದು ಬಗೆಯ ಸಿಟ್ಟು ಮತ್ತು ಸ್ವಾಭಿಮಾನದಿಂದ ಕಾಡುವ ಪ್ರಶ್ನೆಯೊಂದಿದೆ. ಅದೇನೆಂದರೆ ಇವರು ನಮ್ಮನ್ನು ಲೂಟಿಗೈದರು. ಒಡೆದು ಆಳಿದರು. ಆದರೆ ಇದು ಪಾರ್ಶ್ವಸತ್ಯ. ಅವರು ಬಂದಿದ್ದರಿಂದ ನಾನಾ ಬಗೆಯ ಲಾಭಗಳೂ ಆಗಿವೆ. ಕನಸು ಅಲ್ಲಿನ ಮ್ಯೂಸಿಯಂಗಳನ್ನು ನೋಡುವಾಗ ಈ ಕಥೆಯ ಮೂಲ ಧಾತು ಹುಟ್ಟಿದಂತಿದೆ. ಅದರ ಫಸ್ಟ್ ಡ್ರಾಫ್ಟ್‌ ಓದಿ ನನಗೆ ಬಹಳ ಖುಷಿಯಾಯಿತು. ವಿಸ್ತರಿಸು ಎಂದೆ. ನೀಳ್ಗತೆಯಿಂದ ಕಾದಂಬರಿಯಾಯಿತು. ಅದರ ಹೆಸರು ಅಕ್ಷಾಂಶ ರೇಖಾಂಶ.

*ಮಗಳು ಬರೆದ ಕಥೆಯನ್ನು ತೆರೆಗೆ ತರುವ ಆಲೋಚನೆ ಬಂದಿದ್ದು ಯಾವಾಗ?

ಈ ಆಲೋಚನೆ ಹುಟ್ಟಿ ಬೆಳೆದದ್ದೂ ಕೂಡಾ ಇಂಗ್ಲೆಂಡಿನಲ್ಲೇ. ಅಲ್ಲಿ ‘ಇಷ್ಟಕಾಮ್ಯ’ ಹಲವು ಹೌಸ್‍ಫುಲ್ ಷೋಗಳನ್ನು ಕಂಡಿತು. ವಿಪರ್ಯಾಸವೆಂದರೆ ಇಲ್ಲಿ ವಿತರಕರೇ ಅದರ ಕುತ್ತಿಗೆ ಹಿಚುಕಿದ್ದರು. ಅಲ್ಲಿ ಸಿನಿಮಾ ನೋಡಿದ ಅನೇಕ ಅನಿವಾಸಿ ಕನ್ನಡಿಗರು ಇಲ್ಲೊಂದು ಸಿನಿಮಾ ಮಾಡೋಣ ಎಂದರು. ‘ಇಷ್ಟಕಾಮ್ಯ’ ನಿರ್ಮಿಸಿದ್ದ ಶಂಕರೇಗೌಡರು ಇಲ್ಲಿಂದ ಕೈ ಜೋಡಿಸಿದರು. ಜತೆಗೆ ನನ್ನ ಟೆಂಟ್ ಸಿನಿಮಾದ ವಿದ್ಯಾರ್ಥಿಗಳ ಪಡೆ ಸಾಥ್‌ ನೀಡಿತು.

ನನ್ನ ಬಹಳಷ್ಟು ಸಿನಿಮಾ, ಸಿನಿಮಾಗಳ ತಯಾರಿ ತುಂಬಾ ಅನ್‍ಕನ್‍ವೆನ್ಶನಲ್ ಆಗಿರುತ್ತವೆ. ಹೊಸ ಮುಖಗಳ ದಂಡೇ ಇರುತ್ತೆ. ಹೊಸ ಕತೆ, ಹೊಸ ಕತೆಗಾರ್ತಿ, ಬಹುತೇಕ ಹೊಸ ನಿರ್ಮಾಪಕರು... ಹೀಗೆ ಹೊಸ ಉತ್ಸಾಹಿ ಪರಿಸರ ನಿರ್ಮಾಣಗೊಂಡಿತು. ನನ್ನ ಜತೆಗಿರುವ ಟೆಂಟ್ ಸಿನಿಮಾ ಶಾಲೆ ನನ್ನ ಪ್ರಜ್ಞೆಯ ಭಾಗ. ನಾನು ಚಿರಯುವಕನಾಗಿ ಚಿಂತಿಸಲು ಈ ಶಾಲೇನೇ ಕಾರಣ. ಇಲ್ಲಿ ಉತ್ಸಾಹದ ಕಾರಂಜಿಗಳಿವೆ. ಸಶಸ್ತ್ರ ಯೋಧರಂತೆ ಮುನ್ನುಗ್ಗುತ್ತಿದ್ದಾರೆ. ನಿಜ ಹೇಳಬೇಕೆಂದರೆ ನನ್ನ ಈ ಶಾಲೆಯಲ್ಲಿರುವ ಟ್ಯಾಲೆಂಟ್ ಬ್ಯಾಂಕ್‍ಗೆ ವರ್ಷಕ್ಕೆ ಮೂರು ಸಿನಿಮಾ ಮಾಡಬಹುದು. ಆದರೆ, ಕಾಡುವ ಕತೆಗಳದೇ ಸಮಸ್ಯೆ. ಅವು ವರ್ಷಗಟ್ಟಳೆ ಟೈಂ ತಿನ್ನುತ್ತವೆ.

ಮಾನ್ವಿತಾ ಹರೀಶ್‌

*ಖಳನಾಯಕನಾಗಿ ಮಿಂಚುತ್ತಿದ್ದ ವಸಿಷ್ಠ ಸಿಂಹ ಅವರನ್ನು ನಾಯಕನಾಗಿ ಹೇಗೆ ತೆರೆ ಮೇಲೆ ತಂದಿದ್ದೀರಿ?

ಇದೊಂದು ಸಂಕ್ರಮಣ. ಆತ ಒಬ್ಬ ಟೆರಿಬಲ್ ಆ್ಯಕ್ಟರ್. ಹೆಗಲ ಮೇಲೆ ಮಚ್ಚು ಲಾಂಗು ಹೊತ್ಕೊಂಡು ಬಸವಳಿಯುತ್ತಿದ್ದ. ಈತನ ಪ್ರತಿಭೆಗೆ ಭಿನ್ನ ಪಾತ್ರಗಳಿದ್ದರೆ ಚೆನ್ನ ಅನ್ನಿಸಿತು. ಇಲ್ಲೂ ಕೂಡಾ ಆತ ಟಿಪಿಕಲ್ ಲವ್ವರ್ ಬಾಯ್ ಅಲ್ಲ; ಆತ ಒಬ್ಬ ವ್ಲಾಗರ್. ನನ್ನಂತೆ ದೇಶ ಸುತ್ತುವ ಅಲೆಮಾರಿ. ಇದು ಬರೀ ಪ್ರೀತಿ ಪ್ರೇಮಕ್ಕೆ ಸೀಮಿತವಾದ ಕತೆ ಅಲ್ಲ. ಅಪರಾಧ, ದೇಶ ಭಕ್ತಿಯ ಜಿಜ್ಞಾಸೆ ಏನೇನೋ ಇವೆ. ಹಾಗಾಗಿ ನನಗೆ ನನ್ನ ನಾಯಕ ಬರೇ ರೊಮ್ಯಾಂಟಿಕ್ ಆಗಿರಬೇಕಿರಲಿಲ್ಲ. ಆತನಿಗೆ ಸೂಚ್ಯವಾಗಿ ಅಭಿನಯಿಸಲು ಬರುತ್ತೆ. ಒಳ್ಳೆಯ ಶಾರೀರ ಬೇರೆ. ಗಾಯಕ ಕೂಡಾ. ತನ್ನ ಪಾತ್ರ ಅರಿತು ಶ್ರದ್ಧೆಯಿಂದ ಅಭಿನಯಿಸಿದ್ದಾನೆ.

*ಮಾನ್ವಿತಾ ಹರೀಶ್ ಪಾತ್ರವೇನು?

ಸಾಮಾನ್ಯವಾಗಿ ನನ್ನ ಸಿನಿಮಾಗಳಲ್ಲಿ ನಾಯಕ - ನಾಯಕಿಯನ್ನು ಎರಡು ಭಿನ್ನ ಸಿದ್ಧಾಂತಗಳ ಜತೆ ಮುಖಾಮುಖಿಯಾಗಿಸುವುದು ನನ್ನ ಒಂದು ಕ್ರಮ. ಇಲ್ಲಿ ಮಾನ್ವಿತಾ ಭೂಮಿಯ, ನೆಲದ ಸಂಕೇತ. ತಾತನ ಜತೆ ಒಂದು ಮೌಲ್ಯಕ್ಕೆ ಅಂಟಿಕೊಂಡು ಬದುಕುವ ಕೊಂಚ ಹಠಮಾರಿ ಪಾತ್ರ. ಮಾನ್ವಿತಾಗೆ ಅಪಾರ ಜೀವನ ಪ್ರೀತಿ, ಚಡಪಡಿಕೆ ಇದೆ. ಸದಾ ಏನೋ ಹುಡುಕುತ್ತಿರುತ್ತಾಳೆ. ವಾಚಾಳಿ. ಕನ್ಸಿಸ್ಟೆನ್ಸಿ ಕೊಂಚ ಕಡಿಮೆ. ಪಾತ್ರಕ್ಕೆ ನ್ಯಾಯ ಕೊಟ್ಟಿದ್ದಾಳೆ. ಮಾನ್ವಿತಾ ಮತ್ತು ವಸಿಷ್ಠ ಇಬ್ಬರೂ ಸಿನಿಮಾ ಮಾರ್ಕೆಟಿಂಗ್‍ನಲ್ಲಿ ನನಗೆ ತುಂಬಾ ನೆರವಾಗುತ್ತಿದ್ದಾರೆ.

*ಚಿತ್ರದ ಶೀರ್ಷಿಕೆ ವಿಭಿನ್ನವಾಗಿದೆಯಲ್ಲಾ?

ಕಾದಂಬರಿಯ ಹೆಸರೇ ಚಿತ್ರದ ಶೀರ್ಷಿಕೆ ಅಂದುಕೊಂಡಿದ್ದೆವು.ನಾಲಗೆ ಹೊರಳೋದು ಕಷ್ಟ ಅಂತ ಕೆಲವರು ಆಕ್ಷೇಪಿಸಿದರು. ಎಷ್ಟೇ ಪ್ರಯೋಗಶೀಲ ಅನ್ನಿಸಿದರೂ ಸಾಮಾನ್ಯ ಪ್ರೇಕ್ಷಕನಿಗೆ ಅರ್ಥವಾಗಬೇಕು ಅನ್ನೋ ಸತ್ಯ ಮರೆಯೋ ಹಾಗಿಲ್ಲ. ಇತ್ತ ಆರ್ಟ್ ಅಲ್ಲದ ಅತ್ತ ಕಮರ್ಶಿಯಲ್ ಅಲ್ಲದ ಮಧ್ಯಮ ಮಾರ್ಗ ನನ್ನದು. ಒಂದು ರೀತಿಯಲ್ಲಿ ಕ್ಲಾಸೂ, ಮಾಸೂ ಒಟ್ಟಿಗೆ ನೋಡುವ ಸಿನಿಮಾ. ಹಾಗಾಗಿ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಅಂತ ಹೆಸರಿಟ್ಟೆ.

*ಚಿತ್ರೀಕರಣ ಹೇಗಾಯಿತು ?

ನಾನು ಬರೀ ಹಾಡಿಗಾಗಿ ವಿದೇಶಕ್ಕೆ ಹೋದವನಲ್ಲ. ನನಗೆ ಲಾಂಗ್ ಶೆಡ್ಯೂಲ್ ಅನಿವಾರ್ಯ. ತಯಾರಿ, ಚಿತ್ರೀಕರಣ ಸೇರಿ ಇಂಗ್ಲೆಂಡ್‌ನಲ್ಲಿ ನಲವತ್ತು ದಿನ. ಆದರೆ, ಕಡಿಮೆ ಸಿಬ್ಬಂದಿ. ಲಂಬವಾದ ಹಗಲು. ಸುದೀರ್ಘ ಕಾಲ ಚಿತ್ರೀಕರಣ. ಸಹಜವಾಗಿ ಒತ್ತಡಗಳು. ಒಂದೆರಡು ಸಲ ನಾನೂ ತಾಳ್ಮೆ ಕಳಕೊಂಡು ಕೂಗಾಡಿದ್ದಿದೆ. ಆದರೆ, ಅದೆಲ್ಲ ಕ್ಷಣಿಕ. ಲಂಡನ್ ಬೇಸಿಗೆಯಲ್ಲಿ ಬೆಂದು ಹೋಗುತ್ತದೆ. ನಾನೂ ಬೇಯುತ್ತಿದ್ದೆ. ಅಲ್ಲಿ ನನಗೆ ಅಪಾರ ಮಿತ್ರರಿದ್ದಾರೆ. ಅವರೆಲ್ಲ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಬ್ರಿಟಿಷರೂ ಕೂಡಾ. ವಿಲ್‍ಪ್ರೈಸ್ ಅನ್ನೊ ಗಡ್ಡಧಾರಿ ಕೆಮೆರಾಮ್ಯಾನ್ ತುಂಬಾ ಇಂಟರೆಸ್ಟಿಂಗ್ ಫೆಲೋ. ಮಾತು ಕಡಿಮೆ. ಕೆಲಸದಲ್ಲಿ ದೈತ್ಯ. ಒಂದಕ್ಷರ ಇಂಗ್ಲಿಷ್ ಬರದ ನಮ್ಮ ಹಳ್ಳಿ ಮುಕ್ಕ ಮೋಹನ್‍ನ ಕೊರಿಯೋಗ್ರಫಿ, ಒಂದಕ್ಷರ ಕನ್ನಡ ಬರದ ವಿಲ್‍ಪ್ರೈಸ್‍ನ ಫೋಟೋಗ್ರಫಿ..! ಇವೆರಡನ್ನು ನಿಭಾಯಿಸೋದೆ ಫಜೀತಿಯಾಗಿತ್ತು. ಸೋ ಫನ್ನಿ. ವಿಚಿತ್ರ ಅಂದ್ರೆ ಸಿನಿಮಾದ್ದೇ ಒಂದು ಭಾಷೆ ಇದೆ. ಅದು ಕೆಲ್ಸ ಮಾಡ್ತಿತ್ತು. ಅಲ್ಲಿ ನಾಲ್ಕು ಹಾಡುಗಳ ಚಿತ್ರೀಕರಣ. ಸುಮಲತಾ ಅಂಬರೀಷ್‌, ಪ್ರಕಾಶ್ ಬೆಳವಾಡಿ ಇದ್ದರು. ಅವರ ಜತೆಗೆ ಅನೇಕ ಬ್ರಿಟಿಷ್ ಕಲಾವಿದರು. ಗೋಪಾಲ್ ಕುಲಕರ್ಣಿ ಎಂಬ ಹೊಸ ನಟನನ್ನು ಪರಿಚಯಿಸಿದ್ದೇನೆ. ಸಿರಿ ಹಂಪಾಪುರ ಅನ್ನೋ ಬಿಬಿಸಿಯಲ್ಲಿ ಕೆಲಸಮಾಡುವ ಹೆಣ್ಣುಮಗಳೂ ಅಭಿನಯಿಸಿದ್ದಾಳೆ. ಇಂಗ್ಲೆಂಡ್ ಬಹಳ ದುಬಾರಿ ದೇಶ. ತುಂಬಾನೇ ಹಣ ವ್ಯಯ ಆಯ್ತು.

ವಶಿಷ್ಠ ಸಿಂಹ

*ನಿಮ್ಮ ಈ ಚಿತ್ರ ಏನು ಸಂದೇಶ ಕೊಡುತ್ತೆ ?

ಸಿನಿಮಾ ಒಂದು ಜಟಿಲ ಕಲೆ. ನೋಡಿದ ಮೇಲೆ ಒಂದು ಅನುಭವ ಆಗುತ್ತೆ. ಅದರಲ್ಲಿ ಅಂತರ್ಗತವಾದ ಅನೇಕ ವಿಷಯಗಳಿರುತ್ತವೆ. ಅವರವರ ಶಕ್ತ್ಯಾನುಸಾರ ಅವರು ಗ್ರಹಿಸಿ ತೆಗೆದುಕೊಂಡು ಹೋಗುತ್ತಾರೆ. ನನಗೆಲ್ಲಾ ಗೊತ್ತಿದೆ. ನೀನ್ಯಾರು ಸಂದೇಶ ಕೊಡೋದಿಕ್ಕೆ ಅನ್ನೊ ಹಮ್ಮು ಇವತ್ತಿನ ಪ್ರೇಕ್ಷಕನಿಗೆ ಇದೆ. ನನ್ನ ಮೇಷ್ಟ್ರು ಅಂತ ಕರೀತಾರೆ ಅಂತ ನಾನು ಸಿನಿಮಾದಲ್ಲೂ ಪಾಠ ಮಾಡೋಕೆ ಹೋದರೆ ಮನೆಗೆ ಕಳಿಸ್ತಾರೆ. ಸೂಚ್ಯವಾಗಿ ಹೇಳಿ ಸುಮ್ಮನಾಗಬೇಕು. ಈಗ ಎಲ್ರಿಗೆ ಎಲ್ಲವೂ ಗೊತ್ತಿದೆ. ಅಥವಾ ಆ ಭ್ರಮೆ ಇದೆ.

*ಈ ಚಿತ್ರದ ವಿಶೇಷತೆಗಳೇನು ? ಈ ಸಿನಿಮಾನ ಪ್ರೇಕ್ಷಕ ಏಕೆ ನೋಡಬೇಕು ?

ಒಂದು ವಿಶೇಷ ಅನುಭವಕ್ಕಾಗಿ ಅಂತೀನಿ. ಪ್ರೇಕ್ಷಕ ಕೂಡಾ ಹೊಸ ಅನುಭವಕ್ಕೆ ಕಾತರಿಸ್ತಾನೆ. ಅವನ ಸಿನಿಕತೆ, ಏಕತಾನತೆ, ಹತಾಶೆಗಳಿಂದ ಮುಕ್ತಗೊಳಿಸುವ ಅನುಭವ ಆಗಿರಬೇಕು. ಅದಕ್ಕೆ ರಂಜನೆಯ ಹಾದಿಯೇ ಮಾರ್ಗ. ನಾನು ರಂಜನೆ ಪ್ರಧಾನವಾಗಿಟ್ಟುಕೊಂಡರೂ ಆಳದಲ್ಲಿ ಒಂದು ಚಿಂತನೆಯ ಸೆಲೆ ಇರಿಸಿರ್ತೀನಿ. ಮೇಲ್ಪದರದಲ್ಲಿ ಸಾಗುವವರಿಗೆ ರಂಜನೆ ಸಾಕು. ಅದಕ್ಕೆ ಅದ್ಭುತವಾದ ಐದು ಹಾಡುಗಳಿವೆ. ಒಂದು ಗೀತೆ ಕನ್ನಡ ವರ್ಣಮಾಲೆಗಳ ಮೂಲಕ ಕನ್ನಡ ಕಲಿಸೋ ಹಾಡು ಈಗಾಗಲೇ ಟಿಕ್‍ಟಾಕ್ ಮೂಲಕ ವೈರಲ್ ಆಗಿದೆ. ಹಾಡ್ತಾ, ನರ್ತಿಸುತ್ತಾ ಕಲಿಯೋಕೆ ಮಕ್ಕಳಿಗೆ ಇಷ್ಟ ಆಗುತ್ತೆ. ಇನ್ನೊಂದು ದೇಶಭಕ್ತಿಯ ಹಾಡು. ಇಲ್ಲೂ ಕೂಡಾ ಟಿಪಿಕಲ್ ದೇಶಭಕ್ತಿ ಇಲ್ಲ. ಇವತ್ತಿನ ಅನೇಕ ಗೊಂದಲಗಳಿಗೆ ಪ್ರತಿಕ್ರಿಯಿಸುವಂಥ ಗೀತೆ ಇದು. ಆಳವಾಗಿ ನೋಡುವವರಿಗೆ ಇದೆಲ್ಲ ಗ್ರಹಿಕೆಗೆ ಸಿಕ್ಕೀತು. ಕಣ್ಣಿಗೂ ಕಿವಿಗೂ ಅನಂತರ ಮೆದುಳು, ಹೃದಯಕ್ಕೂ ಅಪೂರ್ವ ಅನುಭವ ಒದಗಿಸೋ ನಮ್ಮ ಸಿನಿಮಾನ ಪ್ರೇಕ್ಷಕ ಕಾಪಾಡ್ತಾನೆ ಅನ್ನೋ ಅಚಲ ವಿಶ್ವಾಸ ನನ್ನದು.ಕನ್ನಡಿಗರಿರೋ ಕೇಂದ್ರಗಳಲ್ಲಿ ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ನಾನು ‘ಅಮೆರಿಕಾ ಅಮೆರಿಕಾ’ ಚಿತ್ರದ ಮಾರುಕಟ್ಟೆಯಲ್ಲಿ ಯಾವ ಮಿಷನ್ ಆರಂಭಿಸಿದೆನೋ ಅದು ಈಗ ಫಲ ಕೊಟ್ಟಿದೆ. ಈಗ ಬಹುತೇಕ ಕನ್ನಡ ಚಿತ್ರಗಳು ಜಗತ್ತು ಮುಟ್ಟಿವೆ. ಇದೂ ಕೂಡಾ ವಿಶ್ವ ಮಾರುಕಟ್ಟೆಯಲ್ಲಿ ಪ್ರದರ್ಶನಗೊಳ್ಳುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.